ಸ್ವಾರ್ಥವಿಲ್ಲದ ಸೇವೆ, ಶಿಸ್ತುಬದ್ಧ ಸಂಘಟನೆಯ ನೇತಾರ

KannadaprabhaNewsNetwork |  
Published : Feb 12, 2026, 01:15 AM IST
ೂ | Kannada Prabha

ಸಾರಾಂಶ

ಭಾರತೀಯ ಜನಸಂಘ ಸ್ಥಾಪಕರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಕಾರ್ಯವೈಖರಿಯು ಸ್ವಾರ್ಥವಿಲ್ಲದ ಸೇವೆ, ಶಿಸ್ತುಬದ್ಧ ಸಂಘಟನೆ ಮತ್ತು ಸಮಗ್ರ ಮಾನವತಾವಾದದ ಮೇಲೆ ನಿಂತಿತ್ತು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುಭಾರತೀಯ ಜನಸಂಘ ಸ್ಥಾಪಕರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಕಾರ್ಯವೈಖರಿಯು ಸ್ವಾರ್ಥವಿಲ್ಲದ ಸೇವೆ, ಶಿಸ್ತುಬದ್ಧ ಸಂಘಟನೆ ಮತ್ತು ಸಮಗ್ರ ಮಾನವತಾವಾದದ ಮೇಲೆ ನಿಂತಿತ್ತು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ಬುಧವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯಸ್ಮರಣೆ ಅಂಗವಾಗಿ ದಯಾಳರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿ ಮಾತನಾಡಿದ ಅವರು, ಭಾರತೀಯ ಜನಸಂಘ ಸ್ಥಾಪಕರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ ಉಪಾಧ್ಯಾಯ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದೀನದಯಾಳ್ ಅವರು ಅಪ್ಪಟ ಸರಳ ಜೀವನ ನಡೆಸಿದರು. ಅವರ ಬದುಕು ಸರಳ ಜೀವನ, ಉನ್ನತ ಚಿಂತನೆಗೆ ಮಾದರಿಯಾಗಿತ್ತು . ಈ ಶ್ರಮವೇ ಮುಂದೆ ಭಾರತೀಯ ಜನಸಂಘವು ದೇಶದ ಬಲಿಷ್ಠ ರಾಜಕೀಯ ಶಕ್ತಿಯಾಗಿ ಬೆಳೆಯಲು ಅಡಿಪಾಯವಾಯಿತು. ಇವರ ಪುಣ್ಯಸ್ಮರಣೆಯನ್ನು ಸಮರ್ಪಣಾ ದಿನವಾಗಿ ಇಂದು ಆಚರಿಸಲಾಗುತ್ತಿದೆ. ಇವರ ನಿಧನದ ನಂತರ ಭಾರತ ಸರ್ಕಾರವು ದೀನದಯಾಳ್ ಅಂತ್ಯೋದ್ಯಯ ಯೋಜನೆ ಸೇರಿದಂತೆ ಹಲವಾರು ಯೋಜನೆಗಳಿಗೆ ಇವರ ಹೆಸರಿಟ್ಟು ಗೌರವಿಸಿದೆ ಎಂದರು.

ದೀನದಯಾಳರು ಯಾವುದೇ ಅಧಿಕಾರಕ್ಕೆ ಆಸೆಪಡದೆ ಸಾಮಾನ್ಯ ಕಾರ್ಯಕರ್ತರಂತೆ ಬದುಕುತ್ತಿದ್ದರು. ರೈಲಿನಲ್ಲಿ ಮೂರನೇ ದರ್ಜೆಯ ಬೋಗಿಯಲ್ಲೇ ಪ್ರಯಾಣ ಮಾಡುತ್ತಿದ್ದರು. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ಈ ಸರಳತನ ಕಾರ್ಯಕರ್ತರಲ್ಲಿ ಇವರ ಬಗ್ಗೆ ಅಪಾರ ಗೌರವ ಮೂಡಿಸಿತ್ತು. ಯಾವುದೇ ಯೋಜನೆ ರೂಪಿಸುವಾಗ ಅಥವಾ ಕೆಲಸ ಮಾಡುವಾಗ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅದರ ಲಾಭ ಸಿಗುತ್ತದೆಯೇ ಎಂದು ಯೋಚಿಸುವುದು ಅವರ ಕೆಲಸದ ವಿಧಾನವಾಗಿತ್ತು. ಇದನ್ನೇ ಅವರು ಅಂತ್ಯೋದಯ ಎಂದು ಕರೆದರು. ಆರ್ಥಿಕ ಹಾಗೂ ಸಾಮಾಜಿಕ ಚಿಂತನೆಗಳು ಬಡವನ ಹಸಿವನ್ನು ನೀಗಿಸುವತ್ತ ಇರಬೇಕು ಎಂಬುದು ಅವರ ಗುರಿಯಾಗಿತ್ತು ಎಂದು ಜ್ಯೋತಿಗಣೇಶ್ ತಿಳಿಸಿದರು.೧೯೩೭ರಲ್ಲಿ ಸನಾತನ ಧರ್ಮ ಕಾಲೇಜಿನಲ್ಲಿ ಕಲಿಯುತ್ತಿದ್ದ ಸಮಯದಲ್ಲಿ ತಮ್ಮ ಸಹಪಾಠಿ ಬಾಲೂಜೀ ಮಹಾಶಬ್ದೆ ಎನ್ನುವವರ ಮುಖಾಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡ್ಗೆವಾರರನ್ನು ಭೇಟಿಯಾದರು. ಭೇಟಿಯಿಂದ ಸ್ಪೂರ್ತಿಯನ್ನು ಪಡೆದ ಉಪಾಧ್ಯಾಯರು ಸ್ವಯಂ ಸೇವಕನಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರಿಕೊಂಡರು ಹಾಗೂ ೧೯೪೨ರಲ್ಲಿ ಪೂರ್ಣಕಾಲಿಕ ಪ್ರಚಾರಕರಾಗಿ ನಿಯುಕ್ತರಾದರು.

೧೯೪೦ರಲ್ಲಿ ರಾಷ್ಟ್ರಧರ್ಮ ಪತ್ರಿಕೆಯನ್ನು ಪ್ರಾರಂಭಿಸಿದರು. ಬಳಿಕ ಪಾಂಚಜನ್ಯ ಹಾಗೂ ಸ್ವದೇಶ ಪತ್ರಿಕೆಗಳನ್ನು ಪ್ರಾರಂಭಿಸಿದರು. ಚಂದ್ರಗುಪ್ತ ಮೌರ್ಯ ಎಂಬ ನಾಟಕ, ಶಂಕರಾಚಾರ್ಯರ ಜೀವನಚರಿತ್ರೆಯನ್ನು ಬರೆದರು. ಡಾ. ಕೇಶವ ಬಲಿರಾಮ್ ಹೆಡ್ಗೆವಾರರ ಜೀವನಚರಿತ್ರೆಯನ್ನು ಮರಾಠಿ ಭಾಷೆಯಿಂದ ಆಂಗ್ಲ ಭಾಷೆಗೆ ಅನುವಾದಿಸಿದರು ಹೀಗೆ ಸಾಕಷ್ಟು ಜನಪರ ಕೆಲಸಗಳನ್ನು ಅವರು ಮಾಡಿದ್ದರು ಎಂದರು.

ಈ ವೇಳೆ ನಗರ ಬಿಜೆಪಿ ಅಧ್ಯಕ್ಷ ಟಿ.ಕೆ. ಧನುಷ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಮುಖಂಡರಾದ ಬನಶಂಕರಿ ಬಾಬು, ಸತ್ಯಮಂಗಲ ಜಗದೀಶ್, ವಸಂತ ಸುದರ್ಶನ್, ರೇಖಾ ಶಿವಕುಮಾರ್, ಲತಾ ಬಾಬು, ರಾಧಾ, ನಾಗರಾಜು, ನಾಗೇಂದ್ರ ಚನ್ನಬಸಪ್ಪ, ಭರತ್ ದೇವರಾಜು, ಜೈಪುರ ಶಿವರಾಜ್, ಜಗದೀಶ್, ಮಂಜುಳಾ, ಲೋಕೇಶ್, ನಾಗರತ್ನ, ಗಾಯತ್ರಿ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿ ಹಾಸಿಗೆಗಳ ತೀವ್ರ ನಿಗಾ ಘಟಕ ಲೋಕಾರ್ಪಣೆ
ಶಿವಶರಣದ ಆಶಯದಂತೆ ಸರ್ಕಾರದ ಆಡಳಿತ: ಸಚಿವ ಕೆ.ಜೆ. ಜಾರ್ಜ್‌