ಸೋಲಾರ್, ವಿಂಡ್ ಮಿಲ್ ಕಾರ್ಮಿಕರಿಗೂ ಸೇವಾಭದ್ರತೆ

KannadaprabhaNewsNetwork | Published : Dec 2, 2024 1:20 AM

ಸಾರಾಂಶ

ಚಿತ್ರದುರ್ಗ: ರಾಜ್ಯದ ವಿವಿಧ ಕಡೆಗಳಲ್ಲಿ ಇರುವ ಸೋಲಾರ್ ಪ್ಲಾಂಟ್ ಹಾಗೂ ವಿಂಡ್ ಮಿಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸುವ ದೃಷ್ಟಿಯಿಂದ ಸೂಕ್ತ ಪ್ರಸ್ತಾವನೆಯ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಕಾರ್ಮಿಕ ಇಲಾಖೆಯ ದಾವಣಗೆರೆ ವಿಭಾಗದ ಸಹಾಯಕ ಆಯುಕ್ತ ಡಾ.ಅವಿನಾಶ್ ತಿಳಿಸಿದರು.

ಚಿತ್ರದುರ್ಗ: ರಾಜ್ಯದ ವಿವಿಧ ಕಡೆಗಳಲ್ಲಿ ಇರುವ ಸೋಲಾರ್ ಪ್ಲಾಂಟ್ ಹಾಗೂ ವಿಂಡ್ ಮಿಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸುವ ದೃಷ್ಟಿಯಿಂದ ಸೂಕ್ತ ಪ್ರಸ್ತಾವನೆಯ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಕಾರ್ಮಿಕ ಇಲಾಖೆಯ ದಾವಣಗೆರೆ ವಿಭಾಗದ ಸಹಾಯಕ ಆಯುಕ್ತ ಡಾ.ಅವಿನಾಶ್ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಸೋಲಾರ್ ಹಾಗೂ ವಿಂಡ್ ಎನರ್ಜಿ ಎಂಪ್ಲಾಯ್ಸ್ ಯೂನಿಯನ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶ ಹಾಗೂ ಕಾರ್ಮಿಕ ಕಾಯ್ದೆಗಳು ಮತ್ತು ಹಕ್ಕುಗಳ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಕಾಯ್ದೆ ಪ್ರಸ್ತಾನೆಗೆ ಸಚಿವ ಸಂಪುಟ ಅನುಮೋದನೆ ನೀಡಿದರೆ ಕಾರ್ಮಿಕರಿಗೆ ಎಲ್ಲ ರೀತಿಯಿಂದಲೂ ಅನುಕೂಲವಾಗಲಿದೆ ಎಂದರು. ಕಾರ್ಮಿಕರಿಗೆ ಸರ್ಕಾರ ವಿವಿಧ ರೀತಿಯ ಕಾಯ್ದೆಗಳನ್ನು ಈಗಾಗಲೇ ಜಾರಿ ಮಾಡಿದೆ. ಇದರಲ್ಲಿ ಖಾಯಂ ಹಾಗೂ ಗುತ್ತಿಗೆದಾರರ ನೌಕರರಿಗೆ ಅವರ ವೇತನ, ಕೆಲಸದ ಸಮಯ, ವಿವಿಧ ರೀತಿಯ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಇರುವ ನಿಯಮಗಳನ್ನು ರೂಪಿಸಲಾಗಿದೆ. ಕೈಗಾರಿಕೆ ಹಾಗೂ ಉದ್ಯಮದ ಮಾಲೀಕರು ಇದನ್ನು ತಪ್ಪದೆ ಪಾಲಿಸಬೇಕಿದೆ. ಯಾರು ಪಾಲನೆ ಮಾಡುವುದಿಲ್ಲವೂ ಅವರ ವಿರುದ್ಧ ಕಾರ್ಮಿಕ ಇಲಾಖೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಸರ್ಕಾರಗಳು ಕಾರ್ಮಿಕರಿಗಾಗಿ ಸುಮಾರು 25 ಕಾಯ್ದೆಗಳನ್ನು ಜಾರಿ ಮಾಡಿದೆ. ಇದರಲ್ಲಿ 21 ಕಾಯ್ದೆಗಳು ಕೇಂದ್ರ ಸರ್ಕಾರಕ್ಕೆ ಉಳಿದ 4 ಕಾಯ್ದೆಗಳು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದಾಗಿದೆ. ತಾವು ಕೆಲಸ ಮಾಡುವ ಸ್ಥಳದಲ್ಲಿ ಕಾರ್ಮಿಕರಿಗೆ ಆಡಳಿತ ಮಂಡಳಿ ಅಥವಾ ಗುತ್ತಿಗೆದಾರರಿಂದ ಏನಾದರೂ ತೊಂದರೆಯಾದರೆ ಇಲಾಖೆ ಮಧ್ಯ ಪ್ರವೇಶ ಮಾಡುವುದರ ಮೂಲಕ ಸಮಸ್ಯೆ ಇತ್ಯರ್ಥ ಪಡಿಸುತ್ತದೆ. ಇತ್ತೀಚಿನ ದಿನದಲ್ಲಿ ಸೋಲಾರ್ ಹಾಗೂ ವಿಂಡ್ ಎನರ್ಜಿ ತಯಾರಿಕೆ ಹೆಚ್ಚಾಗುತ್ತಿದ್ದು, ಇದರಲ್ಲಿ ಕೆಲಸ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ಇಲಾಖೆಯಿಂದ ಸರ್ವೇ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ನೀಡಿದ್ದಲ್ಲಿ ಕಾಯ್ದೆ ಜಾರಿಯಾಗಲಿದೆ ಎಂದರು.

ಸಂಘಟನೆಯ ಜಿಲ್ಲಾಧ್ಯಕ್ಷ ವೀರೇಶ್ ನಾಯಕ್ ಹಾರಕನಹಾಳ್ ಮಾತನಾಡಿ, ಸೋಲಾರ್ ಹಾಗೂ ವಿಂಡ್ ಎನರ್ಜಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ಕೆಲಸ ಮಾಡುವವರ ಸಂಖ್ಯೆಯೂ 10 ರಿಂದ 30 ಸಾವಿರದ ತನಕ ವಿಸ್ತಾರಗೊಂಡಿದೆ. ಸೋಲಾರ್ ಹಾಗೂ ವಿಂಡ್ ಎನರ್ಜಿಯಿಂದ ಈ 10 ವೆ.ವ್ಯಾ ವಿದ್ಯುತ್ ಉತ್ಪಾದನೆಯಾದರೆ ಮುಂದಿನ ದಿನದಲ್ಲಿ ಸರ್ಕಾರ ರಾಜ್ಯದ ನಾಲ್ಕು ಕಡೆಗಳಲ್ಲಿ ಸೋಲಾರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಪ್ರಾರಂಭ ಮಾಡಲು ಮುಂದಾಗಿದೆ. ಇದುವರೆವಿಗೂ ಸರ್ಕಾರದ ಸಾಮ್ಯಕ್ಕೆ ಒಳಪಟ್ಟಿದ ಸೋಲಾರ್ ಹಾಗೂ ವಿಂಡ್ ಎನರ್ಜಿ ಕೈಗಾರಿಕೆಗಳು ಇನ್ನೂ ಮುಂದೆ ಖಾಸಗಿಯವರ ಆಡಳಿತಕ್ಕೆ ಒಳಪಡಲಿದ್ದು, ದುರಂತ ದ ಸಂಗತಿಯಾಗಲಿದೆ ಎಂದರು. ಕರ್ನಾಟಕ ರಾಜ್ಯ ಸೋಲಾರ್ ಎನರ್ಜಿ ಎಂಪ್ಲಾಯ್ಸ್ ಯೂನಿಯನ್‍ನ ಜಂಟಿ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ರಾಜ್ಯದಾದ್ಯಂತ ಹರಡಿರುವ ನೂರಾರು ಸೋಲಾರ್ ಮತ್ತು ವಿಂಡ್ ಮಿಲ್‍ಗಳಲ್ಲಿರುವ ಗುತ್ತಿಗೆ ಮತ್ತು ಖಾಯಂ ನೌಕರರು ಅಸಂಘಟಿತರಾಗಿದ್ದು, ಅವರನ್ನು ಸಂಘಟಿಸುವ ಮತ್ತು ಹೋರಾಟವನ್ನು ವಿಸ್ತರಿಸುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಈ ನೌಕರರಿಗೆ ಸೇವಾಭದ್ರತೆ, ನೇಮಕಾತಿಪತ್ರ, ಗುರುತು ಚೀಟಿ, ವೇತನ ಚೀಟಿ, ಇಎಸ್‍ಐ-ಪಿಎಫ್, ಬೋನಸ್, ಶೂ-ಸಮವಸ್ತ್ರ ಇತ್ಯಾದಿ ಬೇಡಿಕೆಗಳಿಗೆ ಧ್ವನಿಯೆತ್ತಲು ಸಮಾವೇಶವು ಸ್ಫೂರ್ತಿಯಾಗಲಿದೆ ಎಂದು ಹೇಳಿದರು. ಆಲ್ ಇಂಡಿಯಾ ಪವರ್‍ಮೆನ್ಸ್ ಫೆಡರೇಷನ್‌ ರಾಜ್ಯ ಕಾರ್ಯದರ್ಶಿ ಗಂಗಾಧರ ಬಡಿಗೇರ್, ಕರ್ನಾಟಕ ರಾಜ್ಯ ಸೋಲಾರ್ ಮತ್ತು ವಿಂಡ್ ಎನರ್ಜಿ ಎಂಪ್ಲಾಯಿಸ್ ಯೂನಿಯನ್‍ನ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೈದಾಳ್, ಆಲ್ ಇಂಡಿಯಾ ಪವರಮೆನ್ ಫೆಡರೇಷನ್ ಅಖಿಲ ಭಾರತ ಅಧ್ಯಕ್ಷ ಕೆ.ಸೋಮಶೇಖರ್, ಆಲ್ ಇಂಡಿಯಾ ಪವರ್‍ಮೆನ್ಸ್ ಫೆಡರೇಷನ್‍ನ ರಾಜ್ಯ ಅಧ್ಯಕ್ಷ ವೀರೇಶ್.ಎನ್‍.ಎಸ್, ಕರ್ನಾಟಕ ರಾಜ್ಯ ವಿಂಡ್ ಎನರ್ಜಿ ಎಂಪ್ಲಾಯ್ಸ್ ಯೂನಿಯನ್ ಉಪಾಧ್ಯಕ್ಷ ರಂಗನಾಥ್ ಹಂಪನೂರು, ಜಂಟಿ ಕಾರ್ಯದರ್ಶಿ ಲೋಕೇಶ್ ನೀರ್ಥಡಿ ಇದ್ದರು.

Share this article