ನ್ಯಾಯಾಧೀಶ ರವೀಂದ್ರ ಹೆಗಡೆ । ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ’ ಉದ್ಘಾಟನೆ
ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವಂತೆ ಮನುಷ್ಯರನ್ನೇ ಮಾರಾಟ ಮಾಡುವ ಅಮಾನವೀಯ ಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ ಕಳವಳ ವ್ಯಕ್ತಪಡಿಸಿದರು.
ನಗರಸಭೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ’ ಉದ್ಘಾಟಿಸಿ ಮಾತನಾಡಿ ಕೂಲಿ ಕೆಲಸದ ನೆಪದಲ್ಲಿ ಹಾಗೂ ಬಡತನದ ದುರ್ಲಾಭ ಪಡೆದು ಅಪ್ರಾಪ್ತರನ್ನು, ಯುವಕರನ್ನು ಬೇರೆಡೆಗೆ ಕಳುಹಿಸುವ ಘಟನೆಗಳು ನಡೆಯುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಂತೂ ಇದೊಂದು ದೊಡ್ಡ ದಂಧೆಯಾಗಿ ಬೆಳೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.ಹೆಚ್ಚಿನ ಶಿಕ್ಷಣ ಪಡೆಯದ ಯುವಕರಿಗೆ ವಿದೇಶಗಳಲ್ಲಿ ತಿಂಗಳಿಗೆ ಲಕ್ಷಾಂತರ ರು. ಸಂಬಳ ಕೊಡಿಸುವುದಾಗಿ ಆಮಿಷ ಒಡ್ಡಿ ವಂಚಿಸಲಾಗುತ್ತಿದೆ. ಥೈಲ್ಯಾಂಡ್, ಮ್ಯಾನ್ಮಾರ್ ಮುಂತಾದ ದೇಶಗಳಿಗೆ ಕರೆದೊಯ್ದು, ಮೊಬೈಲ್ ಕಸಿದುಕೊಂಡು, ವೀಸಾ-ಪಾಸ್‌ಪೋರ್ಟ್ ಇಲ್ಲದೆ ಅಕ್ರಮವಾಗಿ ಗಡಿ ದಾಟಿಸಿ ಬಲವಂತವಾಗಿ ಕೆಲಸಕ್ಕೆ ದೂಡಲಾಗುತ್ತಿದೆ. ಅಂತಹ ಜಾಲಕ್ಕೆ ಸಿಲುಕಿದಾಗ ವಿದೇಶಿ ಜೈಲು ಸೇರುವ ಅಥವಾ ಅಪರಾಧ ಕೃತ್ಯಗಳಿಗೆ ಬಲಿಯಾಗುವ ಅಪಾಯವಿರುತ್ತದೆ. ದಿ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಜಾಕಿ’ ಚಿತ್ರದಲ್ಲಿ ತೋರಿಸಿದಂತೆ ಕಂಟೈನರ್‌ಗಳಲ್ಲಿ ಮನುಷ್ಯರ ಕಳ್ಳಸಾಗಣೆ ನಿಜ ಜೀವನದಲ್ಲೂ ನಡೆಯುತ್ತಿದೆ ಎಂದು ವಿವರಿಸಿದರು.
ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಮಾತನಾಡಿ, ಮಾನವ ಕಳ್ಳಸಾಗಾಣಿಕೆ ತರಕಾರಿ ಮಾರಾಟದಷ್ಟೇ ಸುಲಭವಾಗಿ ಜೀವಗಳನ್ನು ಮಾರಾಟ ಮಾಡುವ ಕ್ರೂರ ವ್ಯವಸ್ಥೆ. ಸಮಾಜದಲ್ಲಿ ಇದರ ವಿರುದ್ಧ ತೀವ್ರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಮಾನವ ಕಳ್ಳಸಾಗಣೆ ತಡೆ ಸಂಬಂಧಿತ ಕಾಯ್ದೆ ಮತ್ತು ಕಾನೂನುಗಳ ಕುರಿತು ಉಪನ್ಯಾಸ ನೀಡಿದರು.
ಮಾನವ ಕಳ್ಳಸಾಗಾಣಿಕೆ ಎಂದರೆ ಕೇವಲ ಅಪಹರಣ ಮಾತ್ರವಲ್ಲ. ಬಡತನ ಹಾಗೂ ಸಾಮಾಜಿಕವಾಗಿ ದುರ್ಬಲರಾಗಿರುವ ಹೆಣ್ಣುಮಕ್ಕಳಿಗೆ ’ದುಬೈ ಅಥವಾ ವಿದೇಶಗಳಲ್ಲಿ ಕೆಲಸ ಕೊಡಿಸುವುದಾಗಿ’ ನಂಬಿಸಿ ಮದುವೆ ಮಾಡುವುದು, ಪ್ರೀತಿ-ಪ್ರೇಮದ ಬಲೆಗೆ ಬೀಳಿಸಿ ಹೆತ್ತವರಿಂದ ದೂರ ಕರೆದೊಯ್ದು ಮುಂಬೈನಂತಹ ಮಹಾನಗರಗಳಲ್ಲಿ ಮಾರಾಟ ಮಾಡುವುದು ಕೂಡ ಇದರ ಭಾಗವೇ ಆಗಿದೆ.