ಕನ್ನಡಪ್ರಭ ವಾರ್ತೆ ಶಿರಾ
ಗುರುವಾರ ಬಂಗಾರಿಗೌಡನ ಹಟ್ಟಿ ಗ್ರಾಮಕ್ಕೆ ಬಂದ ಅವರು, ಹೆರಿಗೆಯಾದ ಹೆಣ್ಣು ಮಕ್ಕಳು ಎರಡು ತಿಂಗಳ ಕಾಲ ನವಜಾತ ಶಿಶುವಿನೊಂದಿಗೆ ಸಣ್ಣ ಗುಡಿಸಲು ಅಥವಾ ಕುಟೀರಗಳಲ್ಲಿ ವಾಸಿಸಬೇಕು ಹಾಗೂ ಋತುಮತಿಯಾದ ಮತ್ತು ತಿಂಗಳ ರಜೆ ಸಮಯದಲ್ಲಿ ಹೆಣ್ಣು ಮಕ್ಕಳು ಹಟ್ಟಿಯಿಂದ ಹೊರಗಿಡುವ ಬಗ್ಗೆ ಇರುವ ರೂಡಿ ಸಂಪ್ರದಾಯ ಎಂಬ ಮೂಢನಂಬಿಕೆಗಳನ್ನು ಕೈ ಬಿಡಬೇಕು. ಮಹಿಳೆಯರು ಸಹನಾಶೀಲರು ತಮ್ಮ ಮೇಲೆ ಆಗುವ ಎಲ್ಲಾ ದೌರ್ಜನ್ಯಗಳನ್ನು ಸಹ ಅವರು ಸಹಿಸಿಕೊಂಡೇ ಈವರೆಗೆ ಜೀವನ ಸಾಗಿಸುತ್ತಿದ್ದಾರೆ. ಇನ್ನಾದರೂ ಅವರನ್ನು ಸಂಕೋಲೆಗಳಿಂದ ಬಿಡಿಸಿ ಅವರನ್ನು ಸಹ ಮನುಷ್ಯರಂತೆ ನೋಡಿ ಎಂದರು. ನಾನು ಸಹ ಒಂದು ಹೆಣ್ಣು ಮಗಳು ನನಗೆ ಅವರ ಎಲ್ಲ ಕಷ್ಟಕಾರ್ಪಣ್ಯಗಳು ಅರಿವಾಗುತ್ತವೆ. ಹಾಗಾಗಿ ದೇವರು ನನಗೆ ಕೊಟ್ಟಿರುವ ಈ ಅಧಿಕಾರವನ್ನು ಅವರ ಉಪಯೋಗಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಒಂದು ಊರಿನ ಮಕ್ಕಳು ಎಂದರೆ ಅದು ಸರ್ಕಾರದ ಮಕ್ಕಳು ಸರ್ಕಾರದ ಜವಾಬ್ದಾರಿ ಅವರನ್ನು ಬೆಳೆಸುವುದಾಗಿದೆ ಹಾಗಾಗಿ ಅವರೆಲ್ಲರ ಮೇಲೆ ನಡೆಯುವ ಹಿಂಸಾಚಾರ ಮೌಢ್ಯತೆ ಮೂಲಕ ಹೇರುವ ದೌರ್ಜನ್ಯಗಳು ಸರ್ಕಾರದ ತಾಲೂಕು ಮಟ್ಟದ ಅಧಿಕಾರಿಗಳು ಬಗೆಹರಿಸಬೇಕು ಅದು ಆಗದಿದ್ದಲ್ಲಿ ನಿಮ್ಮ ಮೇಲೆಯೂ ಸಹ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಅಧಿಕಾರಿಗಳನ್ನು ಎಚ್ಚರಿಸಿದರು.ಈ ಸಂದರ್ಭದಲ್ಲಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಿಸಿದಂತೆ ಮುಟ್ಟಾದ ಹೆಣ್ಣು ಮಕ್ಕಳನ್ನು ಗ್ರಾಮದಿಂದ ಆಚೆ ಇರಿಸದಂತೆ ಬಾಣಂತಿಯರನ್ನು ಕುಟೀರಗಳಲ್ಲಿ ಜೀವಿಸುವಂತೆ ಮಾಡದಂತೆ ಗ್ರಾಮದ ಹಿರಿಯರು ಹಾಗೂ ಪೂಜಾರಿಗಳಿಂದ ಅಧ್ಯಕ್ಷರು ಗ್ರಾಮದ ದೇವಸ್ಥಾನದಲ್ಲಿ ಪ್ರಮಾಣ ಮಾಡಿಸಿದರು. ಈ ರೀತಿ ಮತ್ತೊಮ್ಮೆ ನಡೆದಿದ್ದೆ ಆದಲ್ಲಿ ನಿಮ್ಮ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಶಿರಾ ತಹಸೀಲ್ದಾರ್ ಆನಂದ್ ಕುಮಾರ್, ತಾಲೂಕ ಪಂಚಾಯತಿ ಇ ಓ ಹರೀಶ್, ಗ್ರಾಮೀಣ ಕುಡಿಯುವನೀರು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಮಂಜುಪ್ರಸಾದ್, ಶಿರಾ ಸಿಡಿಪಿಓ. ರವಿನಾಯಕ್, ಕುರುಬರಹಳ್ಳಿ ಗ್ರಾ ಪಂ ಪಿಡಿಒ ಮಹಮದ್ ಕೌಸರ್ ಅಧ್ಯಕ್ಷ, ಲಕ್ಷ್ಮಕ್ಕ ಚಿಕ್ಕಣ್ಣ, ಸದಸ್ಯ ತಿಮ್ಮಕ್ಕಕೆಂಗಣ್ಣ ಮುಖಂಡರಾದ ತಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ಕೆಂಗಣ್ಣ, ಸೇರಿದಂತೆ ಸಾವಿರಾರು ಜನ ಅಭಿಮಾನಿಗಳು ಗ್ರಾಮಸ್ಥರು ಅಂಗನವಾಡಿ ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಗ್ರಾಮಸ್ಥರು ಹಾಜರಿದ್ದರು.