ಓವರ್‌ ಲೋಡ್‌ ಟಿಪ್ಪರ್‌ ಸೀಜ್‌ ಮಾಡಿ: ಗಣೇಶ್‌ ಪ್ರಸಾದ್‌

KannadaprabhaNewsNetwork |  
Published : Mar 22, 2026, 01:30 AM IST
ಸೂಚನೆ | Kannada Prabha

ಸಾರಾಂಶ

ಓವರ್‌ ಲೋಡ್‌, ಅತಿ ವೇಗದ ಟಿಪ್ಪರ್‌ ಸಂಚಾರ ಹಾಗೂ ಪರ್ಮಿಟ್‌ ವಂಚನೆ ತಡೆಗೆ ಕಠಿಣ ಕ್ರಮಕ್ಕೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ತಾಕೀತು ಮಾಡಿದರು.

- ಅಕ್ರಮವಾಗಿ ಚಲಾಯಿಸುತ್ತಿದ್ದರೆ ಮುಲಾಜಿಲ್ಲದೇ ವಶಪಡಿಸಿಕೊಳ್ಳಲು ಸೂಚನೆ

- ಬಿಜೆಪಿ ವಿರುದ್ಧ ಕಿಡಿ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಓವರ್‌ ಲೋಡ್‌, ಅತಿ ವೇಗದ ಟಿಪ್ಪರ್‌ ಸಂಚಾರ ಹಾಗೂ ಪರ್ಮಿಟ್‌ ವಂಚನೆ ತಡೆಗೆ ಕಠಿಣ ಕ್ರಮಕ್ಕೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ತಾಕೀತು ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಗೆ ಚಿಕ್ಕತುಪ್ಪೂರು ಗೇಟ್‌ ಬಳಿ ಶಾಲಾ ವಾಹನಕ್ಕೆ ಟಿಪ್ಪರ್‌ ನಡುವೆ ಅಪಘಾತದ ಬಳಿಕ ಟಿಪ್ಪರ್‌ ಸಂಚಾರ ಇರಲಿ, ಆದರೆ ಅಕ್ರಮ ಸಾಗಾಣಿಕೆ, ಓವರ್‌ ಸ್ಪೀಡ್‌ ಹಾಗೂ ಓವರ್‌ ಲೋಡ್‌ ಹಾಗೂ ಪರ್ಮಿಟ್‌ ಇರದ ಟಿಪ್ಪರ್‌ಗಳ ಸೀಜ್‌ ಮಾಡಬೇಕು ಎಂದು ಈಗಾಗಲೇ ಪೊಲೀಸ್‌, ಆರ್‌ಟಿಒಗೆ ತಾಕೀತು ಮಾಡಿದ್ದೇನೆ ಎಂದರು.

ಟಿಪ್ಪರ್‌ಗಳಲ್ಲಿ ಅಕ್ರಮಕ್ಕೆ ಮೊದಲು ಲಗಾಮು ಹಾಕಬೇಕು. ತಪಾಸಣೆ ವೇಳೆ ಯಾರ ಶಿಫಾರಸ್ಸಿಗೂ ಒಳಗಾಗದೆ ಕೆಲಸ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಟಿಪ್ಪರ್‌ ಸಂಚಾರ ಕಳೆದ 3 ದಿನಗಳಿಂದ ಕಡಿಮೆಯಾಗಿವೆ. ಪರೀಕ್ಷೆಗಳು ಮುಗಿವ ತನಕ ಟಿಪ್ಪರ್‌ಗಳ ಮೇಲೆ ಕಣ್ಣಿಟ್ಟು, ತಪಾಸಣೆ ನಡೆಸಿ ಶಾಲಾ ಮಕ್ಕಳು ಶಾಲೆಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ತಹಸೀಲ್ದಾರ್‌, ಪೊಲೀಸರಿಗೆ ಹೇಳಿದ್ದೇನೆ ಎಂದರು.

ಕೇರಳಕ್ಕೆ ತಾಲೂಕಿನ ಖನಿಜ ಸಂಪತ್ತು ಹೋಗಬಾರದು. ನಮ್ಮ ತಾಲೂಕಿನ ಸಂಪತ್ತು ನಮ್ಮ ತಾಲೂಕಿಗೆ ಬಳಕೆಯಾಗಲಿ ಎಂಬ ವಾದವಿದೆ. ನಾನೂ ಕೂಡ ಅದನ್ನೇ ಹೇಳುತ್ತಿದ್ದೇನೆ. ಹೆಚ್ಚು ಟಿಪ್ಪರ್‌ಗಳ ಸಂಚಾರದ ಬಗ್ಗೆ ವರದಿ ಕೇಳಿದ್ದೇನೆ ಎಂದರು.

ದುರುಪಯೋಗವಿಲ್ಲ:

ನಾನೂ ಶಾಸಕ ಜೊತೆಗೆ ಕ್ರಸರ್‌ ಹಾಗೂ ಕ್ವಾರಿ ಮಾಲೀಕ. ಹಾಗಾಗಿ ಅಕ್ರಮ ನಡೆಸುತ್ತಿದ್ದಾರೆ ಎಂಬ ವಿಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿ, ವಿಪಕ್ಷದವರಿಗೆ ಅನುಮಾನವಿದ್ದರೆ ಹೋಗಿ ನೋಡಿ ಲೆಕ್ಕಾ ಹಾಕಲಿ. ಅಧಿಕಾರ ದುರುಪಯೋಗಪಡಿಸಿಕೊಳ್ಳಲ್ಲ ಎಂದು ಹೇಳಿದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡ ಪ್ರಸಾದ್‌ ಮಾತನಾಡಿ ನಮ್ಮ ಕುಟುಂಬದವರು ಶಾಸಕರಾಗುವ ಮುಂಚೆನಿಂದಲೂ ಕ್ವಾರಿ ನಡೆಸುತ್ತಿದ್ದೇವೆ. ಕ್ರಸರ್‌ ಹಾಗೂ ಎಂ. ಸ್ಯಾಂಡ್‌ ಘಟಕವೂ ಇದೆ. ಎಲ್ಲಾ ನಿಯಮ ಬದ್ಧವಾಗಿ ನಡೆಸುತ್ತೇವೆ. ಇದರಲ್ಲಿ ತಪ್ಪೇನಿದೆ ಎಂದು ವಿಪಕ್ಷದವರನ್ನು ಪ್ರಶ್ನಿಸಿದರು.

ನಮ್ಮದು ಕೃಷಿ ಕುಟುಂಬ. ನಂತರ ಉದ್ಯಮಕ್ಕೆ ಬಂದಿದ್ದೇವೆ. ರಾಜಕಾರಣ ಮಾಡುವವರು ಉದ್ಯಮ ಮಾಡಬಾರದು ಅಂತ ಇದೆಯಾ? ಸುಖಾಸುಮ್ಮನೇ ನಮ್ಮ ಕುಟುಂಬದ ಮೇಲೆ ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ತಾಕೀತು ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಡ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಮಹೇಶ್, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ. ರಾಜಶೇಖರ್‌, ಎಪಿಎಂಸಿ ಅಧ್ಯಕ್ಷ ಆರ್‌.ಎಸ್. ನಾಗರಾಜು, ಹಾಪ್‌ ಕಾಮ್ಸ್‌ ಅಧ್ಯಕ್ಷ ಎಂ. ನಾಗೇಶ್‌, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್. ಬಸವರಾಜು, ಮಾಜಿ ಉಪಾಧ್ಯಕ್ಷ ಬಂಗಾರ ನಾಯಕ, ಉದ್ಯಮಿ ರಘು ಹಾಗೂ ಅಣ್ಣಯ್ಯ ಸ್ವಾಮಿ, ಜಿ.ಕೆ. ಲೋಕೇಶ್‌, ಮಧು ಸೇರಿದಂತೆ ಹಲವರಿದ್ದರು.

---

ಶಾಲಾ ಸಮಯದಲ್ಲಿ ಟಿಪ್ಪರ್‌ ಸಂಚಾರ ನಿಲ್ಲಲಿ!

ಗುಂಡ್ಲುಪೇಟೆ: ಟಿಪ್ಪರ್‌ ಸಂಚರಿಸುವ ಆಸು ಪಾಸಿನಲ್ಲಿರುವ ಶಾಲಾ ಆರಂಭ ಹಾಗೂ ಬಿಡುವ ಒಂದೂವರೆ ಗಂಟೆ ಸಮಯದಲ್ಲಿ ಟಿಪ್ಪರ್‌ ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಹೇಳಿದರು.ಟಿಪ್ಪರ್‌ ಹಾವಳಿಗೆ ಶಾಲಾ ಆರಂಭ ಹಾಗೂ ಬಿಡುವ ಸಮಯದಲ್ಲಿ ಟಿಪ್ಪರ್‌ ಸ್ಥಗಿತಗೊಳಿಸಬೇಕು ಎಂಬ ಸಾರ್ವಜನಿಕರ ಆಗ್ರಹದ ಬೆನ್ನಲ್ಲೇ ಶಾಸಕರು ಬೆಳಗ್ಗೆ ೮.೩೦-೧೦ ಗಂಟೆ ಮಧ್ಯಾಹ್ನ ೩.೩೦-೫ ಗಂಟೆ ತನಕ ಟಿಪ್ಪರ್‌ ಓಡಾಡದಂತೆ ಕ್ರಮವಹಿಸಿ ಎಂದು ಪೊಲೀಸರಿಗೆ ತಾಕೀತು ಮಾಡಿದ್ದೇನೆ ಎಂದರು.

----

ಮಾಜಿ ಶಾಸಕ ನಿರಂಜನ್‌ಗೆ

ಗಣೇಶ್‌ ಪ್ರಸಾದ್ ತಿರುಗೇಟು

ಗುಂಡ್ಲುಪೇಟೆ: ಜಿಲ್ಲಾ ಬಿಜೆಪಿ ಕಚೇರಿ ರಿಯಲ್‌ ಎಸ್ಟೇಟ್‌ ಆಫೀಸ್‌ ಆಗಿದೆ ಎಂದು ಬಿಜೆಪಿಗರೇ ಹೇಳ್ತಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗು ಮಾಜಿ ಶಾಸಕ ಸಿ.ಎಸ್. ನಿರಂಜನ್‌ ಕುಮಾರ್‌ಗೆ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ತಿರುಗೇಟು ನೀಡಿದರು.

ಗಣೇಶ್‌ ಪ್ರಸಾದ್‌ ಉದ್ಯಮಿ ಎಂದು ಇತ್ತೀಚಗೆ ನಿರಂಜನ್ ಕುಮಾರ್‌ ಟೀಕೆಗೆ ಶಾಸಕರು ತಿರುಗೇಟು ನೀಡಿದರು. ನಾನು ಉದ್ಯಮಿಯೇ. ನೀವು ಇದೀಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದೀರಾ. ನಿಮ್ಮ ಕಚೇರಿ ರಿಯಲ್‌ ಎಸ್ಟೇಟ್‌ ಕಚೇರಿಯಾಗಿದ್ದು, ಎಲ್ಲಿ ಜಮೀನು ಸಿಗುತ್ತೇ, ಎಲ್ಲಿ ಸೈಟ್‌ ಮಾಡಬಹುದು ಎಂದು ಚರ್ಚೆಗೆ ಸೀಮಿತವಾಗಿದೆ ಎಂದು ನಿಮ್ಮ ಪಕ್ಷದ ಮುಖಂಡರೇ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಿಮ್ಮ ಕಾಲದಲ್ಲೇ ಶುರು:

ತಾಲೂಕಿನ ಕರಿ ಕಲ್ಲು ಕ್ವಾರಿಯಲ್ಲಿ ನಿರುಪಯುಕ್ತ ಕಲ್ಲನ್ನು ಕೇರಳಕ್ಕೆ ಸಾಗಿಸಲು ನೀವು ಶಾಸಕರಾಗಿದ್ದ ಕಾಲದಲ್ಲೇ ಶುರುವಾಗಿದ್ದು, ಈಗ ಸ್ವಲ್ಪ ಹೆಚ್ಚಾಗಿರಬಹುದು ಪರ್ಮಿಟ್‌ ಹಾಕಿಕೊಂಡು ನಿಯಮದಂತೆ ಹೋಗುತ್ತಿದೆ. ಪರ್ಮಿಟ್‌ ಇಲ್ಲದೆ ಹೋದರೆ ಸೀಜ್‌ ಮಾಡಿ ಎಂದು ಹೇಳಿದ್ದೇನೆ ಎಂದರು.

---೨೧ಜಿಪಿಟಿ೧

ಗುಂಡ್ಲುಪೇಟೆ ಪ್ರವಾಸಿ ಮಂದಿರದಲ್ಲಿ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಕಲ್ಯಾಣಕ್ಕಾಗಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ
ಜೀವನದ ಉನ್ನತಿಗೆ ಧರ್ಮ ಪಾಲನೆ ಮುಖ್ಯ: ರಂಭಾಪುರಿ ಶ್ರೀ