Heavy fines await traffic rule violators!

- ಪೊಲೀಸ್‌ ಕಮಿಷನರ್‌ ಶರಣಪ್ಪ ಖಡಕ್‌ ಎಚ್ಚರಿಕೆ । ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಸವಾರರ ಮೇಲೆ ಕಠಿಣ ಕ್ರಮ

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದಲ್ಲಿ ಸ್ಮಾರ್ಟ್‌ ಕ್ಯಾಮೆರಾಗಳ ಮೂಲಕ ಸಂಚಾರ ಜಾಲ ಸುಧಾರಣೆ, ಬಲಗೊಳಿಸುವ ಉಪಕ್ರಮದಡಿಯಲ್ಲಿ ಅನೇಕ ಕಮಗಳನ್ನು ಕೈಗೊಳ್ಳಲಾಗಿದೆ. ಇಷ್ಟು ದಿನ ಜಾಗೃತಿ ಮೂಡಿಸಿದರೂ ಸುಧಾರಣೆ ಕಾಣುತ್ತಿಲ್ಲ. ಹೀಗಾಗಿ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಪಾಲಿಸಿ, ಹೆಲ್ಮೆಟ್‌, ಸೀಟ್‌ ಬೆಲ್ಟ್‌ ಧರಿಸಿ, ಸಿಗ್ನಲ್‌ ಜಂಪ್‌ ಮಾಡಬೇಡಿ, ಪಾನಮತ್ತರಾಗಿ ವಾಹನ ಚಲಾಯಿಸಬೇಡಿರೆಂದು ಹಲವು ರಸ್ತೆ ನಿಯಮಗಳ ಬಗ್ಗೆ ಜಾಥಾಗಳು, ಅಭಿಯಾನಗಳ ಮೂಲಕ ಜಾಗೃತಿ ಮೂಡಿಸಿರುವ ಖಾಕಿ ಪಡೆ ಇದೀಗ ಸಂಚಾರ ನಿಯಮಗಳ ಉಲ್ಲಂಘನೆ ಮಾಡುವವರ ಮೇಲೆ ದಂಡಾಸ್ತ್ರ ಪ್ರಯೋಗ ನಿಶ್ಚಿತ ಎಂದು ನಗರ ಪೊಲೀಸ್‌ ಕಮಿಷನರ್‌ ಡಾ.ಶರಣಪ್ಪ ಎಚ್ಚರಿಸಿದ್ದಾರೆ.

ಕಳೆದ ಆರು ತಿಂಗಳಿಂದ ನಗರಾದ್ಯಂತ ಸಮಾಜದ ಎಲ್ಲ ವರ್ಗದ ಜನ, ಸಮುದಾಯಗಳು, ಶಾಲೆ, ಕಾಲೇಜು ಮಕ್ಕಳು, ಪೋಷಕರು, ವಕೀಲರು, ವೈದ್ಯರು, ವರ್ತಕರು, ಸಂಘ ಸಂಸ್ಥೆಗಳು ಹೀಗೆ ಹತ್ತು ಹಲವು ವರ್ಗದ ಜನರ ಬಳಿ ಹೋಗಿ ಸಂಚಾರ ನಿಯಮಗಳ ಪಾಲನೆ ವಿವರಿಸಲಾಗಿತ್ತು. ಆದರೂ ನಗರದಲ್ಲಿ ಶೇ.15ರಿಂದ 20 ಜನ ಸಂಚಾರ ನಿಯಮ ಪಾಲಿಸುತ್ತಿದ್ದಾರೆ, ಉಳಿದಂತೆ ಶೇ.80 ಮಂದಿ ಬೇಕಾಬಿಟ್ಟಿ ವಾಹನ ಚಲಾಯಿಸುತ್ತಿದ್ದಾರೆ.

ಇವಕ್ಕೆಲ್ಲ ದಂಡವೇ ಮದ್ದೆಂದು ತೀರ್ಮಾನ ಮಾಡಲಾಗಿದ್ದು, ಆ. 19ರ ಬುಧವಾರದಿಂದ ನಗರಾದ್ಯಂತ ಈಗಾಗಲೇ ಅಳವಡಿಸಲಾಗಿರುವ ಐಟಿಎಂಎಸ್‌ 150 ಕ್ಯಾಮೆರಾ ಜಾಲದಿಂದ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ಇಡೋದಲ್ಲದೆ ಉಲ್ಲಂಘಿಸುವವರನ್ನು ಗುರುತಿಸಿ ಅವರಿಗೆ ದಂಡ ಹಾಕಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ ಕಮಿಷನರ ಡಾ. ಶರಣಪ್ಪ ಢಗೆ ಸ್ಪಷ್ಟಪಡಿಸಿದ್ದಾರೆ.

ನಿತ್ಯ 20 ರಿಂದ 25 ಸಾವಿರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಎಐ ಆಧಾರಿತ ನಗರದಲ್ಲಿ ಅಳವಡಿಸಲಾಗಿರುವ ಐಟಿಎಂಎಸ್‌ ಸಿಸ್ಟಂ ಪತ್ತೆ ಮಾಡುತ್ತಿದೆ. ಜನರಲ್ಲಿ ಜಾಗೃತಿ ಬರಲಿ ಎಂಬ ಕಾರಣಕ್ಕೆ ನಿತ್ಯ 1 ರಿಂದ 2 ಸಾವಿರದಷ್ಟು ಉಲ್ಲಂಘನೆ ಪ್ರಕರಣ ವರ್ಗೀಕರಿಸಿ ಅವರಿಗೆ ಎಚ್ಚರಿಕೆ ನೀಡುವ, ಅಲ್ಪ ಪ್ರಮಾಣದ ಡಂಡ ಹಾಕುತ್ತ ಅಭಿಯಾನಕ್ಕೆ ಚಾಲನೆ ನೀಡಿದ್ದ ಪೊಲೀಸರು ಇದೀಗ ಜಾಗೃತಿ, ಎಚ್ಚರಿಕೆಗಳಿಗೆ ಸ್ಪಂದಿಸದ ನಿಯಮ ಭಂಜಕರಿಗೆ ದಂಡವೇ ಮದ್ದೆಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.

.....ಬಾಕ್ಸ್‌......

ಡ್ರಿಂಕ್‌ ಆಂಡ್‌ ಡ್ರೈವ್‌ ಮೇಲೆ ವಿಶೇಷ ನಿಗಾ

ನಗರದಲ್ಲಿರುವ ಪೊಲೀಸ್ ತಂಡಗಳಿಗೆ ಬ್ರಿಥ್‌ ಅನಲೈಸರ್‌ ನೀಡಲಾಗಿದ್ದು, ಇದರಿಂದ ಸವಾರರು ಪಾನಮತ್ತರಾಗಿದ್ದಾರೋ ಇಲ್ಲವೋ ಎಂಬುದು ಸುಲಭ ಪತ್ತೆ ಹಚ್ಚಬಹುದಾಗಿದೆ. ಇದಲ್ಲದೆ ಕ್ಯಾಮೆರಾದಿಂದ ಬರುವ ಮಾಹಿತಿಗಳನ್ನೆಲ್ಲ ಕ್ರೂಡೀಕರಿಸಿ ತಾಂತ್ರಿಕ ಸಿಬ್ಬಂದಿ ಎಲ್ಲರಿಗೂ ಇ- ಚಲನ್‌ ರವಾನಿಸುತ್ತಾರೆ.

ಮುಂಚೆ ಎಚ್ಚರಿಕೆ ನೀಡಿ ಸಂದೇಶ ಹಾಕುತ್ತಿದ್ದೆವು. ಇದೀಗ ನೇರವಾಗಿ ಇ ಚಲನ್‌ ನಿಮ್ಮ ಮೊಬೈಲ್‌ಗೆ ಸಂದೇಶ ರೂಪದಲ್ಲಿ ಬರುತ್ತದೆ. ಇನ್ನಾದರೂ ಜನರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ದಂಡದಿಂದ ದೂರ ಇರುವಂತೆ ಕಮೀಷನರ್‌ ಡಾ. ಶರಣಪ್ಪ ಕೋರಿದರು.

ಸಂಚಾರ ತೊಂದರೆ ಹಾಗೂ ಸಿಬ್ಬಂದಿ ವರ್ತನೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಕಮಿಷನರ್‌, ಸಂಚಾರ ನಿಯಮಗಳ ಉಲ್ಲಂಘನೆಯ ವಿರುದ್ಧ ದಂಡ ಹಾಕುವವರು ಎಲ್ಲರೂ ಸಿಬ್ಬಂದಿ ಸಮವಸ್ತ್ರದಲ್ಲೇ ಇರಲಿದ್ದಾರೆ. ಇದಲ್ಲದೆ ಅವರೆಲ್ಲರೂ ಅಪಡೇಟ್‌ ಆಗಿರುತ್ತಾರೆ. ಯಾರೇ ಸಾರ್ವಜನಿಕರು ಈ ವಿಚಾರದಲ್ಲಿ ಏನೇ ದೋಷಗಳನ್ನು ಗುರುತಿಸಿದರೂ ತಮ್ಮ ಗಮನಕ್ಕೆ ತರಬೇಕು ಎಂದು ಡಾ. ಶರಣಪ್ಪ ಮನವಿ ಮಾಡಿದ್ದಾರೆ.

.....ಬಾಕ್ಸ್‌.....

ರಸ್ತೆಯಲ್ಲೇ ಕಾರ್‌ ಪಾರ್ಕಿಂಗ್‌: ಕ್ರಮ ಇಲ್ಲವೇ?

ನಗರದಲ್ಲಿರುವ ಮುಖ್ಯ ರಸ್ತೆಗಳಲ್ಲಿ ಶೇ. 60 ರಷ್ಟು ಕಾರ್‌, ಆಟೋಗಳೇ ಪಾರ್ಕ್‌ ಮಾಡಲಾಗುತ್ತಿದ್ದು, ಇದರಿಂದ ಸುಗಮ ಸಂಚಾರ ಗಗನ ಕುಸುಮವಾಗುತ್ತಿದೆ. ಜೇವರ್ಗಿ ಹಳೆ, ಹೊಸ ರಸ್ತೆಗಳುದ್ದಕ್ಕೂ ವಿಶಾಲ ಜಾಗವಿದೆ, ಇಲ್ಲಿಯೂ ವಾಹನಗಳ ನಿಲುಗಡೆಗೇ ರಸ್ತೆ ಬಳಕೆಯಾಗುತ್ತಿದೆ. ಇದಿರಂದ ಸಂಚಾರಕ್ಕೆ ಸಮಸ್ಯೆ ಕಾಡುತ್ತಿದೆ.

ಇನ್ನು ಸೂಪರ್‌ ಮಾರ್ಕೆಟ್‌, ಮಾಲ್‌, ಬಿಗ್‌ ಬಜಾರ್‌ ಮುಂದಿನ ರಸ್ತೆಗಳಲ್ಲಿಯೂ ಪಾರ್ಕಿಂಗ್‌ ಗೆ ಆದ್ಯತೆ ನೀಡಲಾಗುತ್ತಿದೆ. ಯಾಕೆ ಒಳಗಡೆ ವಾಹನ ನಿಲುಗಡೆ ಮಾಡುತಿಲ್ಲ. ಪೊಲೀಸರು ಇದನ್ನೆಲ್ಲ ನೋಡಿಯೂ ಸುಮ್ಮನಿರೋದು ಯಾಕೆಂದು ಪತ್ರಕರ್ತರ ಪ್ರಶ್ನೆಗಳಿಗೆ ಕಮಿಷನರ್‌ ಡಾ. ಶರಣಪ್ಪ ಬರುವ ದಿನಗಳಲ್ಲಿ ಸರಿಪಡಿಸುವ ಭರವಸೆ ನೀಡಿದರು.

--------------

.....ಬಾಕ್ಸ್‌.....

ಚಾಲನಾ ಪರವಾನಿಗೆ ರದ್ದು ಎಚ್ಚರಿಕೆ

ಬೈಕ್‌ ಸವಾರರಾಗಿರಲಿ, ಆಟೋ, ಕಾರ್‌, ಲಾರಿ ಸೇರಿದಂತೆ ಯಾವುದೇ ವಾಹನ ಸವಾರರು, ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುವ ಪ್ರಕರಣಗಳು ಕಂಡು ಬಂದಲ್ಲಿ ಅಂತಹವರಿಗೆ ಭಾರಿ ದಂಡ ವಿಧಿಸುವುದರ ಜೊತೆಗೆ ಅವರು ಹೊಂದಿರುವ ಚಾಲನಾ ಪ್ರಮಾಣ ಪತ್ರವನ್ನೇ ರದ್ದು ಮಾಡುತ್ತೇವೆಂದೂ ಕಮಿಷನರ್‌ ಡಾ. ಶರಣಪ್ಪ ವಾಹನ ಸವಾರರಿಗೆ ಖಡಕ್‌ ಎಚ್ಚರಿಸಿದ್ದಾರೆ. ನಿಯಮಗಳನ್ನು ಪಾಲಿಸುವ ಮೂಲಕ ಕಲಬುರಗಿ ರಸ್ತೆಗಳನ್ನು ಸುರಕ್ಷಿತವಾಗಿಸಲು ಕೈಜೋಡಿಸಬೇಕು ಎಂದು ಕೋರಿದ್ದಾರೆ.

ಫೋಟೋ

-ಡಾ. ಶರಣಪ್ಪ ಢಗೆ, ಸಿಟಿ ಪೊಲೀಸ್‌ ಕಮಿಷನರ್‌