ಕನ್ನಡಪ್ರಭ ವಾರ್ತೆ ಮಡಿಕೇರಿ
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಬಾಳೆಲೆಯಲ್ಲಿ ಮಾನವ ಸರಪಳಿ ನಿರ್ಮಿಸಿದ ಸದಸ್ಯರು ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು ಕೊಡವಲ್ಯಾಂಡ್ ನ ರಕ್ಷಣೆಗಾಗಿ 2025-26ರ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮಸಂಜಾತ ಕೊಡವರಿಗೆ ಪ್ರತ್ಯೇಕ "ಕೋಡ್ ಮತ್ತು ಕಾಲಮ್ " ಅನ್ನು ಸೇರಿಸಲು ಕೇಂದ್ರ ಗೃಹ ಮಂತ್ರಾಲಯ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯೋಗ ನಮ್ಮ ಬೇಡಿಕೆಯನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು.ಪ್ರಸ್ತುತ ಜನಗಣತಿ ಸಂದರ್ಭ ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಸೇರಿಸಿದರೆ ಕೊಡವ ಸಮುದಾಯದ ನಿಖರವಾದ ಪ್ರಾತಿನಿಧ್ಯವನ್ನು ಖಚಿತಪಡಿಸಬಹುದು. ಸರ್ಕಾರ ಕೊಡವ ಸಮುದಾಯದ ನಿರ್ದಿಷ್ಟ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸೋಶಿಯಲ್ ಇಂಜಿನಿಯರಿಂಗ್ ಮೂಲಕ ಅವರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಉದ್ದೇಶಿತ ನೀತಿಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಕೊಡವ ಸಮುದಾಯದ ವಿಶಿಷ್ಟ ಗುರುತನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದರು.
ಇಲ್ಲಿಯವರೆಗೆ ಬಿರುನಾಣಿ, ಕಡಂಗ, ಕಕ್ಕಬ್ಬೆ, ಟಿ.ಶೆಟ್ಟಿಗೇರಿ ಮತ್ತು ಬಾಳೆಲೆಯಲ್ಲಿ ಜನ ಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಗಿದ್ದು, ಮುಂದಿನ 6ನೇ ಮಾನವ ಸರಪಳಿ ಕಾರ್ಯಕ್ರಮವು ಜೂ.23 ರಂದು ಪೊನ್ನಂಪೇಟೆಯಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.ಮಾಪಗಂಡ ಯಮುನ, ಕರ್ನಲ್ ಬಿ.ಎಂ.ಪಾರ್ವತಿ, ಕಾಂಡೇರ ಸುರೇಶ್, ಆದೇಂಗಡ ರಮೇಶ್, ಅಳ್ಮೆಂಗಡ ಬೋಸ್ ಮಂದಣ್ಣ, ಪಾರ್ವಂಗಡ ಬೋಸ್, ಕಾಡ್ಯಮಾಡ ಗಣಪತಿ, ಮಾಚಂಗಡ ಜಪ್ಪು, ಪುಳ್ಳಂಗಡ ಪೂಣಚ್ಚ, ಮೊದಲಾದವರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎನ್‌ಸಿ ಬೇಡಿಕೆಗಳ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.