ಪೌರಕಾರ್ಮಿಕರ ಸೇವೆ ಅಮೂಲ್ಯವಾದದ್ದು: ಪುಟ್ಟರಂಗಶೆಟ್ಟಿ

KannadaprabhaNewsNetwork | Published : Feb 1, 2025 12:00 AM

ಸಾರಾಂಶ

ಚಾಮರಾಜನಗರದ ವಾಲ್ಮೀಕಿ ಭವನದಲ್ಲಿ ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಉತ್ತಮ ಸೇವೆ ಸಲ್ಲಿಸಿದವರಿಗೆ ಹಾಗೂ ನಿವೃತ್ತರಾದ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಳೆ, ಚಳಿ, ಬಿಸಿಲೆನ್ನದೇ ಹಗಲು-ರಾತ್ರಿ ಹಾಗೂ ತುರ್ತು ಸಂದರ್ಭಗಳಲ್ಲಿ ನಗರ ಸ್ವಚ್ಛತೆಯ ಕಾಯಕ ಮಾಡುವ ಪೌರಕಾರ್ಮಿಕರ ವೃತ್ತಿ ಅನನ್ಯ ಹಾಗೂ ಬಹಳ ಅಮೂಲ್ಯವಾಗಿದೆ ಎಂದು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದ ಸಭಾಂಗಣದಲ್ಲಿ ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಮನೆಯನ್ನು ನಾವೇ ಸ್ವಚ್ಛ ಮಾಡಿಕೊಳ್ಳುತ್ತೇವೆ, ಆದರೆ ಊರು, ನಗರಗಳ ಸ್ವಚ್ಛ ಮಾಡುವವರು ಪೌರಕಾರ್ಮಿಕರೇ ಆಗಿದ್ದಾರೆ. ಜಿಲ್ಲೆಯು ಸ್ವಚ್ಛತೆ ಹಾಗೂ ಶುದ್ಧ ಗಾಳಿ ನೀಡುವಲ್ಲಿ ಮುಂದಿದೆ. ಇದಕ್ಕೆ ಮುಖ್ಯ ಕಾರಣರು ಪೌರಕಾರ್ಮಿಕರು. ಪೌರಕಾರ್ಮಿಕರ ಹುದ್ದೆಯನ್ನು ಲಘುವಾಗಿ ಪರಿಗಣಿಸಬಾರದು. ದಿನನಿತ್ಯದ ಕಾಯಕದ ಬಳಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವಿಶ್ರಾಂತಿ ಪಡೆಯಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಕಾನೂನುಗಳನ್ನು ಅಡಕಗೊಳಿಸಿದ್ದಾರೆ. ಅದರನ್ವಯ ಸರ್ಕಾರಗಳು ಪೌರಕಾರ್ಮಿಕರಿಗೆ ವಸತಿ ಯೋಜನೆ, ಆರೋಗ್ಯ ಭಾಗ್ಯ, ಕನಿಷ್ಠ ವೇತನ ಸೌಲಭ್ಯ, ಪೌರಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ, ವಿದೇಶಿ ವ್ಯಾಸಂಗ ಯೋಜನೆ ಇನ್ನಿತರೆ ಯೋಜನೆಗಳನ್ನು ಜಾರಿಗೊಳಿಸಿವೆ. ಇಲಾಖೆಗಳಲ್ಲಿ ಶೇ.೫ರಷ್ಟು ಅನುದಾನ ಪೌರಕಾರ್ಮಿಕರಿಗಾಗಿಯೇ ಮೀಸಲಿದೆ. ಅವುಗಳ ಸದ್ಬಳಕೆಯಾಗಬೇಕು ಎಂದರು.

ಪೌರಕಾರ್ಮಿಕರಿಗೆ ಮನೆ ನೀಡುವ ಸಲುವಾಗಿ ಈಗಾಗಲೇ ನಿವೇಶನ ಮಂಜೂರು ಮಾಡಲಾಗಿದ್ದು, ೪೦ ಎಕರೆ ಜಾಗದಲ್ಲಿ ೮೦೦ ರಿಂದ ೧ ಸಾವಿರ ನಿವೇಶನಗಳನ್ನು ನೀಡಲು ಜಿಲ್ಲಾಡಳಿತ ಕ್ರಮವಹಿಸಿದೆ ಎಂದರು. ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ನಗರದ ಸ್ವಚ್ಛತಾ ಕಾಯಕದಲ್ಲಿ ತೊಡಗಿರುವ ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರು ಅವಿರತವಾಗಿ ದುಡಿದಿದ್ದಾರೆ. ಪೌರಕಾರ್ಮಿಕರ ಅಭಿವೃದ್ಧಿಗಾಗಿ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಪೌರಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.

ನಗರಸಭೆ ಉಪಾಧ್ಯಕ್ಷೆ ಮಮತ ಮಾತನಾಡಿ, ಪೌರಕಾರ್ಮಿಕರು ನಿಯಮಿತವಾಗಿ ಸ್ವಚ್ಛತಾ ಕಾರ್ಯ ಮಾಡದಿದ್ದಾಗ ನಮ್ಮ ಬದುಕು ದುಸ್ತರವಾಗಲಿದೆ. ಹಾಗೆಯೇ ನಗರಗಳು ಅಶುಚಿತ್ವದಿಂದ ಕೂಡಿರಲಿವೆ. ನಿಜವಾದ ಕಾಯಕ ಯೋಗಿಗಳಾದ ಪೌರಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ನಗರಸಭೆ ಸದಸ್ಯರಾದ ಮಹೇಶ್, ಬಸವಣ್ಣ, ಕುಮುದಾ ಮಾತನಾಡಿ, ನಗರಗಳ ಸ್ವಚ್ಛತಾ ಕಾರ್ಯದಲ್ಲಿ ಪೌರಕಾರ್ಮಿಕರ ಪಾತ್ರ ಅಪಾರ. ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರ ವೃತ್ತಿಯನ್ನೇ ಅನುಸರಿಸದೇ ಉತ್ತಮ, ಶಿಕ್ಷಣ ಪಡೆಯಬೇಕು. ಉನ್ನತ ಅಧಿಕಾರ ಪಡೆಯಬೇಕು. ಆಗಮಾತ್ರ ಪೌರಕಾರ್ಮಿಕರ ಬದುಕು ಸಾರ್ಥಕತೆ ಕಾಣಲಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಎಸ್. ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರಸಭೆಯಿಂದ ಒದಗಿಸಲಾಗಿರುವ ಸೌಲಭ್ಯಗಳ ಕುರಿತು ವಿವರಿಸಿ ಪೌರಕಾರ್ಮಿಕರು ಸ್ವಚ್ಛತೆ ಜೊತೆಗೆ ಉತ್ತಮ ಆರೋಗ್ಯ ಹೊಂದಬೇಕು. ದುಶ್ಚಟಗಳಿಂದ ದೂರವಿರಬೇಕು. ಪೌರಕಾರ್ಮಿಕರು ಸಮಾಜದ ಮುಂಚೂಣಿಗೆ ಬರಬೇಕು ಎಂದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ಎಂ.ಸವಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮುನಿರಾಜು ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆ, ಕಾರ್ಯಕ್ರಮಗಳು ಹಾಗೂ ದೊರೆಯುವ ಸೌಲಭ್ಯಗಳ ಬಗ್ಗೆ ಸುದೀರ್ಘ ಮಾಹಿತಿ ನೀಡಿದರು.

ಇದೇ ವೇಳೆ ಪೌರಕಾರ್ಮಿಕರಿಗೆ ನಡೆಸಿದ್ದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪೌರಕಾರ್ಮಿಕರಾಗಿ ಉತ್ತಮ ಸೇವೆ ಸಲ್ಲಿಸಿದವರಿಗೆ ಹಾಗೂ ನಿವೃತ್ತರಾದ ಪೌರಕಾರ್ಮಿಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ.ಸುಧಾ, ಕಾರ್ಯಪಾಲಕ ಅಭಿಯಂತರ ಅಲ್ತಾಫ್, ತಾಲೂಕು ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ಸುಬ್ರಾಯ, ನಗರಸಭೆ ನಾಮನಿರ್ದೇಶಿತ ಸದಸ್ಯರಾದ ಸ್ವಾಮಿ, ಸಿದ್ದರಾಜು, ಬಾಲಸುಬ್ರಮಣ್ಯಂ, ಇತರರು ಕಾರ್ಯಕ್ರಮದಲ್ಲಿ ಇದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರಸಭಾ ಕಾರ್ಯಲಯದ ಮುಂಭಾಗದಿಂದ ವಿವಿಧ ಆಕರ್ಷಕ ಕಲಾತಂಡಗಳೊಂದಿಗೆ ಏರ್ಪಡಿಸಲಾಗಿದ್ದ ಜಾಥಾಗೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಜಾಥಾ ವಾಲ್ಮೀಕಿ ಭವನದಲ್ಲಿ ಅಂತ್ಯಗೊಂಡಿತು.

Share this article