ಗಾಯತ್ರಿ ಮಂದಿರದಲ್ಲಿ ತಾಲೂಕು ವಿಪ್ರ ಮಹಿಳಾ ವೇದಿಕೆಯಿಂದ ಪ್ರಥಮ ವಾರ್ಷಿಕ ಸಮಾರಂಭ
ಕನ್ನಡಪ್ರಭ ವಾರ್ತೆ, ಕೊಪ್ಪವಿಪ್ರ ಮಹಿಳೆಯರು ಸಂಘಟನೆ ಮೂಲಕ ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಸಂಘಟನೆಯನ್ನು ಸ್ಥಾಪಿಸಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಉಪಾಧ್ಯಕ್ಷ ವೇ.ಬ್ರ.ರಾಘವೇಂದ್ರ ಭಟ್ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಗಾಯತ್ರಿ ಮಂದಿರದಲ್ಲಿ ತಾಲೂಕು ವಿಪ್ರ ಮಹಿಳಾ ವೇದಿಕೆಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವಾರ್ಷಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಪ್ರ ಸಂಘಗಳು ಸ್ವಾವ ಲಂಬನೆ, ಸಂಘಟನೆ, ಸಂಸ್ಕಾರ ಎಂಬ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸುಮಾರು ೪೦ ವರ್ಷದ ಹಿಂದೆ ಬ್ರಾಹ್ಮಣರ ಸಂಘಟನೆಗಳು ಇರಲಿಲ್ಲ. ಈಗ ಸಂಘಟನೆಗಳ ಅವಶ್ಯಕತೆ ಇದೆ. ಬ್ರಾಹ್ಮಣರಿಗೆ ಸಮಸ್ಯೆಗಳು ಬಂದಲ್ಲಿ ನಮ್ಮ ಸಂಘಟನೆ ಹೊರತಾಗಿ ಬೇರೆ ಯಾವುದೇ ರಾಜಕೀಯ ವ್ಯಕ್ತಿ, ಪಕ್ಷ, ಸರ್ಕಾರ ನೆರವಿಗೆ ಧಾವಿಸುವುದಿಲ್ಲ. ಇದರಿಂದಾಗಿ ನಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಸಂಘಟನಾತ್ಮಕ ಹೋರಾಟ ಬೇಕಾಗಿರುವುದರಿಂದ ಸಂಘಟನೆಗಳು ಸದೃಢವಾಗಬೇಕು. ವಿಪ್ರ ಮಹಿಳಾ ಸಂಘಟನೆಗಳು ಪ್ರತಿಯೊಂದು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಡೆಸುತ್ತಿದೆ ಎಂದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಚಾಲಕಿ ಡಾ.ಶುಭಮಂಗಳ ಸುನೀಲ್ ಮಾತನಾಡಿ ಧರ್ಮ ರಕ್ಷಣೆ, ಸಂಸ್ಕೃತಿ ರಕ್ಷಣೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು, ಸಂಸಾರ ನಡೆಸುವ ಹೆಣ್ಣು, ಸಮಾಜವನ್ನು ನಿಭಾಯಿಸುವ ಶಕ್ತಿ ಹೊಂದಿರುತ್ತಾರೆ. ವಿಪ್ರ ಮಹಿಳೆಯರು ಸಹ ಶಕ್ತಿವಂತರು, ಬುದ್ದಿವಂತರು ಆದ್ದರಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಸಂಘಟನೆಯನ್ನು ಇನ್ನಷ್ಟು ಗಟ್ಟಿ ಮಾಡಬೇಕು. ಮಕ್ಕಳನ್ನು ಸಂಘಟನೆ ಒಳಗೆ ಕರೆ ತರುವ ಪ್ರಯತ್ನ ಮಾಡಿದಲ್ಲಿ ಆವರಿಗೂ ಸಹ ಸಂಸ್ಕಾರ ನೀಡಲು ಸಾಧ್ಯ. ತಾಯಂದಿರು ತಮ್ಮ ಮಕ್ಕಳನ್ನು ದೇಶದ ಗಡಿ ಕಾಯಲು ಕಳುಹಿಸಲು ಮಕ್ಕಳನ್ನು ತಯಾರು ಮಾಡಬೇಕು. ಭಾರತ ಮಾತೆ ಸೇವೆ ಸಲ್ಲಿಸುವಲ್ಲಿ ಮಕ್ಕಳನ್ನು ಸಿದ್ದಪಡಿಸಿ ದೇಶದ ಕೆಲಸ ಮಾಡಿಸಬೇಕು. ವಿಪ್ರ ಸಮಾಜದವರು ಹೆಚ್ಚಾಗಿ ಮಕ್ಕಳನ್ನು ಯೋಧರನ್ನಾಗಿಸಬೇಕು ಎಂದು ಕರೆ ನೀಡಿದರು.ತಾಲೂಕು ವಿಪ್ರ ಮಹಿಳಾ ವೇದಿಕೆ ಅಧ್ಯಕ್ಷೆ ಟಿ.ವಿ ಶ್ರೀಮತಿ ನಾಗರಾಜ್ ಮಾತನಾಡಿ ವಿಪ್ರ ಮಹಿಳಾ ವೇದಿಕೆ ಸ್ಥಾಪನೆಯ ಉದ್ದೇಶ ಮತ್ತು ಅದರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ವಿಪ್ರ ಮಹಿಳಾ ವೇದಿಕೆಯ ಆಶುಭಾಷಣ, ಹೂಕಟ್ಟುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಅಖಿಲ ಕರ್ನಾಟಕ ವಿಪ್ರ ಮಹಿಳಾ ವೇದಿಕೆ ಜಿಲ್ಲಾ ಸಂಚಾಲಕಿ ಶಾಂತ ಕುಮಾರಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಡಾ. ಜಿ.ಎಸ್ ಮಹಾಬಲ್ ರಾವ್, ಕೊಪ್ಪ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆಸಕುಡಿಗೆ ಕೃಷ್ಣಮೂರ್ತಿ, ಮುಂತಾದವರು ಮಾತನಾಡಿದರು. ಎ.ಕೆ.ಬಿ.ಎಂ.ಎಸ್. ಸದಸ್ಯರಾದ ವಿಜಯರಂಗ ಕೋಟೆತೋಟ, ಪ್ರತಿಮಾ ರಾಧಕೃಷ್ಣ, ತಾಲೂಕು ವಿಪ್ರ ಮಹಿಳಾ ವೇದಿಕೆ ಅನಿತಾ ಚಂದ್ರಶೇಖರ್, ದೀಪ್ತ ಪ್ರಸನ್ನ ಮುಂತಾದವರಿದ್ದರು.