ಜಾತ್ಯಾತೀತ ಪಕ್ಷ ಕೋಮುವಾದಿ ಪಕ್ಷದೊಂದಿಗೆ ವಿಲೀನ: ಶಾಸಕ ಬಾಲಕೃಷ್ಣ

KannadaprabhaNewsNetwork |  
Published : Mar 26, 2024, 01:00 AM IST
25ಕೆಆರ್ ಎಂಎನ್‌ 1.ಜೆಪಿಜಿಬಿಡದಿ ಹೋಬಳಿ ಗೋಪಹಳ್ಳಿ ಗ್ರಾಪಂ ವ್ಯಾಪ್ತಿಯ ಕರಡಿಗೌಡನದೊಡ್ಡಿ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಚ್.ಸಿ.ಬಾಲಕಷ್ಣ ಮಾತನಾಡಿದರು. | Kannada Prabha

ಸಾರಾಂಶ

ಜೆಡಿಎಸ್ ವರಿಷ್ಠರ ಏಕಾಏಕಿ ತೀರ್ಮಾನದಿಂದ ಬೇಸತ್ತಿರುವ ಮುಖಂಡರು ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದ್ದಾರೆ. ಅವರನ್ನು ಪಕ್ಷದ ಪರವಾಗಿ ನಾವು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ. ಬಿಜೆಪಿ-ಜೆಡಿಎಸ್ ನಾಯಕರಿಗೆ ಗ್ರಾಮೀಣ ಪ್ರದೇಶದ ಮತದಾರರ ಮೇಲೆ ನಂಬಿಕೆಯಿಲ್ಲ, ಹಾಗಾಗಿ ನಗರ ಪ್ರದೇಶದ ಮತದಾರರನ್ನು ನಂಬಿ ಚುನಾವಣೆ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ಹಳೆಯ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯದ ಮೇಲೆ ನಿಂತಿದ್ದ ಜೆಡಿಎಸ್ ಪಕ್ಷವನ್ನು ಮಾಜಿ ಸಿಎಂ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯವರ ಪಾದಕ್ಕಿಟ್ಟು ಸರ್ಮಪಿಸಿದ್ದಾರೆ. ಇದು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಉದ್ದೇಶವಾಗಿದೆ ಎಂದು ಶಾಸಕ ಎಚ್.ಸಿ.ಬಾಲಕಷ್ಣ ಹೇಳಿದರು.

ಬಿಡದಿ ಹೋಬಳಿ ಕರಡಿಗೌಡನದೊಡ್ಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಗೋಪಹಳ್ಳಿ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಾತ್ಯಾತೀತ ತತ್ವ-ಸಿದ್ಧಾಂತದಡಿ ಕಟ್ಟಿ ಬೆಳೆಸಿದ್ದ ಪಕ್ಷವನ್ನು ವಿಸರ್ಜಿಸಿ ಕೋಮುವಾದಿ ಪಕ್ಷದೊಂದಿಗೆ ವಿಲೀನಗೊಳಿಸುವ ನಿರ್ಧಾರ ಮಾಡಿದ್ದಾರೆ. ಇಂತಹ ಸಮಯದಲ್ಲಿ ನಿಷ್ಠಾವಂತ ಮುಖಂಡರು ಮತ್ತು ಕಾರ್ಯಕರ್ತರ ಪಾಡೇನು ಎಂದು ಪ್ರಶ್ನಿಸಿದರು.

ಜೆಡಿಎಸ್ ವರಿಷ್ಠರ ಏಕಾಏಕಿ ತೀರ್ಮಾನದಿಂದ ಬೇಸತ್ತಿರುವ ಮುಖಂಡರು ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದ್ದಾರೆ. ಅವರನ್ನು ಪಕ್ಷದ ಪರವಾಗಿ ನಾವು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ. ಬಿಜೆಪಿ-ಜೆಡಿಎಸ್ ನಾಯಕರಿಗೆ ಗ್ರಾಮೀಣ ಪ್ರದೇಶದ ಮತದಾರರ ಮೇಲೆ ನಂಬಿಕೆಯಿಲ್ಲ, ಹಾಗಾಗಿ ನಗರ ಪ್ರದೇಶದ ಮತದಾರರನ್ನು ನಂಬಿ ಚುನಾವಣೆ ಮಾಡುತ್ತಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್‌ರವರು ಸ್ವಂತ ಮಾವ ಮತ್ತು ಭಾವ ಮೈದುನ ಕಟ್ಟಿದ ಜೆಡಿಎಸ್ ಪಕ್ಷದ ಚಿಹ್ನೆಯ ಮೇಲೆ ನಂಬಿಕೆಯಿಡದೆ ಬಿಜೆಪಿಯ ಕಮಲದ ಚಿಹ್ನೆಯಲ್ಲಿ ಸ್ಪರ್ಧಿಸಿದ್ದಾರೆ. ಇದರಿಂದ ಜೆಡಿಎಸ್ ಮೇಲೆ ಅವರಿಗೆ ವಿಶ್ವಾಸವಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳ ಅವಧಿಯಲ್ಲಿ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ, ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡೆದುಕೊಂಡಿದ್ದಾರೆ. ಸರ್ಕಾರದ ಗ್ಯಾರಂಟಿಗಳು ಪಕ್ಷಾತೀತವಾಗಿ ಎಲ್ಲರನ್ನೂ ತಲುಪಿವೆ. ಹಾಗಾಗಿ ವಿರೋಧ ಪಕ್ಷದವರೂ ಕೂಡ ಕಾಂಗ್ರೆಸ್ ಸರ್ಕಾರದ ಋಣ ತೀರಿಸಬೇಕಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿ ಎಂದು ತಿಳಿಸಿದರು.

ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮಾತನಾಡಿ, ಪ್ರಧಾನಿ ಮೋದಿಯವರು ರಾಜ್ಯಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ. ಅವರ ಸ್ಥಾನದಲ್ಲಿ ಯಾರಿದ್ದರೂ ಕರ್ತವ್ಯ ಮಾಡುತ್ತಿದ್ದರು. ಮೋದಿಯವರು ಕೈಗಾರಿಕೋದ್ಯಮಿಗಳು, ಬಂಡವಾಳಶಾಹಿಗಳು ಹಾಗೂ ಪ್ರಭಾವಿಗಳ ಪರವಾಗಿಯೇ ಕೆಲಸ ಮಾಡಿದ್ದಾರೆಯೇ ವಿನಃ ರೈತರು ಮತ್ತು ಬಡವರು, ಧ್ವನಿ ಇಲ್ಲದವರಿಗೆ ಯೋಜನೆಗಳನ್ನು ರೂಪಿಸಿ ಆದಾಯ ಬರುವ ಕೆಲಸ ಮಾಡಲಿಲ್ಲ. ಜೊತೆಗೆ ಅವರು ಸುಳ್ಳು ಹೇಳಿಕೊಂಡೇ ಅಧಿಕಾರದ ಅವಧಿಯನ್ನು ಮುಗಿಸಿದರು ಎಂದು ಕಿಡಿಕಾರಿದರು.

ಇದೇ ವೇಳೆ ಶಾಸಕ ಬಾಲಕಷ್ಣರವರು ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಮಾಲೋಚನೆ ಸಭೆಗಳನ್ನು ಆಯೋಜಿಸಿ ಅಭಿಪ್ರಾಯ ಸಂಗ್ರಹಿಸಿದರು.

ಗ್ರೇಟರ್ ಬೆಂಗಳೂರು ಅಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು, ನಿರ್ದೇಶಕ ಅಬ್ಬನಕುಪ್ಪೆ ರಮೇಶ್, ಸಿ.ಎಚ್.ಪುಟ್ಟಯ್ಯ, ಬಿಡದಿ ಪುರಸಭೆ ಸದಸ್ಯ ಸಿ.ಉಮೇಶ್, ಮುಖಂಡರಾದ ಉಮಾಶಂಕರ್, ಬೆಟ್ಟಸ್ವಾಮಿ, ಉರಗಹಳ್ಳಿ ಗೋಪಾಲ್, ಸ್ವಾಮಿ, ಶಿವರಾಮಯ್ಯ, ಸಂಜೀವರೆಡ್ಡಿ, ಗೋಪಹಳ್ಳಿ ಗ್ರಾಪಂ ಅಧ್ಯಕ್ಷೆ ಕವಿತಾ ಭುಜಲಿಂಗಯ್ಯ, ಉಪಾಧ್ಯಕ್ಷ ಪ್ರಕಾಶ್, ಸದಸ್ಯರಾದ ಗೋಪಾಲ್, ರಾಧಾ ಕುಮಾರ್, ಅಪ್ಪಾಜಿಗೌಡ, ರಾಮಚಂದ್ರ, ತಿಮ್ಮಯ್ಯ, ಶ್ರೀಕಂಠಯ್ಯ, ಹುಲಿಯಪ್ಪ, ಸರೋಜನಾಗರಾಜು, ಅನಿಲ್ ಮತ್ತಿತರರು ಹಾಜರಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ