ಶಾಲಾ ಪುಟಾಣಿಯೋರ್ವಳ ಜೊತೆಗೂಡಿ ತರಳಬಾಳು ಕ್ರೀಡಾಮೇಳದ ವಸ್ತುಪ್ರದರ್ಶನ ಉದ್ಘಾಟಿಸಿದ ತರಳಬಾಳು ಶ್ರೀಗಳು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಶರೀರವನ್ನು ಸದೃಢಗೊಳಿಸುವುದರ ಜೊತೆಗೆ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಧನೆ ವಿದ್ಯಾರ್ಥಿಗಳು ಮಾಡಬೇಕು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.ಇಲ್ಲಿನ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ತರಳಬಾಳು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ತರಳಬಾಳು ಕ್ರೀಡಾಮೇಳ–2025 ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಈ ವರ್ಷದ ಕ್ರೀಡಾಮೇಳದಲ್ಲಿ ವಿದ್ಯಾರ್ಥಿಗಳು ಹಿಂದಿನ ವರ್ಷಗಳಿಗಿಂತ ಉತ್ತಮ ಸಾಧನೆ ತೋರಿರುವುದು ಶ್ಲಾಘನೀಯವಾಗಿದೆ. ದೈಹಿಕ ಶಿಕ್ಷಕರ ಶ್ರದ್ಧೆ ಹಾಗೂ ಶಿಸ್ತಿನ ತರಬೇತಿಯಿಂದ ಪಥಸಂಚಲನದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿರುವುದು ಹೆಮ್ಮೆಯವಿಷಯ ಎಂದರು.
ಯೋಗ ಹಾಗೂ ಮಲ್ಲಕಂಭ ಪ್ರದರ್ಶನಗಳನ್ನು ವೀಕ್ಷಿಸಿದಾಗ ಬಾಲ್ಯದ ನೆನಪುಗಳು ಮೂಡಿದವು. ವಿದ್ಯಾರ್ಥಿಗಳ ಅದ್ಭುತ ಸಾಧನೆ ಎಷ್ಟು ಕೊಂಡಾಡಿದರೂ ಸಾಲದು ಎಂದು ಹೇಳಿದರು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅಭಿ ಎಲ್.ಎಚ್ ಹಾಗೂ ಚಂದನ ಎಲ್.ಕೆ ಇವರ ಸಾಧನೆ ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.ಮೊಬೈಲ್ ಆಟಗಳನ್ನು ಕಡಿಮೆ ಮಾಡಿ ಮೈದಾನದಲ್ಲಿ ನಿಮ್ಮ ಪ್ರತಿಭೆ ಪ್ರದರ್ಶಿಸುವಂತೆ ಕರೆ ನೀಡಿದರು. ರಾಷ್ಟ್ರಪ್ರೇಮದ ಸಂಕೇತವಾಗಿರುವ ಕ್ರೀಡಾಪಟು ಧ್ಯಾನ್‌ಚಂದ್ ಅವರ ಸಾಧನೆಯನ್ನು ಸ್ಮರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಹೊನ್ನಪ್ಪ ಗೌಡ ಮಾತನಾಡಿ, ಶಾಲಾ ಮೈದಾನದಲ್ಲಿ ಮಾಡಿದ ಶ್ರಮವೇ ಇಂದು ರಾಷ್ಟ್ರಮಟ್ಟದ ಸಾಧನೆಗೆ ಕಾರಣವಾಗಿದೆ ಎಂದರು. ತರಳಬಾಳು ವಿದ್ಯಾಸಂಸ್ಥೆ ಪಠ್ಯದ ಜೊತೆಗೆ ಕ್ರೀಡಾಸಕ್ತಿಯನ್ನು ಬೆಳೆಸುತ್ತಿರುವುದು ಸಂತೋಷದ ಸಂಗತಿ. ವಿದ್ಯೆ ಮತ್ತು ಕ್ರೀಡೆಯನ್ನು ಸಮತೋಲನದಲ್ಲಿಟ್ಟುಕೊಂಡರೆ ರಾಷ್ಟ್ರಮಟ್ಟದ ಗುರಿ ಸಾಧಿಸಬಹುದು. ಉನ್ನತ ಸ್ಥಾನಕ್ಕೆ ಏರಬೇಕಾದರೆ ಶ್ರದ್ಧೆ ಹಾಗೂ ನಿಷ್ಠೆ ಅಗತ್ಯವಿದೆ ಎಂದು ಹೇಳಿದರು.ಕ್ರೀಡಾಮೇಳದಲ್ಲಿ ಡಾ.ನವೀನ್ ಕುಮಾರ್ ಹಾಗೂ ಡಾ.ರಂಜಿತ್ ಕುಮಾರ್ ನೇತೃತ್ವದಲ್ಲಿ ಯೋಗ ಪ್ರದರ್ಶನ, ಮಲ್ಲಕಂಭ ಪ್ರದರ್ಶನ, ಕ್ರೀಡಾ ವಸ್ತುಪ್ರದರ್ಶನ ಹಾಗೂ ಕ್ರೀಡೆಗೆ ಸಂಬಂಧಿಸಿದ ರಂಗೋಲಿ ಪ್ರದರ್ಶನ ನಡೆಯಿತು. ನಾಯಕ್ ಸುಭೇದರ್ ವಿ, ರಮಣ್ ಹಾಗೂ ಹವಾಲ್ದಾರ್ ಸುರೇಶ್ ಸಿಂಗ್ ಪಥಸಂಚಲನಕ್ಕೆ ತೀರ್ಪುಗಾರರಾಗಿದ್ದರು. ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಭಿ ಎಲ್.ಎಚ್ ಹಾಗೂ ಚಂದನ ಎಲ್.ಕೆ ಕ್ರೀಡಾಜ್ಯೋತಿ ಬೆಳಗಿಸಿದರು. ವಿದ್ಯಾಸಂಸ್ಥೆಯ ವಿಶೇಷಾಧಿಕಾರಿ ಹಾಗೂ ತರಳಬಾಳು ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ವೀರಣ್ಣ ಎಸ್.ಜತ್ತಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ (ಶಾಲಾ ಶಿಕ್ಷಣ ಇಲಾಖೆ) ಚಿದಾನಂದಸ್ವಾಮಿ ಅತಿಥಿಗಳಾಗಿ ಮಾತನಾಡಿದರು. ನಿವೃತ್ತ ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಬಿ.ಎಂ. ಚನ್ನಬಸಪ್ಪ ಇದ್ದರು. ಪ್ರಾದೇಶಿಕ ಅಧಿಕಾರಿ ಕೆ.ಇ.ಬಸವರಾಜಪ್ಪ ಸ್ವಾಗತಿಸಿದರು, ಉಮೇಶ್ ನಿರೂಪಿಸಿದರು ಹಾಗೂ ಸೋಮಶೇಖರ್ ವಂದಿಸಿದರು.
ಪಥ ಸಂಚಲನದಲ್ಲಿ ಬಹುಮನ ವಿಜೇತರು: ವಿದ್ಯಾರ್ಥಿನಿಯರ ವಿಭಾಗ: ಶ್ರೀ ತ.ಜ. ನರ್ಸರಿ ಮತ್ತು ಪ್ರೈಮರಿ ಶಾಲೆ, ಸಿರಿಗೆರೆ (ಪ್ರಥಮ ಸ್ಥಾನ), ತರಳಬಾಳು ಅನುಭವ ಮಂಟಪ ಶಾಲೆ, ಚನ್ನಗಿರಿ (ದ್ವಿತೀಯ ಸ್ಥಾನ). ಬಾಲಕರ ವಿಭಾಗ: ಅನುಭವ ಮಂಟಪ, ದಾವಣಗೆರೆ (ಪ್ರಥಮ ಸ್ಥಾನ), ಶ್ರೀ ತ.ಜ. ನರ್ಸರಿ ಮತ್ತು ಪ್ರೈಮರಿ ಶಾಲೆ, ಸಿರಿಗೆರೆ (ದ್ವಿತೀಯ ಸ್ಥಾನ)