ಕನ್ನಡಪ್ರಭ ವಾರ್ತೆ ಯಾದಗಿರಿ
ಮನುಷ್ಯನಾಗಿ ಹುಟ್ಟಿಬಂದ ಬಳಿಕ ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ನಿಸ್ವಾರ್ಥ ಸೇವೆಯಲ್ಲಿಯೇ ಜೀವನದ ಸಾರ್ಥಕತೆಯಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು. ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಲಯನ್ಸ ಕ್ಲಬ್ ಆಫ್ ಯಾದಗಿರಿಯ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನುಕುಲದ ಸೇವೆ ಮಾಡುತ್ತಿರುವ ಲಯನ್ಸ್ ಕ್ಲಬ್ ಸಂಸ್ಥೆಯ ಘಟಕ ಯಾದಗಿರಿ ನಗರದಲ್ಲೂ ಅಸ್ತಿತ್ವಕ್ಕೆ ಬರುತ್ತಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಮಾತನಾಡಿ, ಯಾದಗಿರಿ ನಗರದ ಸುಶಿಕ್ಷಿತ ಹಾಗೂ ಸಮಾಜ ಸೇವಾ ಕಳಕಳಿಯುಳ್ಳ ವ್ಯಕ್ತಿಗಳು ಸೇರಿ ಹುಟ್ಟು ಹಾಕಿರುವ ಲಯನ್ಸ್ ಕ್ಲಬ್ ವತಿಯಿಂದ ಬಹಳಷ್ಟು ನಿರೀಕ್ಷೆಗಳಿದ್ದು, ಅನ್ಯ ರಾಜ್ಯದ ಗಡಿಗೆ ಹೊಂದಿಕೊಂಡಿರುವ ನಮ್ಮ ಜಿಲ್ಲೆಯ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಜಾಗೃತಿಗೆ ಕ್ಲಬ್ ಶ್ರಮಿಸಲಿ ಎಂದರು.ಮಾಜಿ ಶಾಸಕ ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿ, ಕ್ಲಬ್ ನ ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮೊಂದಿಗೆ ಸಹಕಾರ ನೀಡಲು ಸದಾ ಸಿದ್ಧ ಎಂದರು.
ಲಯನ್ಸ್ ಕ್ಲಬ್ ನ ಯಾದಗಿರಿ ಘಟಕವನ್ನು ಪ್ರತಿಷ್ಠಾಪಿಸಿದ ಲಯನ್ ಡಿಸ್ಟ್ರಿಕ್ಟ್ ಗವರ್ನರ್ ಹರಿನಾರಾಯಣ ಭಟ್ಟಡ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಸೂಲಗಿತ್ತಿ ನಿಂಗಮ್ಮ ಮಡಿವಾಳ, ಯೋಗ ಗುರು ಕೆ. ಸೋಮನಾಥರೆಡ್ಡಿ ಯಲ್ಹೇರಿ, ಶ್ರೀಸಾಯಿ ಯೋಗ ನೃತ್ಯ ಶಾಲೆಯ ಸಂಸ್ಥಾಪಕಿ ಸಂಗೀತಾ ಅಶೋಕ ಗೌಳಿ, ಮಣ್ಣಿನ ಗಣೇಶನನ್ನು ತಯಾರಿಸಿ ಮನೆಮನೆಗೆ ಉಚಿತವಾಗಿ ವಿತರಿಸಿ ಪರಿಸರ ಕಾಳಜಿ ತೋರುವ ವಿಜಯ ವಿಠಲ ಸೇವಾ ಸಮಿತಿ, ಪತ್ರಕರ್ತ ಆನಂದ, ಪ್ರತಿವಾರವು ರೋಗಿಗಳಿಗೆ ಹಾಗೂ ಹಸಿದವರಿಗೆ ಅವರ ಸ್ಥಳಕ್ಕೆ ತೆರಳಿ ಯಾವುದೇ ಪ್ರಚಾರದ ಹಂಗಿಲ್ಲದೇ ಆಹಾರ ಒದಗಿಸುತ್ತಿರುವ ಗೌರಿಗಣೇಶ ಯುವಕ ಸಂಘ ಮೈಲಾಪುರ ಅಗಸಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಲಯನ್ಸ್ ಕ್ಲಬ್ ಯಾದಗಿರಿಯ ಕಾರ್ಯದರ್ಶಿ ಡಾ. ಸಿದ್ಧರಾಜರೆಡ್ಡಿ ಕರೆಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ಡಾ. ಜಗದೀಶ ಉಪ್ಪಿನ್, ಪ್ರಾದೇಶಿಕ ಮುಖ್ಯಸ್ಥ ರಮೇಶ ರಾವ, ಯಾದಗಿರಿ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷ ಹನುಮಾನದಾಸ ಮುಂದಡಾ, ಖಜಾಂಚಿ ಮಲ್ಲಣ್ಣಗೌಡ ಹಳಿಮನಿ ಕೌಳೂರ ಸೇರಿದಂತೆ ಹಲವರಿದ್ದರು.
ಗುರುಲಿಂಗಯ್ಯ ಸ್ವಾಮಿ ಸಾಲಿಮಠ ನಿರೂಪಿಸಿದರು. ಅವಿನಾಶ ಸಿನ್ನೂರ ಧ್ವಜ ವಂದಿಸಿದರು. ಭೀಮಣ್ಣಗೌಡ ಕ್ಯಾತ್ನಾಳ ವಂದಿಸಿದರು.ಜನ ಮನ ರಂಜಿಸಿದ ಮಹಾಮನಿ ಹಾಸ್ಯ: ಲಯನ್ಸ ಕ್ಲಬ್ ನ ನೂತನ ಘಟಕದ ಪ್ರತಿಷ್ಠಾಪನಾ ಕಾರ್ಯಕ್ರಮದ ವಿಶೇಷ ಅತಿಥಿಯಾಗಿದ್ದ ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿಯವರ ಹಾಸ್ಯ ನೆರೆದಿದ್ದ ಜನರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿತು. ಹಿರಿಯ ಹಿಂದೂಸ್ಥಾನಿ ಗಾಯಕ ಶರಣಕುಮಾರ ವಠಾರ ಅವರ ಬಳಗದಿಂದ ನಡೆದ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು.