ಸಶಸ್ತ್ರ ಮೀಸಲು ಪಡೆ ಕ್ರೀಡಾಂಗಣದಲ್ಲಿ ಬಂದೂಕು ತರಬೇತಿ ಶಿಬಿರದ ಸಮಾರೋಪ
ನಗರದ ಸಶಸ್ತ್ರ ಮೀಸಲು ಪಡೆ ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಬಂದೂಕುಗಳನ್ನು ದುರುಪಯೋಗಪಡಿಸಿಕೊಂಡರೆ ಅವರ ವಿರುದ್ಧ ಪೊಲೀಸ್ ಇಲಾಖೆಯೊಂದಿಗೆ ಅರಣ್ಯ ಇಲಾಖೆ ಯೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.
ದೊಡ್ಡ ಜಿಲ್ಲೆಯಾಗಿ, ಪ್ರಾಕೃತಿಕವಾಗಿಯೂ ಸಂಪದ್ಭರಿತ ಜಿಲ್ಲೆಯಾಗಿದ್ದು, ಇಲ್ಲಿನ ಕೃಷಿಕರಿಗೆ ಜೀವ ಮತ್ತು ಬೆಳೆ ರಕ್ಷಿಸಿಕೊಳ್ಳಲು ಬಂದೂಕುಗಳು ಅತ್ಯವಶ್ಯಕ. ಮಲೆನಾಡಿಗರು ಬಂದೂಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಬಂದೂಕು ಎಂಬುದು ಹೆಮ್ಮೆಯ ಪ್ರತೀಕವೂ ಹೌದು ಎಂದು ಹೇಳಿದರು.ಮಲೆನಾಡಿನ ದುರ್ಗಮ ಪ್ರದೇಶಗಳ ತೋಟಗಳಲ್ಲಿ ಒಂಟಿ ಮನೆಗಳಲ್ಲಿ ವಾಸಿಸುವ ಕೃಷಿಕ ಮಾಲೀಕರಿಗೆ ಬಂದೂಕು ಆತ್ಮವಿಶ್ವಾಸ ಮೂಡಿಸುವುದರೊಂದಿಗೆ ತುರ್ತು ಸಂದರ್ಭದಲ್ಲಿ ಆಪದ್ಬಾಂಧವನಾಗಿ ರಕ್ಷಣೆ ನೀಡುತ್ತದೆ ಎಂದು ಹೇಳಿದ ಅವರು, ಇಂತಹ ಬಂದೂಕು ತರಬೇತಿ ಶಿಬಿರಗಳು ಬಂದೂಕು ಬಳಕೆ ಕೌಶಲ ಕಲಿಸುತ್ತವೆ. ಕೆಲವು ಅವಘಡಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಕಾನೂನಾತ್ಮಕ ಕ್ರಮಗಳು ಬಗ್ಗೆ ಅರಿವು ಮೂಡಿಸಲು ಸಹಕಾರಿ ಎಂದರು.
ಜಿಲ್ಲೆಯಲ್ಲಿ ದಾಖಲಾಗಿರುವ ವನ್ಯಜೀವಿ ಕಳ್ಳ ಬೇಟೆ 180 ಪ್ರಕರಣಗಳ ಪೈಕಿ ನೂರಕ್ಕೂ ಹೆಚ್ಚು ಪರವಾನಗಿ ಪಡೆದ ಬಂದೂಕುಗಳನ್ನು ಉಪಯೋಗಿಸಿರುವುದು ದುರಾದೃಷ್ಟಕರ ಎಂದು ವಿಷಾಧಿಸಿದ ಅವರು, ಜಿಲ್ಲೆಯಲ್ಲಿ ವಿದ್ಯಾವಂತರು, ಕಾನೂನಿಗೆ ಬೆಲೆ ಕೊಡುವ ಸುಸಂಸ್ಕೃತ ಜನರಿದ್ದು ಆ ಪೈಕಿ ಕೆಲವೇ ಮಂದಿಯ ದುರ್ವರ್ತನೆ ಅವರು ಶಿಕ್ಷೆ ಅನುಭವಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಮಾತನಾಡಿ, ಪೊಲೀಸ್ ಇಲಾಖೆ ಮತ್ತು ನಾಗರಿಕರ ನಡುವಿನ ಅಂತರ ಕಡಿಮೆ ಮಾಡುವುದೇ ಈ ಬಂದೂಕು ತರಬೇತಿ ಮೂಲ ಉದ್ದೇಶ ಎಂದು ಹೇಳಿದರು.
ಶಿಬಿರಾರ್ಥಿಯಾಗಿ ಭಾಗವಹಿಸಿದ ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಡಿ.ಬಿ. ಸುಜೇಂದ್ರ ಮಾತನಾಡಿ, ತರಬೇತಿ ಪಡೆದು ಖರೀದಿಸಿದ ಬಂದೂಕುಗಳಿಂದ ಪ್ರಾಣಿಗಳ ಬೇಟೆ ಮಾಡುವುದು ಮಾನವೀಯತೆ ಲಕ್ಷಣವಲ್ಲ. ವನ್ಯಜೀವಿಗಳು ನಮ್ಮ ಪರಿಸರದ ಒಂದು ಭಾಗ, ಅವುಗಳಿಗೂ ಭಾವನೆಗಳಿದ್ದು ಪ್ರಾಣಿಗಳ ಭಾವನೆ ಅರಿತು ಮನುಷ್ಯ ವರ್ತಿಸಬೇಕು ಎಂದು ಹೇಳಿದರು.