ಹಿರಿಯರಿಗೆ ಕಾನೂನಿನ ಅರಿವು, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ

KannadaprabhaNewsNetwork |  
Published : Aug 20, 2026, 01:15 AM IST
ವಡಗೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. | Kannada Prabha

ಸಾರಾಂಶ

ಹಿರಿಯ ನಾಗರಿಕರು ತಮ್ಮ ಹಕ್ಕುಗಳು ಮತ್ತು ಸರ್ಕಾರದಿಂದ ದೊರೆಯುವ ಸಕಲ ಸೌಲಭ್ಯಗಳು ಹಾಗೂ ಕಾನೂನು ರಕ್ಷಣೆಯ ಕುರಿತು ಸಂಪೂರ್ಣ ಅರಿವು ಹೊಂದುವುದರ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಶರಣಗೌಡ ಪಾಟೀಲ್ ಕ್ಯಾತಾನಾಳ ಹೇಳಿದರು.

- ಕಾರ್ಯಕ್ರಮ ಉದ್ಘಾಟಿಸಿ ಶರಣಗೌಡ ಪಾಟೀಲ್ ಸಲಹೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಹಿರಿಯ ನಾಗರಿಕರು ತಮ್ಮ ಹಕ್ಕುಗಳು ಮತ್ತು ಸರ್ಕಾರದಿಂದ ದೊರೆಯುವ ಸಕಲ ಸೌಲಭ್ಯಗಳು ಹಾಗೂ ಕಾನೂನು ರಕ್ಷಣೆಯ ಕುರಿತು ಸಂಪೂರ್ಣ ಅರಿವು ಹೊಂದುವುದರ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಶರಣಗೌಡ ಪಾಟೀಲ್ ಕ್ಯಾತಾನಾಳ ಹೇಳಿದರು.

ವಡಗೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಯಾದಗಿರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಉಚಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕರಿಗೆ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕು ಇದೆ.ಅವರ ಹಕ್ಕುಗಳಿಗೆ ಧಕ್ಕೆ ಉಂಟಾ ದಾಗ ಅಥವಾ ಕುಟುಂಬ ಹಾಗೂ ಸಮಾಜದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದಾಗ ಮೌನವಾಗಿರದೆ ಕಾನೂನು ನೆರವು ಪಡೆಯಬೇಕು. ಹಿರಿಯ ನಾಗರಿಕರ ರಕ್ಷಣೆಗಾಗಿ ಸರ್ಕಾರ ವಿವಿಧ ಕಾನೂನುಗಳು ಹಾಗೂ ಸೌಲಭ್ಯಗಳನ್ನು ಜಾರಿಗೊಳಿಸಿದ್ದು, ಅವುಗಳ ಪ್ರಯೋಜನ ಪಡೆದುಕೊಳ್ಳಲು ಅಗತ್ಯವಾದ ಮಾಹಿತಿ ಪ್ರತಿಯೊಬ್ಬ ಹಿರಿಯ ನಾಗರಿಕರಿಗೂ ತಲುಪಬೇಕು ಎಂದರು.

ಹಿರಿಯ ನಾಗರಿಕರು ತಮ್ಮ ಹಕ್ಕುಗಳ ಉಲ್ಲಂಘನೆಯಾದ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆ,ಕಾನೂನು ಸೇವಾ ಪ್ರಾಧಿಕಾರ ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿ ಉಚಿತ ಕಾನೂನು ನೆರವು ಪಡೆಯಬಹುದು ಎಂದು ತಿಳಿಸಿದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಗುತ್ತೇದಾರ ಮಾತನಾಡಿ, ವಯಸ್ಸಾದಂತೆ ದೇಹದಲ್ಲಿ ವಿವಿಧ ರೀತಿಯ ಬದಲಾವಣೆಗಳು ಕಂಡುಬರುವುದು ಸಹಜ.ಆದರೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಗಳನ್ನು ನಿರ್ಲಕ್ಷ್ಯ ಮಾಡದೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಚಿತ ನೇತ್ರ ತಪಾಸಣೆ ಕನ್ನಡಕ ವಿತರಣೆ ಕಾರ್ಯಕ್ರಮದ ಅಂಗವಾಗಿ ಆಗಮಿಸಿದ್ದ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣೆ ನಡೆಸಲಾಯಿತು. ನೇತ್ರಾಧಿಕಾರಿ ಶ್ರೀನಿವಾಸ್ ಅವರು ಹಿರಿಯ ನಾಗರಿಕರ ಕಣ್ಣುಗಳನ್ನು ಪರೀಕ್ಷಿಸಿ ದೃಷ್ಟಿ ಸಮಸ್ಯೆ ಇರುವವರನ್ನು ಗುರುತಿಸಿದರು. ಸಮೀಪ ದೃಷ್ಟಿದೋಷ ಕಂಡುಬಂದ ಅರ್ಹ ಹಿರಿಯ ನಾಗರಿಕರಿಗೆ ‘ಆಶಾಕಿರಣ’ ಕಾರ್ಯಕ್ರಮದಡಿ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ಪ್ರಕಾಶ ಹೊಸಮನಿ,ನೇತ್ರಾಧಿಕಾರಿ ಶ್ರೀನಿವಾಸ್,ನಿವೃತ್ತ ಶಿಕ್ಷಕ ಸಿದ್ದಪ್ಪ ಬಬಲಾದ, ಎ ಪಿ ಡಿ ಸಂಸ್ಥೆಯ ತಾಲೂಕು ಸಂಯೋಜಕ ರಮೇಶ್ ಕಟ್ಟಿಮನಿ, ವೈದ್ಯಕೀಯ ಸಿಬ್ಬಂದಿ, ತಾಲೂಕಿನ ಹಿರಿಯ ನಾಗರಿಕರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.

-

19ವೈಡಿಆರ್7 : ವಡಗೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.

---000---

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಚಾರ ನಿಯಮ ಭಂಜಕರಿಗೆ ಕಾದಿದೆ ಭಾರಿ ದಂಡ!
ಫಾರ್ಮರ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ರೋಗಿಗಳಿಗೆ ವರದಾನ: ನಂಜಾವಧೂತ ಶ್ರೀ