ಕನ್ನಡಪ್ರಭ ವಾರ್ತೆ ಉಡುಪಿ
ಭಾರತೀಯ ನೌಕಾಪಡೆಯ ಹಡಗುಗಳ ಬಗೆಗಿನ ಗೌಪ್ಯ ಮಾಹಿತಿಯನ್ನು ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಮಾರಾಟ ಮಾಡುತಿದ್ದ ಆತಂಕಕಾರಿ ಜಾಲವನ್ನು ಉಡುಪಿ ಪೊಲೀಸರು ಬೇಧಿಸಿದ್ದು, ಈಗಾಗಲೇ ಇಬ್ಬರು ದೇಶದ್ರೋಹಿ ಆರೋಪಿಗಳನ್ನು ಬಂಧಿಸಿದ್ದಾರೆ, ಇನ್ನಷ್ಟು ಆರೋಪಿಗಳಿಗೆ ಬಲೆ ಬೀಸಿದ್ದಾರೆ.ಬಂಧಿತರು ಉತ್ತರಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಅನಂತರಾಮ ಭಟ್‌ಪುರದ ನಿವಾಸಿ ರೋಹಿತ್ ಲಲ್ಲೆ (29) ಮತ್ತು ಹಮ್ಜಾಬಾದ್ ಮೈದಾನ್ ನಿವಾಸಿ ಸಂತ್ರಿ ಬರ್ಸಾತಿ (37) ಎಂದು ಗುರುತಿಸಲಾಗಿದೆ. ಅವರಿಬ್ಬರೂ ಭಾರತ ಸರ್ಕಾರ ಸ್ವಾಮ್ಯದ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದರು.ಅವರು ಕೇರಳದ ಕೊಚ್ಚಿ ಮತ್ತು ಉಡುಪಿ ಜಿಲ್ಲೆಯ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್‌ಗೆ ದುರುಸ್ತಿಗೆ ಬರುತಿದ್ದ ಭಾರತೀಯ ನೌಕಪಡೆಯ ಬಗೆಗಿನ ಮಾಹಿತಿ ಸಂಗ್ರಹಿಸಿ ಹಣಕ್ಕಾಗಿ ಜಾಲತಾಣಗಳ ಮೂಲಕ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಅವರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು, ಇದು ದೇಶದ ಭದ್ರತೆಗೆ ಸಂಬಂಧಿಸಿದ ಪ್ರಕರಣವಾದ್ದರಿಂದ ಕೇಂದ್ರ ಸರ್ಕಾರದ ಗಮನನಕ್ಕೆ ತಂದಿದ್ದು, ರಾಷ್ಟ್ರೀಯ ಏಜೆನ್ಸಿಯಿಂದ ತನಿಖೆಯಾಗುವ ಸಾಧ್ಯತೆ ಇದೆ. ಪ್ರಕರಣದ ವಿವರ:
ಆರೋಪಿಗಳಿಬ್ಬರು ಸುಷ್ಮಾ ಮೇರಿನ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯ ಮೂಲಕ ಕೇರಳದ ಕೊಚ್ಚಿಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್‌ಗೆ ಗುತ್ತಿಗೆ ಆಧಾರದಲ್ಲಿ ಇನ್ಸುಲೆಟರ್ ಕೆಲಸಕ್ಕೆ ಸೇರಿದ್ದರು, ಅವರಲ್ಲಿ ಪ್ರಸ್ತುತ ರೋಹಿತ್ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಘಟಕಕ್ಕೆ ವರ್ಗಾವಣೆಗೊಂಡು, ಇಲ್ಲಿ ಕೆಲಸ ಮಾಡುತ್ತಿದ್ದ.ಇತ್ತೀಚೆಗೆ ರೋಹಿತ್ ನ ಗೌಪ್ಯ ಚಟುವಟಿಕೆಗಳ ಬಗ್ಗೆ ಸಂಶಯಗೊಂಡ ಮಲ್ಪೆ ಘಟಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನ.19ರಂದು ಉಡುಪಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣ ಕೈಗೆತ್ತಿಕೊಂಡ ಡಿವೈಎಸ್ಪಿ ಡಾ. ಹರ್ಷಾ ಪ್ರಿಯಂವದ ಅವರು ಇಬ್ಬರನ್ನು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗೊಳಪಡಿಸಿದಾಗ ಕಳೆದೆರಡು ವರ್ಷಗಳಿಂದ ಅವರಿಬ್ಬರೂ ಕೊಚ್ಚಿಯಿಂದಲೇ ಈ ದೇಶದ್ರೋಹಿ ಕೃತ್ಯ ನಡೆಸುತ್ತಿದ್ದರು. ಇತ್ತೀಚೆಗೆ ರೋಹಿತ್ ಮಲ್ಪೆಗೆ ವರ್ಗಾವಣೆಯಾದ ಮೇಲೆ ಇಲ್ಲಿಂದಲೂ ನೌಕಪಡೆಯ ಹಡಗುಗಳ ಗೌಪ್ಯ ಮಾಹಿತಿ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಸಂತ್ರಿ ಕೊಚ್ಚಿನ್‌ನಿಂದ ಗೌಪ್ಯ ಮಾಹಿತಿಯನ್ನು ರೋಹಿತ್‌ಗೆ ನೀಡುತ್ತಿದ್ದ, ರೋಹಿತ್ ಅದನ್ನು ಶತ್ರುದೇಶಗಳಿಗೆ ತಲುಪಿಸುತಿದ್ದ. ಇಬ್ಬರ ಖಾತೆಗಳಿಗೂ ಭಾರೀ ಪ್ರಮಾಣದಲ್ಲಿ ಹಣ ಜಮೆ ಆಗಿರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ.ಶಿಪ್‌ಯಾರ್ಡ್‌ಗೆ ಬರುತ್ತಿದ್ದ ನೌಕಾಪಡೆಯ ಹಡಗುಗಳ ಸಂಖ್ಯೆ, ತಾಂತ್ರಿಕ ಮಾಹಿತಿ, ಸಾಮರ್ಥ್ಯ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿ, ಅವುಗಳನ್ನು ವಾಟ್ಸಾಪ್ ಮತ್ತು ಫೇಸ್ ಬುಕ್‌ಗಳ ಮೂಲಕ ಸಂಬಂಧಿಸಿದವರಿಗೆ ತಲುಪಿಸುತ್ತಿದ್ದರು. ಈ ಮಾಹಿತಿಯನ್ನು ಅವರು ಭಾರತದ ಪ್ರಮುಖ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಮಾರಾಟ ಮಾಡುತಿದ್ದರು ಎನ್ನಲಾಗುತ್ತಿದ್ದರೂ, ಖಚಿತವಾಗಿ ಯಾವ ದೇಶಕ್ಕೆ ಮಾರಾಟ ಮಾಡುತ್ತಿದ್ದರು ಎಂಬುದು ಹೆಚ್ಚಿನ ತನಿಖೆಯಿಂದ ಬಹಿರಂಗವಾಗಬೇಕಾಗಿದೆ. ಜೊತೆಗೆ ಇವರಿಬ್ಬರ ಜೊತೆಗೆ ಇನ್ನೂ ಹಲವು ದೇಶದ್ರೋಹಿಗಳು ಶಾಮೀಲಾಗಿದ್ದು, ಅವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಆರೋಪಿಗಳನ್ನು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿ. 3ರವರಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೂ ಹೆಚ್ಚಿನ ತನಿಖೆ ನಡೆಸಬೇಕಾಗಿರುವುದರಿಂದ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗುತ್ತಿದೆ.ಆರೋಪಿಗಳ ಮೇಲೆ ಭಾ.ನ್ಯಾ.ಸಂ. ಪ್ರಕಾರ ಕಲಂ 152 (ದೇಶದ ಸಮಗ್ರತೆ, ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವ ಕೃತ್ಯ), ಕಲಂ 3 ಮತ್ತು 5 (ಪ್ರತ್ಯಕ್ಷ - ಪರೋಕ್ಷವಾಗಿ ಸಂಚಿನಲ್ಲಿ ಭಾಗಿ) ಮತ್ತು ಅಧಿಕೃತ ಗೌಪ್ಯತಾ ಕಾಯ್ದೆ 1923 ರನ್ವಯ ಪ್ರಕರಣಗಳನ್ನು ದಾಖಲಿಸಲಾಗಿದೆ.
ಕೊಚ್ಚಿನ್ ಶಿಪ್‌ಯಾರ್ಡ್...ಕೊಚ್ಚಿನ್ ಶಿಪ್‌ಯಾರ್ಡ್ ಕೇಂದ್ರ ಸರ್ಕಾರದ ಬಂದರು ಮತ್ತು ಜಲಸಾರಿಗೆ ಇಲಾಖೆಯ ಅಧೀನದಲ್ಲಿರುವ ಸಂಸ್ಥೆ. ಇದು ಭಾರತೀಯ ನೌಕಪಡೆಯ ಮಧ್ಯಮ ಗಾತ್ರದ ಹಡಗು ಮತ್ತು ಟಗ್‌ಗಳನ್ನು ನಿರ್ಮಿಸುವ ಮತ್ತು ದುರಸ್ತಿಯ ಕೆಲಸ ಮಾಡುತ್ತಜೆ. ಜೊತೆಗೆ ದೇಶ ವಿದೇಶದ ಖಾಸಗಿ ಸಂಸ್ಥೆಗಳಿಗೂ ಪ್ರವಾಸಿ, ವಾಣಿಜ್ಯ, ಸರಕು ಸಾಗಾಟದ ನೂರಾರು ಕೋಟಿ ರು,. ಬೆಲೆ ಬಾಳುವ ಹಡಗುಗಳನ್ನು ನಿರ್ಮಾಣ ಮಾಡುತ್ತಿದೆ. ಕೇಂದ್ರ ಕಚೇರಿ ಕೇರಳದ ಕೊಚ್ಚಿಯಲ್ಲಿದ್ದು, ಮಲ್ಪೆಯಲ್ಲಿ ಶಾಖೆ ಕಾರ್ಯಾಚರಿಸುತ್ತಿದೆ.
..................ಇನ್ನಷ್ಟು ಮಂದಿ ಶಾಮೀಲು...ಪ್ರಸ್ತುತ ಈ ಇಬ್ಬರನ್ನು ಬಂಧಿಸಲಾಗಿದ್ದು, ಇದರಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿರುವ ಮಾಹಿತಿ ಇದೆ. ಈ ಮಾಹಿತಿ ಮಾರಾಟದಲ್ಲಿ ನಡೆದಿರುವ ಹಣದ ವರ್ಗಾವಣೆಯ ಬಗ್ಗೆ, ಯಾವೆಲ್ಲಾ ಮಾಹಿತಿ ಮತ್ತು ಯಾರಿಗೆ ಹಂಚಿದ್ದಾರೆ ಎನ್ನವುವ ಬಗ್ಗೆ ಹಾಗೂ ಇನ್ನೂ ಎಷ್ಟು ಮಂದಿ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬುದು ಹೆಚ್ಚಿನ ತನಿಖೆಯಿಂದ ಬಹಿರಂಗವಾಗಬೇಕಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.