ನೀನಾಸಂನಿಂದ ರೂಪುಗೊಂಡ ಅನೇಕ ರಂಗಕರ್ಮಿಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ರಂಗಭೂಮಿಯಲ್ಲಿ ಆತ್ಮಸ್ಥೈರ್ಯವಿದೆ.
ಚಿತ್ರದುರ್ಗ: ನೀನಾಸಂನಿಂದ ರೂಪುಗೊಂಡ ಅನೇಕ ರಂಗಕರ್ಮಿಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ರಂಗಭೂಮಿಯಲ್ಲಿ ಆತ್ಮಸ್ಥೈರ್ಯವಿದೆ. ನಾಟಕಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಬಲ್ಲ ಶಕ್ತಿಯನ್ನು ರಂಗಭೂಮಿ ಹೊಂದಿದೆ ಎಂದು ಎಸ್‌ವಿಸಿಇ ಪ್ರಾಚಾರ್ಯ ಡಾ.ಜಿ.ಇ.ಭೈರಸಿದ್ದಪ್ಪ ಅಭಿಪ್ರಾಯಪಟ್ಟರು.
ರಂಗಸೌರಭ ಕಲಾ ಸಂಘದ ವತಿಯಿಂದ ನಗರದ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಿದ್ದ ಶಿಕ್ಷಣದಲ್ಲಿ ರಂಗಕಲೆ ರಂಗಭೂಮಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಪ್ರಶಿಕ್ಷಣಾರ್ಥಿಗಳು ರಂಗಭೂಮಿಯ ಆಯಾಮಗಳ ಬಗ್ಗೆ ಆಳವಾದ ಅಧ್ಯಯನ ಮಾಡಬೇಕು. ಒಂದೆರಡು ದಿನಗಳಲ್ಲಿ ರಂಗಶಿಕ್ಷಣ ಕರಗತವಾಗುವುದಿಲ್ಲ. ಬದಲಿಗೆ ನಿರಂತರ ಅಭ್ಯಾಸದಲ್ಲಿ ತೊಡಗಿದರೆ ಮಾತ್ರ ರಂಗಭೂಮಿ ಸಿದ್ಧಿಸುತ್ತದೆ. ರಂಗಭೂಮಿಯ ಶಿಸ್ತು ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ. ವರ್ತಮಾನಗಳ ಬಗ್ಗೆ ಅಪಾರವಾದ ಜ್ಞಾನ ಸಂಪಾದಿಸಬೇಕು. ಜೊತೆಗೆ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಉಪನ್ಯಾಸಕರಾದ ಎಂ.ವಿ.ಗೋವಿಂದರಾಜು, ಆರ್.ಎಸ್.ರಾಜು, ಡಾ.ಜಿ.ಬಿ.ರಾಜಪ್ಪ, ಡಾ.ಬಿ.ಚಂದ್ರಪ್ಪ, ಡಾ.ಎಲ್.ಆರ್.ಹಂಚಿನಮನಿ ಉಪಸ್ಥಿತರಿದ್ದರು. ರಂಗ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರ್ದೇಶನದಲ್ಲಿ ಮದ್ಯಪಾನ, ಬಾಲಕಾರ್ಮಿಕ, ನಿರುದ್ಯೋಗ, ವರದಕ್ಷಿಣೆ, ಮೊಬೈಲ್‍ನಿಂದಾಗುವ ದುಷ್ಪರಿಣಾಮಗಳು, ಅನಕ್ಷರತೆ, ದೇವದಾಸಿ, ಭ್ರಷ್ಟಾಚಾರ ಮುಂತಾದ ನಾಟಕಗಳನ್ನು ಪ್ರಶಿಕ್ಷಣಾರ್ಥಿಗಳು ಅಭಿನಯಿಸಿದರು. ಡಾ.ಕೆ.ಪಿ.ನಾಗಭೂಷಣಶೆಟ್ಟಿ ಸ್ವಾಗತಿಸಿದರು. ಡಾ.ಬಿ.ಸಿ.ಅನಂತರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಿಕ್ಷಣಾರ್ಥಿ ಅಪೂರ್ವ.ಪಿ ನಿರೂಪಿಸಿದರು. ವನಿತ, ಉತ್ಪಲ, ಕಾವ್ಯ ಪ್ರಾರ್ಥಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.