ಸರಣಿ ಅಪಘಾತ: ಓರ್ವ ಸಾವು, 7 ಮಂದಿ ಗಾಯ

KannadaprabhaNewsNetwork |  
Published : Jun 11, 2026, 01:00 AM IST
ಜಗಲಬೆಟ್ ದಲ್ಲಿ ನಡೆದ ಅಪಘಾತ | Kannada Prabha

ಸಾರಾಂಶ

ತಾಲೂಕಿನ ಜಗಲಬೆಟ್ ಬಳಿ ನಾಲ್ಕು ವಾಹನಗಳ ನಡುವೆ ಭೀಕರ ಸರಣಿ ಅಪಘಾತ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ನಾಲ್ಕು ವಾಹನಗಳ ನಡುವೆ ಡಿಕ್ಕಿ । ಜಗಲಬೆಟ್ ಬಳಿ ಘಟನೆ

ಜೋಯಿಡಾ:

ತಾಲೂಕಿನ ಜಗಲಬೆಟ್ ಬಳಿ ನಾಲ್ಕು ವಾಹನಗಳ ನಡುವೆ ಭೀಕರ ಸರಣಿ ಅಪಘಾತ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಕಾರವಾರ–ರಾಮನಗರ ರಸ್ತೆಯ ಕೃಷ್ಣ ದೇವಸ್ಥಾನದ ಅಪಾಯಕಾರಿ ತಿರುವಿನಲ್ಲಿ ನಡೆದ ಈ ರಸ್ತೆ ದುರಂತದಲ್ಲಿ ಟಿಪ್ಪರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಂದು ಕಡೆ ಏಳು ಮಂದಿ ಗಾಯಗೊಂಡಿದ್ದಾರೆ.ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ನಿಸ್ಸಾನ್ ಕಾರು, ಬೊಲೆರೊ ಹಾಗೂ ಬೈಕ್‌ಗೆ ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವಾಹನಗಳು ರಸ್ತೆ ಬದಿಗೆ ಉರುಳಿದ್ದು, ತೀವ್ರವಾಗಿ ಜಖಂಗೊಂಡಿವೆ. ಅಪಘಾತದಲ್ಲಿ ಕುಮಟಾ ಮೂಲದ ಟಿಪ್ಪರ್ ಚಾಲಕ ಬಾಬು ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

7 ಮಂದಿಗೆ ಗಾಯ;ಈ ಸರಣಿ ಅಪಘಾತದಲ್ಲಿ ವಿವಿಧ ವಾಹನಗಳಲ್ಲಿದ್ದ ಒಟ್ಟು ಏಳು ಜನರು ಗಾಯಗೊಂಡಿದ್ದಾರೆ. ಅಪಘಾತದ ಸುದ್ದಿ ಕೇಳಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಹಾಗೂ ಪೊಲೀಸರು ಗಾಯಾಳುಗಳನ್ನು ರಕ್ಷಿಸಿ ಮೊದಲು ರಾಮನಗರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಕೆಲವರನ್ನು ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಹಾಗೂ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಜಗಲಬೆಟ್ ಸಮೀಪ ನಡೆದ ಈ ಭೀಕರ ಅಪಘಾತದಿಂದಾಗಿ ಕಾರವಾರ–ರಾಮನಗರ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಕೆಲಕಾಲ ಭಾರಿ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ರಾಮನಗರ ಪಿಎಸ್ಐ ಮಹಾಂತೇಶ್ ನಾಯಕ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೊಬ್ಬರಕ್ಕಾಗಿ ದಾಖಲೆಗಳೇ ಸರತಿ ಸಾಲು; ರೈತರ ಪರದಾಟ
ಬಯಲುಸೀಮೆಗೆ ನೀರು ಒಯ್ಯುವ ಯೋಜನೆ ಅವೈಜ್ಞಾನಿಕ: ಸ್ವರ್ಣವಲ್ಲೀ ಶ್ರೀಗಳು