ಕನ್ನಡಪ್ರಭ ವಾರ್ತೆ ಹಾಸನ
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಭಕ್ತರಿಗೆ ಆಧಾರ್ ಕಾರ್ಡ್ ಪರಿಗಣಿಸಿ ಪ್ರತ್ಯೇಕ ದರ್ಶನ ವ್ಯವಸ್ಥೆ ಕಲ್ಪಿಸಬೇಕೆನ್ನುವ ಹಲವರ ಬೇಡಿಕೆ ಸರಿಯಾದುದಲ್ಲ. ದೇವರ ಸನ್ನಿಧಿಯಲ್ಲಿ ಈ ರೀತಿಯ ಪ್ರತ್ಯೇಕ ವ್ಯವಸ್ಥೆ ಮಾಡುವುದು ಸರಿಯೂ ಅಲ್ಲ. ಹಿಂದಿನ ವರ್ಷ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಬೈರೇಗೌಡರು ಉತ್ತಮ ರೀತಿ ನಡೆಸಿದ ರೀತಿಗಿಂತ ಇನ್ನೂ ಹೆಚ್ಚಿನ ರೀತಿ ಭಕ್ತರಿಗೆ ಅನುಕೂಲ ಕಲ್ಪಿಸಲಾಗುವುದು. ಉತ್ಸವದ ಅವಧಿಯಲ್ಲಿ ತಾವು ಎಂಟರಿಂದ ಹತ್ತು ದಿನಗಳವರೆಗೆ ಹಾಸನದಲ್ಲಿದ್ದು, ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುವುದಾಗಿ ಹೇಳಿದರು.
ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಉತ್ಸವದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಕುಸ್ತಿ ಪಂದ್ಯಾವಳಿಯಲ್ಲಿ ಸುಮಾರು ೪೦೦ ಕುಸ್ತಿಪಟುಗಳು, ವಾಲಿಬಾಲ್‌ನಲ್ಲಿ ೧೫೦ ಆಟಗಾರರು ಹಾಗೂ ಕಬಡ್ಡಿಯಲ್ಲಿ ೨೦೦ ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ. ಜತೆಗೆ ವಿವಿಧ ತಳಿಗಳ ಎತ್ತುಗಳು, ನಾಯಿಗಳು ಹಾಗೂ ಟಗರುಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ಹಾಸನಾಂಬೆ ಉತ್ಸವವು ಧಾರ್ಮಿಕ ಮಹತ್ವದ ಜೊತೆಗೆ ಜಿಲ್ಲೆಯ ಸಾಂಸ್ಕೃತಿಕ ವೈಭವ ಮತ್ತು ಕ್ರೀಡಾ ಪ್ರತಿಭೆಗಳನ್ನು ಪರಿಚಯಿಸುವ ವೇದಿಕೆಯಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಸಮಿತಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಸಚಿವರು ಹೇಳಿದರು. ಶಾಸಕ ಸ್ವರೂಪ್ ಸಮಾರೋಪದ ಅಧ್ಯಕ್ಷರು:ಶಾಸಕ ಎಚ್.ಪಿ. ಸ್ವರೂಪ್ ಅವರನ್ನು ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷರನ್ನಾಗಿ ನಿರ್ಧರಿಸಲಾಗಿದ್ದು, ಸಿದ್ಧತೆಗಳ ಕುರಿತು ನಡೆದ ಸಭೆಗಳಿಗೂ ಅವರನ್ನು ಆಹ್ವಾನಿಸಲಾಗಿದೆ. ಈ ಸಂಬಂಧ ತಾವು ಶಾಸಕರೊಂದಿಗೆ ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿದ್ದೇನೆ. ಉತ್ಸವದ ವಿಚಾರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ಹಾಸನಾಂಬ ಉತ್ಸವದ ಸಿದ್ಧತೆಗಳಿಗೆ ಇನ್ನಷ್ಟು ವೇಗ ನೀಡಲಾಗುವುದು. ಮೈಸೂರು ದಸರಾ ಮಾದರಿಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲು ಉದ್ದೇಶಿಸಲಾಗಿದೆ. ಭಕ್ತರಿಗೆ ಸುಗಮ ದರ್ಶನದ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ, ಉತ್ಸವಕ್ಕೆ ಆಗಮಿಸುವ ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಸ್ಟಿಂಗ್ ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕು. ತಪ್ಪು ಮಾಡಿದವರು ಯಾರೇ ಆಗಿರಲಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ತನಿಖೆ ಪೂರ್ಣಗೊಳ್ಳುವ ಮೊದಲೇ ಅನಗತ್ಯ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುವುದಕ್ಕಿಂತ ಸತ್ಯ ಹೊರಬರಲು ಅವಕಾಶ ನೀಡುವುದು ಮುಖ್ಯ ಎಂದರು.