- ಭದ್ರಾ ಅಣೆಕಟ್ಟೆ ದುರಸ್ತಿಗೆ ₹100 ಕೋಟಿ ಅನುದಾನ ನೀಡಿ: ಬಿಜೆಪಿ ಮುಖಂಡ ಬಿ.ಎಂ.ಸತೀಶ ಒತ್ತಾಯ
- - - ಕನ್ನಡಪ್ರಭ ವಾರ್ತೆ, ದಾವಣಗೆರೆರಾಜ್ಯದ ಅಣೆಕಟ್ಟೆಗಳ ಭದ್ರತೆ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಯಾವುದೇ ದೂರದೃಷ್ಟಿಯ ಯೋಜನೆಗಳನ್ನು ಕೈಗೊಂಡಿಲ್ಲ. ತಮ್ಮನ್ನು ಬಂಡೆ ಎಂದು ಹೇಳಿಕೊಳ್ಳುವ ಜಲ ಸಂಪನ್ಮೂಲ ಸಚಿವ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೂ ರೈತಪರ ಕಾಳಜಿ ಇಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಗ್ಯಾರಂಟಿ ಯೋಜನೆಗಳನ್ನೇ ಮೆಲಕು ಹಾಕುತ್ತಿರುವ ಕಾಂಗ್ರೆಸ್ ಸರ್ಕಾರವು ರಾಜ್ಯದ ರೈತರನ್ನು ದಿವಾಳಿ ಮಾಡಲು ಹೊರಟಿದೆ. ರೈತರ ಬದುಕಿಗೆ ಆಸರೆಯಾದ ಅಣೆಕಟ್ಟೆಗಳ ಭದ್ರತೆ, ರಕ್ಷಣೆ ಬಗ್ಗೆ ಕನಿಷ್ಠ ಕಾಳಜಿಯನ್ನೂ ತೋರುತ್ತಿಲ್ಲ ಎಂದರು.ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಶನಿವಾರ ರಾತ್ರಿ 12ರ ವೇಳೆ ತುಂಡಾಗಿ ಮುರಿದುಬಿದ್ದಿದೆ. ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ನದಿಗೆ ಹರಿಯುತ್ತಿದೆ. ಇದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಆಸ್ತಿ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿದೆ. ರೈತರ ಬಗ್ಗೆಯಾಗಲೀ, ಅಣೆಕಟ್ಟೆಗಳ ರಕ್ಷಣೆಗಾಗಲೀ ಕಾಂಗ್ರೆಸ್ ಸರ್ಕಾರಕ್ಕೆ ಆಸಕ್ತಿ, ಕಾಳಜಿಯೇ ಇದ್ದಂತಿಲ್ಲ ಎಂದು ದೂರಿದರು.
ಭದ್ರಾ ನೀರು ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಛೀಮಾರಿ ಹಾಕಿದರೂ ನೀರಾವರಿ ಅಧಿಕಾರಿಗಳಿಗೆ ಅದ್ಯಾವುದರ ಪರಿವೆಯೂ ಇಲ್ಲ. ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ದಾವಣಗೆರೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಎಚ್ಚೆತ್ತಿಲ್ಲ. ಒಮ್ಮೆಲೇ ಅಣೆಕಟ್ಟೆಯಿಂದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿಪಾತ್ರದ ಗ್ರಾಮಸ್ಥರು, ನಗರ, ಪಟ್ಟಣ ವಾಸಿಗಳಿಗೆ ತೊಂದರೆ ಆಗುತ್ತದೆಂಬ ಕನಿಷ್ಠ ಅರಿವು ಸಹ ಆಳುವ ಸರ್ಕಾರಕ್ಕೆ ಇಲ್ಲವಾಯಿತೆ ಎಂದು ಪ್ರಶ್ನಿಸಿದರು.ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ ಕೆರೆ-ಕಟ್ಟೆಗಳಿಗೆ ಇಂದಿಗೂ ಒಂದು ಹನಿಯಷ್ಟು ಭದ್ರಾ ನೀರು ಸಹ ಬಂದಿಲ್ಲ. ನೀರು ಇದ್ದಾಗ ಕೆರೆ-ಕಟ್ಟೆಗಳನ್ನು ತುಂಬಿಸಿಕೊಂಡರೆ ಒಂದು ಸಣ್ಣ ಕೆರೆಯು ತನ್ನ ವ್ಯಾಪ್ತಿಯ ಸುಮಾರು 300 ಕೆರೆಗಳಿಗೆ ನೀರುಣಿಸುತ್ತದೆ. ಅದೇ ಕೆರೆಯ ಸುತ್ತಲಿನ ಸುಮಾರು ಏಳೆಂಟು ಕಿಮೀ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟವು ಕುಸಿಯದು. ಆದರೆ, ಕೆರೆ- ಕಟ್ಟೆಗಳನ್ನು ತುಂಬಿಸುವ ಬಗ್ಗೆ ಆಸಕ್ತಿ ತೋರದ ಸರ್ಕಾರ ನದಿಗೆ ನೀರು ಬಿಟ್ಟು, ಕೈ ತೊಳೆದುಕೊಳ್ಳಲು ಹೊರಟಿದೆ ಎಂದು ಸತೀಶ್ ಟೀಕಿಸಿದರು.
ಡ್ಯಾಂಬಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಕಲ್ಲ. ಭದ್ರಾ ಡ್ಯಾಂ ಸಹ ಸುರಕ್ಷತೆ ಹೊಂದಿಲ್ಲ. 62 ವರ್ಷಗಳ ಹಿಂದೆ ಗಾರೆ, ಕಲ್ಲು ಸುಣ್ಣವನ್ನು ಬಳಸಿ, ಡ್ಯಾಂ ನಿರ್ಮಿಸಲಾಗಿದೆ. ಸಹಜವಾಗಿಯೇ ತಳದಲ್ಲಿ ಸೋರಿಕೆಯಾಗುತ್ತಿದೆ. ಇದಕ್ಕಾಗಿ ಸ್ಪೂಯಿಸ್ ಗೇಟ್ ಮೂಲಕ ನೀರು ಸೋರಿಕೆಯಾಗುತ್ತಿದೆ. ಸೋರಿಕೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸೂಯಿಸ್ ಗೇಟ್ ಭದ್ರತೆ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.ಬಿಜೆಪಿ ಮುಖಂಡರಾದ ಆರನೇಕಲ್ಲು ವಿಜಯಕುಮಾರ, ಶಿವರಾಜ ಪಾಟೀಲ ಇತರರು ಇದ್ದರು.
- - -ಬಾಕ್ಸ್ * ಡ್ಯಾಂ ಗೇಟ್‌ಗಳ ಸರಿಪಡಿಸಿ, ಗಟ್ಟಿಗೊಳಿಸಬೇಕುಡ್ಯಾಂ ಸುರಕ್ಷತೆಯ ಮೇಲ್ವಿಚಾರಣೆ ನಡೆಸುವ ಕೇಂದ್ರದ ಜಲ ಆಯೋಗ ಡ್ಯಾಂನ ಪುನರುತ್ಥಾನ ಮತ್ತು ಅಭಿವೃದ್ಧಿ ಯೋಜನೆಯಡಿ ಡ್ಯಾಂನ ಸುರಕ್ಷತೆಗೆ 100 ಕೋಟಿ ರು.ಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಡ್ಯಾಂ ದುರಸ್ತಿಗೆ ₹100 ಕೋಟಿ ಒದಗಿಸಲಾಗದ ಕಾಂಗ್ರೆಸ್ ಸರ್ಕಾರವು ಕರ್ನಾಟಕ ನೀರಾವರಿ ನಿಗಮದ ಮೂಲಕ ಕೇಂದ್ರ ಸರ್ಕಾರದ ಮೊರೆ ಹೋಗಿ, ಕೈಕಟ್ಟಿ ಕುಳಿತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸತೀಶ್ ಹೇಳಿದರು.
ಭದ್ರಾ ಅಣೆಕಟ್ಟೆಯ ಉಳಿವಿಗಾಗಿ ₹100 ಕೋಟಿ ಬಿಡುಗಡೆ ಮಾಡಲಾಗದಷ್ಟು ಬಡತನ ರಾಜ್ಯಕ್ಕೆ ಬಂದಿಲ್ಲ. ₹100 ಕೋಟಿ ಹಣವನ್ನು ಬಿಡುಗಡೆ ಮಾಡಿ, ರಾಜ್ಯ ಸರ್ಕಾರವೇ ಡ್ಯಾಂನ ಸುರಕ್ಷತೆಯನ್ನು ಕಾಪಾಡುವ ಕೆಲಸವನ್ನು ಮಾಡಲಿ. ಹಳೆಯದಾಗಿರುವ ಡ್ಯಾಂ ಗೇಟ್‌ಗಳನ್ನು ಸರಿಪಡಿಸಿ, ಗಟ್ಟಿಗೊಳಿಸಬೇಕು. ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿರುವ ಡ್ಯಾಂ ನಿರ್ವಹಣೆಯ ಕ್ರೇನ್‌ಗಳನ್ನು ರೀ ಕಂಡೀಷನ್ ಮಾಡಿಸಬೇಕು. ಸೇತುವೆ ಬಳಿ ಆಗಾಗ ಕುಸಿಯುವ ತಡೆಗೋಡೆಗಳನ್ನು ಸರಿಪಡಿಸಿ, ಭದ್ರಗೊಳಿಸಬೇಕು. ಡ್ಯಾಂ ಸುತ್ತಲೂ ಬೇಲಿ ನಿರ್ಮಿಸಿ, ಸುಭದ್ರತೆ ಕಾಪಾಡಬೇಕು ಎಂದರು.- - -
-11ಕೆಡಿವಿಜಿ3:ದಾವಣಗೆರೆಯಲ್ಲಿ ಬಿಜೆಪಿ ರೈತ ಮೋರ್ಚಾ ಮುಖಂಡ ಬಿ.ಎಂ. ಸತೀಶ ಕೊಳೇನಹಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.