ಕನ್ನಡಪ್ರಭ ವಾರ್ತೆ ಇಳಕಲ್ಲ
ಜಗದ್ಗುರು ದಯಾನಂದಪುರಿ ಮಹಾಸ್ವಾಮೀಜಿಗಳಂತ ಸರಳ, ವಿನಯವಂತ ಸ್ವಾಮೀಜಿಗಳನ್ನು ಪಡೆದ ದೇವಾಂಗ ಸಮಾಜದ ಬಂಧುಗಳು ನಿಜವಾಗಿಯೂ ಅದೃಷ್ಟಶಾಲಿಗಳು. ನಾನು ಸಾಕಷ್ಟು ಸ್ವಾಮೀಜಿಗಳನ್ನು ನೋಡಿದ್ದೇನೆ. ಅವರೆಲ್ಲ ದಯಾನಂದಪುರಿ ಶ್ರೀಗಳನ್ನು ನೋಡಿ ಕಲಿಯಬೇಕು ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಇಲ್ಲಿನ ಶ್ರೀಶಂಕರಿರಾಮಲಿಂಗ ದೇವಸ್ಥಾನದ ಪ್ರಾಂಗಣದಲ್ಲಿ ದೇವಾಂಗ ಸಂಘ ಇಳಕಲ್ಲ ಹಾಗೂ ನಗರದ ದೇವಲ ಮಹರ್ಷಿಗಳ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಶ್ರೀ ದೇವಲ ಮಹರ್ಷಿಗಳ 99ನೇ ಜಯಂತ್ಯುತ್ಸವದ ಅಂಗವಾಗಿ ನಡೆದ ಶ್ರೀದೇವಾಂಗ ಪುರಾಣ ಮಂಗಲ ಹಾಗೂ ಧಾರ್ಮಿಕ ಸಭೆ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನ ಎರಡು ಕಣ್ಣುಗಳಲ್ಲಿ ಒಂದು ಕಣ್ಣು ರೈತ, ಇನ್ನೊಂದು ಕಣ್ಣು ನೇಕಾರ. ಇವೆರಡರ ಮಧ್ಯದಲ್ಲಿ ದೇವಲ ಮಹರ್ಷಿಗಳು ನೆಲೆಸಿದ್ದಾರೆ. ದೇವಲ ಮಹರ್ಷಿಗಳು ಕೇವಲ ದೇವಾಂಗ ಸಮುದಾಯಕ್ಕೆ ಮಾತ್ರ ಮಾನ ಮುಚ್ಚಿಕೊಳ್ಳಲು ಬಟ್ಟೆ ನೀಡಿಲ್ಲ. ಇಡೀ ಮಾನವ ಕುಲಕ್ಕೆ ಮಾನಮುಚ್ಚಲು ಬಟ್ಟೆ ನೀಡಿದ್ದಾರೆ. ಅಂತವರ ನೂರನೇ ವರ್ಷದ ಜಯಂತ್ಯುತ್ಸವ ಮುಂದಿನ ವರ್ಷ ಪೂಜ್ಯರ ಸಮ್ಮುಖದಲ್ಲಿ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಇಳಕಲ್ಲ ನಗರದ ಇತಿಹಾಸದಲ್ಲೇ ಯಾರೂ ಕೂಡ ಮಾಡದ ಹಾಗೇ ಬಹಳ ವಿಶೇಷ ಹಾಗೂ ವಿಶಿಷ್ಟವಾಗಿ ಆಚರಿಸೋಣ. ಈ ನಮ್ಮ ಅವಧಿಯಲ್ಲಿ ಗಾರ್ಮೆಂಟ್ ಹಾಗೂ ಟೆಕ್ಸ್‌ಟೈಲ್ ಅನ್ನು ಪ್ರಾರಂಭಿಸಿ ನೇಕಾರರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದೇ ನನ್ನ ಉದ್ದೇಶ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದ ದೇವಾಂಗ ಜಗದ್ಗುರು ದಯಾನಂದಪುರಿ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ, ಉತ್ತರ ಕರ್ನಾಟಕ ಧಾರ್ಮಿಕ ಕ್ಷೇತ್ರದ ಹೆಬ್ಬಾಗಿಲು. ಉತ್ತಮ ಧಾರ್ಮಿಕ ಸಂಸ್ಕಾರ ಕೊಟ್ಟಂತ ಊರು ಇಳಕಲ್ಲ. ಹಿಂದಿನ ಹಿರಿಯರು ಉತ್ತಮ ಧಾರ್ಮಿಕ ಬುನಾದಿ ಹಾಕಿದ್ದರ ಪರಿಣಾಮ ಇಂದು ದೇವಲ ಮಹರ್ಷಿಗಳ ೯೯ನೇ ವರ್ಷದ ಜಯಂತ್ಯುತ್ಸವ ಆಚರಿಸಲು ಸಾಧ್ಯವಾಗಿದೆ. ದೇವ ಮಾನವರಿಗೆ ಮಾನ ಮುಚ್ಚಲು ವಸ್ತ್ರ ನೀಡಿದ್ದು ದೇವಲ ಮಹರ್ಷಿಗಳು, ಇಂತಹ ಸಮಾಜದಲ್ಲಿ ನಾವು ಹುಟ್ಟಿರುವುದೆ ನಮ್ಮ ಭಾಗ್ಯ. ಧರ್ಮದಲ್ಲಿ ಶಾಂತಿಯಿದೆ. ಧರ್ಮದಲ್ಲಿ ಶಕ್ತಿಯಿದೆ. ಸಮಾಜ ಬೆಳೆಯಬೇಕು. ಸಮಾಜ ಸಂಘಟಿಸಬೇಕು ಎಂದು ಆಶೀರ್ವದಿಸಿದರು.
ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ತಹಸೀಲ್ದಾರ್ ಪ್ರತಿಭಾ ಆರ್, ಬಾಗಲಕೋಟೆ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಂಗ ಸಂಘದ ಅಧ್ಯಕ್ಷ ಅಶೋಕ ಬಿಜ್ಜಲ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಚಿಂಚಮಿ, ಕಮತಗಿ ಪಪಂ ಅಧ್ಯಕ್ಷ ಬಸವರಾಜ ಕುಂಬಳಾವತಿ ಹಾಗೂ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆ ಮೇಲೆ ವೇದಮೂರ್ತಿ ಮುನಿಸ್ವಾಮೀಜಿ ದೇವಾಂಗಮಠ, ಬಾಗಲಕೋಟಟೆ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಸತೀಶ ಸಪ್ಪರದ, ಇಳಕಲ್ಲ ದೇವಾಂಗ ಸಂಘದ ಉಪಾಧ್ಯಕ್ಷ ವಾಸುದೇವ ಸಿನ್ನೂರ, ಜಯಂತ್ಯುತ್ಸವ ಸಮಿತಿ ಚೇರಮನ್ ಅಮೃತ ಬಿಜ್ಜಲ, ಕಾರ್ಯದರ್ಶಿ ನಾರಾಯಣ ಬಿಜ್ಜಲ ಇದ್ದರು.ಈ ಭಾಗದ ಶಾಸಕರಾದ ವಿಜಯಾನಂದ ಕಾಶಪ್ಪನವರ ಕೇವಲ ಲಿಂಗಾಯತರಿಗೆ ಮಾತ್ರ ಮೀಸಲಾಗಿಲ್ಲ. ಎಲ್ಲ ಸಮುದಾಯಗಳೊಂದಿಗೂ ಅನ್ಯೊನ್ಯವಾಗಿದ್ದು ಅದರಲ್ಲೂ ದೇವಾಂಗ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವ್ರ ಮುಂದಿನ ದಿನಮಾನಗಳಲ್ಲಿ ಸಚಿವರಾಗಿ ಉತ್ತಮ ಕಾರ್ಯ ನಿರ್ವಹಿಸಲಿ.
ದಯಾನಂದಪುರಿ ಶ್ರೀ, ದೇವಾಂಗ ಜಗದ್ಗುರು, ಹಂಪಿ ಹೇಮಕೂಟ ಗಾಯತ್ರಿ ಪೀಠ ಮಹಾಸಂಸ್ಥಾನ