ಪಡಿತರ ಕಾಳಸಂತೆಯಲ್ಲಿ ಮಾರಾಟ: ಗ್ಯಾರಂಟಿ ಯೋಜನೆ ಸದಸ್ಯನಿಂದಲೇ ಆರೋಪ

KannadaprabhaNewsNetwork |  
Published : Feb 08, 2026, 03:00 AM IST
ಹೂವಿನಹಡಗಲಿಯ ತಾಪಂ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಯೋಜನೆಯ ಅಧ್ಯಕ್ಷ ಪಿ.ಟಿ.ಭರತ್‌. | Kannada Prabha

ಸಾರಾಂಶ

ನಾವು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮವಿಲ್ಲ.

ಹೂವಿನಹಡಗಲಿ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯ ಪಡಿತರ ಅಕ್ಕಿ, ರಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಈ ಕುರಿತು ಆಹಾರ ಇಲಾಖೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದು ಯೋಜನೆಯ ಸದಸ್ಯ ಎಂ.ಗುಡುದಯ್ಯ ಆರೋಪಿಸಿದ್ದಾರೆ.

ಇಲ್ಲಿನ ತಾಲೂಕು ಪಂಚಾಯಿತಿ ರಾಜೀವಗಾಂಧಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ, ಅಧ್ಯಕ್ಷ ಪಿ.ಟಿ. ಭರತ್‌ ಅಧ್ಯಕ್ಷತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸೊಸೈಟಿಯಲ್ಲಿ ವಿತರಣೆ ಮಾಡುತ್ತಿರುವ ಪಡಿತರ ಅಕ್ಕಿ ಮತ್ತು ರಾಗಿ ಬಹಿರಂಗವಾಗಿ ಹಾಡುಹಗಲೇ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ನಾವು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮವಿಲ್ಲ. ಈ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಂಡು ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಈ ಕುರಿತು ಸ್ಪಂದಿಸಿದ ಪಂಚ ಗ್ಯಾರಂಟಿ ಯೋಜನೆಯ ರಾಜ್ಯಾಧ್ಯಕ್ಷ ಎಚ್‌.ಎಂ. ರೇವಣ್ಣ, ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು. ಅಕ್ರಮ ಕಂಡು ಬಂದಲ್ಲಿ ದಾಳಿ ನಡೆಸಿ, ಕ್ರಮ ಕೈಗೊಳ್ಳಲು ಸೂಚಿಸಿದರು.

ಈ ವೇಳೆ ಸದಸ್ಯರೊಬ್ಬರು, ಹಳ್ಳಿಗಳಲ್ಲಿ ರಾತ್ರಿ ವೇಳೆ ಪದೇಪದೇ ಕರೆಂಟ್‌ ಕೈ ಕೊಡುತ್ತಿದೆ. ನಿರಂತರ ಜ್ಯೋತಿ ವಿದ್ಯುತ್‌ ತಂತಿಗಳಿಗೆ ರೈತರು ಅಕ್ರಮವಾಗಿ ಕೊಂಡಿ ಹಾಕಿ ಮೋಟರ್‌ಗಳನ್ನು ಆನ್‌ ಮಾಡುತ್ತಾರೆ. ಇದರಿಂದ ಹಳ್ಳಿಗಳಲ್ಲಿ ಕರೆಂಟ್‌ ಸಮಸ್ಯೆಯಾಗುತ್ತಿದೆ. ವಿದ್ಯಾರ್ಥಿಗಳ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಕೂಡಲೇ ಈ ಕುರಿತು ಜೆಸ್ಕಾಂ ಅಧಿಕಾರಿಗಳು ನಿಗಾ ವಹಿಸಿ ಅಕ್ರಮಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದಾಗ, ಅಧ್ಯಕ್ಷ ಪಿ.ಟಿ. ಭರತ್‌ ಧ್ವನಿಗೂಡಿಸಿ, ಸದಸ್ಯರ ಆರೋಪಕ್ಕೆ ತಾವು ತಕ್ಷಣ ಕಾರ್ಯ ಪ್ರವೃತ್ತರಾಗಬೇಕು. ಇಂತಹ ಘಟನೆ ಪದೇಪದೇ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗೆ ಸೂಚಿಸಿದರು.

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಮೃತರಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಪತ್ತೆ ಮಾಡಿ, ಬ್ಯಾಂಕ್‌ಗೆ ಪಾವತಿಯಾಗಿರುವ ಹಣವನ್ನು ಮತ್ತೆ ಸರ್ಕಾರಕ್ಕೆ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು. ಇದರಿಂದ ರಾಜ್ಯದಲ್ಲಿ ಸಾವಿರಾರು ಕೋಟಿ ರು. ಪೋಲಾಗುತ್ತಿದೆ. ಇದನ್ನು ತಡೆ ಗಟ್ಟಿದರೆ ಇನ್ನೊಂದು ಯೋಜನೆಗೆ ಅನುದಾನ ಬಳಕೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ರಾಜ್ಯಾಧ್ಯಕ್ಷ ಎಚ್‌.ಎಂ. ರೇವಣ್ಣ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಆಹಾರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸರ್ವೇ ಮಾಡಿ, ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷ ಪಿ.ಟಿ. ಭರತ್‌ ಸೂಚಿಸಿದರು.

ಶಕ್ತಿ ಯೋಜನೆಯಲ್ಲಿ ಸಾಕಷ್ಟು ಮಹಿಳೆಯರು ಪ್ರಯೋಜನೆ ಪಡೆಯುತ್ತಿದ್ದಾರೆ. ಆದರೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ಲಭ್ಯತೆ ಇಲ್ಲ. ಗ್ರಾಮೀಣ ಸಾರಿಗೆ ಸಂಚರಿಸುವ ಬಸ್ಸಿನಲ್ಲಿ 160 ರಿಂದ 180 ಪ್ರಯಾಣಿಸುತ್ತಿದ್ದಾರೆ. ಇದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಕೂಡಲೇ ಸಾರಿಗೆ ವ್ಯವಸ್ಥಾಪಕರು ಬಸ್ಸಿನ ಕೊರತೆ, ಪ್ರಯಾಣಿಕರ ಸಂಖ್ಯೆ ಸೇರಿದಂತೆ ಇತರೆ ಮಾಹಿತಿ ಸಭೆಗೆ ಕೊಡಿ, ತಾವು ಬಸ್ಸಿನ ಬೇಡಿಕೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆಂದು ಅಧ್ಯಕ್ಷರು ಹೇಳಿದರು.

ಈ ಸಂದರ್ಭದಲ್ಲಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಗುರುವಿನ ರಾಜಣ್ಣ, ತಾಪಂ ಇಒ ಜಿ.ಪರಮೇಶ್ವರ ಸೇರಿದಂತೆ ಯೋಜನೆಯ ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆವಿಮೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ: ಉಮೇಶ ಮರ್ಚಪ್ಪನವರ
ಕೆಡಿಸಿಸಿ ಎಲ್ಲ ನಿರ್ದೇಶಕ ಮತ ಎಣಿಕೆ ಪೂರ್ಣ: 16ಕ್ಕೆ ನೂತನ ಆಡಳಿತ ಮಂಡಳಿ ರಚನೆ ಸಾಧ್ಯತೆ