ಸೆಂಥಿಲ್ ಹಿಂದೂ ಧಾರ್ಮಿಕ ನಂಬಿಕೆ ನಾಶ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದಾರೆ: ಜನಾರ್ದನ ರೆಡ್ಡಿ

KannadaprabhaNewsNetwork |  
Published : Sep 07, 2025, 01:00 AM IST
ಶಾಸಕ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  | Kannada Prabha

ಸಾರಾಂಶ

ಎಡಪಂಥೀಯ ಚಿಂತನೆಯ ಶಶಿಕಾಂತ ಸೆಂಥಿಲ್ ಹಿಂದೂ ಧರ್ಮದ ಧಾರ್ಮಿಕ ನಂಬಿಕೆಗಳನ್ನು ನಾಶ ಮಾಡಲೆಂದೇ ರಾಜಕಾರಣ ಪ್ರವೇಶ ಮಾಡಿದ್ದಾರೆ.

 ಬಳ್ಳಾರಿ :  ಎಡಪಂಥೀಯ ಚಿಂತನೆಯ ಶಶಿಕಾಂತ ಸೆಂಥಿಲ್ ಹಿಂದೂ ಧರ್ಮದ ಧಾರ್ಮಿಕ ನಂಬಿಕೆಗಳನ್ನು ನಾಶ ಮಾಡಲೆಂದೇ ರಾಜಕಾರಣ ಪ್ರವೇಶ ಮಾಡಿದ್ದಾರೆ. ಕರಾವಳಿ ಭಾಗದಲ್ಲಿ ಬಿಜೆಪಿ ಪ್ರಬಲವಾಗಿದೆ ಎಂಬ ಕಾರಣಕ್ಕಾಗಿಯೇ ಧರ್ಮಸ್ಥಳ ಪ್ರಕರಣದಲ್ಲಿ ಹುನ್ನಾರ ನಡೆಸಿದ್ದಾರೆ. ಧರ್ಮಸ್ಥಳ ಪ್ರಕರಣದ ಸೂತ್ರಧಾರಿಯೇ ಸೆಂಥಿಲ್ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಪುನರುಚ್ಛರಿಸಿದರು.

ಸಂಸದ ಶಶಿಕಾಂತ ಸೆಂಥಿಲ್ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಹಿನ್ನೆಲೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಸೆಂಥಿಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೆಡ್ಡಿ, ಧಾರ್ಮಿಕ ಕೇಂದ್ರವಾದ ಧರ್ಮಸ್ಥಳದ ಹೆಸರು ಹಾಳು ಮಾಡಲು ಕಮ್ಯುನಿಸ್ಟರು ಹಾಗೂ ನಗರ ನಕ್ಸಲರು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಧರ್ಮಸ್ಥಳ ಪ್ರಕರಣದಲ್ಲಿ ಸೆಂಥಿಲ್ ಕೈವಾಡವಿದೆ ಎಂಬ ಹೇಳಿಕೆಗೆ ಬದ್ಧನಾಗಿದ್ದೇನೆ. ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಗೊತ್ತಾಯಿತು. ಅವರ ಎಷ್ಟೇ ಮೊಕದ್ದಮೆ ದಾಖಲಿಸಲಿ. ನಾನೂ ಸಹ ಕಾನೂನು ಹೋರಾಟ ಮಾಡುವೆ. ಈ ಪ್ರಕರಣದಿಂದ ನಾನೇನು ವಿಚಲಿತನಾಗುವುದಿಲ್ಲ. ಕಾನೂನು ಹೋರಾಟಕ್ಕೆ ಅವರೇ ದಾರಿ ಮಾಡಿಕೊಟ್ಟಿದ್ದಾರೆ ಎಂದರು.

ಎನ್‌ಐಎ-ಸಿಬಿಐ ತನಿಖೆಯಾಗಲಿ:

ತಿರುಪತಿ, ಶಬರಿಮಲೈ ಮತ್ತಿತರ ಕೇಂದ್ರಗಳ ಮೇಲೂ ಯೂಟ್ಯೂಬರ್‌ಗಳು ಹಾಗೂ ನಗರ ನಕ್ಸಲರು ವಿನಾಕಾರಣ ಆರೋಪ ಮಾಡಿದರು. ಯೂಟ್ಯೂಬರ್‌ ಸಮೀರ್, ಮುಸುಕುಧಾರಿ ಚಿನ್ನಯ್ಯ ಸೇರಿದಂತೆ ಅನೇಕರು ಧರ್ಮಸ್ಥಳ ಹೆಸರು ಕೆಡಿಸಲು ನಡೆಸಿರುವ ಹುನ್ನಾರಗಳು ಬಯಲಾಗಿವೆ. ಆದರೆ, ಷಡ್ಯಂತ್ರ ಹಿಂದೆ ಇರುವವರು ಯಾರು ಎಂಬುದು ಬಯಲಾಗಬೇಕು ಎಂದರು.

ಸೆಂಥಿಲ್ ರಾಹುಲ್‌ ಗಾಂಧಿಯ ಬಲಗೈನಂತೆ ಇದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಸೆಂಥಿಲ್‌ರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಗಳಿಲ್ಲ. ಧರ್ಮಸ್ಥಳ ಪ್ರಕರಣದಲ್ಲಿ ತನ್ನದೇನೂ ಪಾತ್ರವಿಲ್ಲ ಎನ್ನುವ ಶಶಿಕಾಂತ ಸೆಂಥಿಲ್, ಪ್ರಕರಣವನ್ನು ಸಿಬಿಐ ಅಥವಾ ಎನ್‌ಐಎ ನೀಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಿ ಎಂದು ಸವಾಲು ಹಾಕಿದರು.

ಕರ್ನಾಟಕದ ಗಣಿ ಲೂಟಿ ಹೊಡೆದ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೈಲುಪಾಲಾಗಿದ್ದರು ಎಂಬ ಸಂಸದ ಸೆಂಥಿಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಆತನ ತಾಯಿ ಸೋನಿಯಾ ಗಾಂಧಿ ನ್ಯಾಷನಲ್ ಹೆರಾಲ್ಡ್‌ ಪ್ರಕರಣದಲ್ಲಿ ಕೋಟಿ ಕೋಟಿ ಲೂಟಿ ಮಾಡಿ ಬೇಲ್‌ ಮೇಲೆ ಓಡಾಡುತ್ತಿದ್ದಾರೆ. ಇದು ಸೆಂಥಿಲ್ ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಪಕ್ಷದ ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು.

PREV
Read more Articles on

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ