ಇಂದಿನಿಂದ ಅಧಿವೇಶನ: ಕೈ vs ಬಿಜೆಪಿ, ದಳ ಫೈಟ್‌?

KannadaprabhaNewsNetwork |  
Published : Aug 11, 2025, 12:30 AM ISTUpdated : Aug 11, 2025, 11:41 AM IST
ವಿಧಾನಸೌಧ | Kannada Prabha

ಸಾರಾಂಶ

ವಿಧಾನ ಮಂಡಲದ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ಸದನ ಕದನಕ್ಕೆ ಮೈತ್ರಿ ಪಕ್ಷಗಳು ಸಜ್ಜಾಗಿವೆ.

 ಬೆಂಗಳೂರು :  ವಿಧಾನ ಮಂಡಲದ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ಸದನ ಕದನಕ್ಕೆ ಮೈತ್ರಿ ಪಕ್ಷಗಳು ಸಜ್ಜಾಗಿವೆ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ, ರಸಗೊಬ್ಬರ ಅಭಾವ, ಅನುದಾನ ತಾರತಮ್ಯ, ಒಳಮೀಸಲಾತಿ ವಿಳಂಬ, ಸುರ್ಜೇವಾಲ ಸಭೆಗಳ ವಿಷಯ, ಕಾನೂನು ಸುವ್ಯವಸ್ಥೆ ವೈಫಲ್ಯ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಪ್ರತಿಪಕ್ಷಗಳು ಅಣಿಯಾಗಿವೆ.

ಮತ್ತೊಂದೆಡೆ ವಿಪಕ್ಷಗಳ ಕಿಚ್ಚು ಆರಿಸಲು ಸಿದ್ದರಾಮಯ್ಯ ತಂಡವೂ ಸರ್ವ ಸನ್ನದ್ಧವಾಗಿದ್ದು, ಕೇಂದ್ರದ ಅನುದಾನ ತಾರತಮ್ಯ, ಮತಗಳ್ಳತನ ಹಾಗೂ ಮತಪಟ್ಟಿ ಹಗರಣ, ಅಭಿವೃದ್ಧಿಗೆ ವೆಚ್ಚಿಸಿರುವ ಹಣದ ಅಂಕಿ-ಅಂಶ ಸಹಿತ ತಿರುಗೇಟು ನೀಡಲು ಸಿದ್ಧತೆ ನಡೆಸಿದೆ. ಪರಿಣಾಮ ತಲಾದಾಯದಲ್ಲಿ ರಾಜ್ಯ ದೇಶದಲ್ಲೇ ನಂ.1 ಆಗಿರುವುದು, ಗ್ಯಾರಂಟಿ ಸಾಧನೆಯನ್ನು ಪ್ರಸ್ತಾಪಿಸಿಸಿ, ಬಿಜೆಪಿ ಅವಧಿಯಲ್ಲಿ ಮಾಡಿದ್ದ ಯಡವಟ್ಟು ರಟ್ಟು ಮಾಡಿ ತಿರುಗೇಟು ನೀಡಲಿದೆ. ಹೀಗಾಗಿ ಸೋಮವಾರದಿಂದ ಈ ತಿಂಗಳ 22ರವರೆಗೆ ಒಟ್ಟು 9 ದಿನ ಕಾಲ ನಡೆಯಲಿರುವ ಸದನದಲ್ಲಿ ಕದನ ಕೋಲಾಹಲದ ಕುತೂಹಲ ಮೂಡಿದೆ.

ಯತ್ನಾಳ್‌ ಬಣದ ನಡೆ ಕುತೂಹಲ

ಕಳೆದ ಅಧಿವೇಶನದಲ್ಲಿದ್ದ ಬಿಜೆಪಿ ಶಾಸಕರಾಗಿದ್ದ ಬಸನಗೌಡ ಪಾಟೀಲ್‌ ಯತ್ನಾಳ್ ಇದೀಗ ಉಚ್ಚಾಟನೆಗೊಂಡಿದ್ದಾರೆ. ಹೀಗಾಗಿ ರೆಬೆಲ್‌ ತಂಡ ಹೇಗೆ ಸಾಥ್‌ ನೀಡಲಿದೆ? ಬಣ ರಾಜಕೀಯದಿಂದ ಬಳಲುತ್ತಿರುವ ಬಿಜೆಪಿ ಈ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸದನದಲ್ಲಿ ಇಂದೇನು?

ಬೆಳಗ್ಗೆ 11 ಗಂಟೆಗೆ ಸದನ ಸಮಾವೇಶಗೊಳ್ಳಲಿದ್ದು, ಇತ್ತೀಚೆಗೆ ಅಗಲಿದ ಪೋಪ್‌ ಫ್ರಾನ್ಸಿಸ್‌, ಹಿರಿಯ ರಾಜಕಾರಣಿ ಡಾ.ಎನ್‌.ತಿಪ್ಪಣ್ಣ, ಸಾಹಿತಿಗಳಾದ ಎಚ್.ಎಸ್‌.ವೆಂಕಟೇಶಮೂರ್ತಿ, ಜಿ.ಎಸ್.ಸಿದ್ದಲಿಂಗಯ್ಯ ಸೇರಿ ಹಲವು ಗಣ್ಯರಿಗೆ ಸಂತಾಪ ಸೂಚನೆ ಸಲ್ಲಿಸಲಾಗುತ್ತದೆ.

ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತುಗೊಳಿಸಲಾಗಿತ್ತು. ಈ ನಿರ್ಣಯವನ್ನು ಮೇ 25 ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿತ್ತು. ಈ ಕುರಿತ ಸ್ಥಿರೀಕರಣ ಪ್ರಸ್ತಾವ ಮೊದಲ ದಿನವೇ ಮಂಡನೆಯಾಗಲಿದ್ದು, ವಿಧಾನಸಭೆ ಅನುಮೋದನೆ ನೀಡಬೇಕಿದೆ.

ಬಳಿಕ ಪ್ರಶ್ನೋತ್ತರ ಹಾಗೂ ಗಮನ ಸೆಳೆಯುವ ಸೂಚನೆ ಕಲಾಪ ನಡೆಯಲಿದ್ದು, ಈ ವೇಳೆ ಎತ್ತಿನ ಹೊಳೆಯಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆಗುತ್ತಿರುವ ಅನ್ಯಾಯ ಹಾಗೂ ಯೋಜನೆ ವಿಳಂಬದ ಬಗ್ಗೆ ತೀವ್ರ ಚರ್ಚೆಯಾಗುವ ಸಾಧ್ಯತೆಯಿದೆ.-ಬಾಕ್ಸ್-

20ಕ್ಕೂ ಹೆಚ್ಚು ವಿಧೇಯಕಗಳ ಮಂಡನೆ

ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದ ಕರ್ನಾಟಕ ರಾಜ್ಯ ಸಹಕಾರರ ಸಂಘಗಳ ತಿದ್ದುಪಡಿ ವಿಧೇಯಕ-2024 ಹಾಗೂ ಸೌಹಾರ್ದ ಸಂಘಗಳ ತಿದ್ದುಪಡಿ ವಿಧೇಯಕಗಳಿಗೆ ರಾಜ್ಯಪಾಲರ ಸಲಹೆ ಮೇರೆಗೆ ಕೆಲ ಬದಲಾವಣೆ ಮಾಡಲು ಸಚಿವ ಸಂಪುಟ ನಿರ್ಧರಿಸಿದ್ದು, 20ಕ್ಕೂ ಹೆಚ್ಚು ವಿಧೇಯಕಗಳನ್ನು ಈ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ.

===ದೇವದಾಸಿ ಮಗುವಿಗೆ ಪಿತೃತ್ವ ಹಕ್ಕು ನೀಡುವ ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವ, ನಿಷೇಧ, ಪರಿಹಾರ ಮತ್ತು ಪುನರ್‌ವಸತಿ) ವಿಧೇಯಕ- 2025, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಷರತ್ತು ಸಡಿಲಗೊಳಿಸುವ 2 ವಿಧೇಯಕ, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮ- 2025, ಗ್ರೇಟರ್‌ ಬೆಂಗಳೂರು ತಿದ್ದುಪಡಿ ಕಾಯಿದೆ, ಮೈಸೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2024 ಸೇರಿದಂತೆ ವಿವಿಧ ವಿಧೇಯಕ ಮಂಡನೆಯಾಗಲಿವೆ. ರಸಗೊಬ್ಬರ ಅಭಾವ ವಿಚಾರ ಪ್ರಸ್ತಾಪ:

ಸರ್ಕಾರದ ವಿರುದ್ಧ ಮುಗಿಬೀಳುವ ಕುರಿತು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈಗಾಗಲೇ ಸಭೆ ನಡೆಸಿದ್ದು, ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ, ಅತಿವೃಷ್ಟಿ, ರಸಗೊಬ್ಬರದ ಅಭಾವ, ಒಳಮೀಸಲಾತಿ ವಿಳಂಬ, ಅನುದಾನ ತಾರತಮ್ಯ, ಮತ್ತೊಮ್ಮೆ 625 ಕೋಟಿ ರು. ವೆಚ್ಚದೊಂದಿಗೆ ಜಾತಿ ಗಣತಿಗೆ ಮುಂದಾಗಿರುವುದನ್ನು ಪ್ರಶ್ನಿಸಲು ಚರ್ಚಿಸಿದ್ದಾರೆ. 

ಮುಖ್ಯವಾಗಿ ಕಪ್‌ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟಿರುವ ವಿಚಾರ ಉಭಯಸದನಗಳಲ್ಲಿ ಪ್ರತಿಧ್ವನಿಸಿ ಕಾವೇರಿದ ಚರ್ಚೆಗೆ ಕಾರಣವಾಗುವ ನಿರೀಕ್ಷೆ ಇದೆ. ಮತ್ತೊಂದೆಡೆ ನಾಗಮೋಹನ್‌ ದಾಸ್‌‍ ನೇತೃತ್ವದ ಏಕಸದಸ್ಯ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಒಳಮೀಸಲಾತಿ ವರದಿ ವಿಚಾರವೂ ಚರ್ಚೆಗೆ ಗ್ರಾಸವಾಗಲಿದೆ. ಒಳ ಮೀಸಲಾತಿ ಶೀಘ್ರವಾಗಿ ಜಾರಿ ಮಾಡುವಂತೆ ಉಭಯ ಸದನಗಳಲ್ಲಿ ಬಿಜೆಪಿ-ಜೆಡಿಎಸ್‌ ಧ್ವನಿ ಎತ್ತಲಿವೆ.ರಾಜ್ಯದಲ್ಲಿ ಕೊಲೆ, ದೌರ್ಜನ್ಯ ಹೆಚ್ಚಾಗಿರುವುದು, ಡ್ರಗ್ಸ್‌ ದಂಧೆಗೆ ಕಡಿವಾಣ ಬೀಳದಿರುವುದು, ಅಶ್ರಫ್, ಸುಹಾಸ್ ಶೆಟ್ಟಿ ಹಾಗೂ ಅಬ್ದುಲ್ ರೆಹ್ಮಾನ್ ಹತ್ಯೆ, ಸೈಬರ್ ಅಪರಾಧ ಏರಿಕೆಯ ಜತೆಗೆ ಧರ್ಮಸ್ಥಳ ಗಲಭೆ ಬಗ್ಗೆಯೂ ಪ್ರಸ್ತಾಪಿಸಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಬಿಜೆಪಿ ಆರೋಪಿಸುವ ಸಾಧ್ಯತೆಯಿದೆ.ಇನ್ನು ಸರ್ಕಾರದ ವಿರುದ್ಧ ಸ್ವಪಕ್ಷೀಯ ಸಚಿವರೇ ಧ್ವನಿ ಎತ್ತಿರುವುದು, ಅನುದಾನ ತಾರತಮ್ಯ, ಆರ್ಥಿಕ ದುಸ್ಥಿತಿ, ಸುರ್ಜೇವಾಲಾ ಸೂಪರ್‌ ಸಿಎಂ ರೀತಿ ಸಚಿವರು-ಶಾಸಕರ ಸಭೆ ನಡೆಸಿ ಸರ್ಕಾರಕ್ಕೆ ನಿರ್ದೇಶನ ನೀಡಿರುವುದು. 

ಸಾರಿಗೆ ಮುಷ್ಕರ, ಗೃಹಲಕ್ಷ್ಮೀ ಹಣ ವಿಳಂಬ, ರಾಜ್ಯಾದ್ಯಂತ ಉಂಟಾಗಿರುವ ಖಾತಾ ಗೊಂದಲ, ಓಸಿ-ಸಿಸಿ ಇಲ್ಲದೆ ಉಂಟಾಗಿರುವ ಸಮಸ್ಯೆ ಸೇರಿ ಎಲ್ಲಾ ವಿಷಯಗಳನ್ನೂ ಪ್ರಸ್ತಾಪಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಜತೆಗೆ ಪರಿಷತ್‌ನಲ್ಲಿ ನಾಲ್ವಡಿ ಕೃಷ್ಣರಾಜ್‌ ಒಡೆಯರ್‌ಗಿಂತ ಸಿದ್ದರಾಮಯ್ಯ ಹೆಚ್ಚು ಕೆಲಸ ಮಾಡಿದ್ದಾರೆಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಮುಂದಿಟ್ಟುಕೊಂಡು ಹೋರಾಡಬೇಕು ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ಪ್ರತಿಪಕ್ಷಗಳ ಕಿಚ್ಚು ಆರಿಸಲು ಸರ್ಕಾರ ಸಜ್ಜು:ಪ್ರತಿಪಕ್ಷಗಳು ಪ್ರಸ್ತಾಪಿಸುವ ಪ್ರತಿಯೊಂದು ವಿಷಯಕ್ಕೂ ಅಂಕಿ-ಅಂಶಗಳ ಸಹಿತ ತಿರುಗೇಟು ನೀಡಲು ಆಡಳಿತರೂಢ ಕಾಂಗ್ರೆಸ್‌ ಸಜ್ಜಾಗಿದೆ. ರಸಗೊಬ್ಬರ ಅಭಾವ ಉಂಟಾಗಲು ಕೇಂದ್ರ ಸರ್ಕಾರವೇ ಕಾರಣ ಎಂದು ಪ್ರತ್ಯಾರೋಪ ಮಾಡಲಿರುವ ಹಿನ್ನೆಲೆಯಲ್ಲಿ ವಾಗ್ವಾದ ನಿರೀಕ್ಷಿಸಲಾಗಿದೆ. ಈ ಮಧ್ಯೆ, ಲೋಕಸಭೆ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಮತಗಳವು ದಾಖಲೆಗಳನ್ನು ಕಾಂಗ್ರೆಸ್‌ ಬಿಡುಗಡೆ ಮಾಡುವ ಸಾಧ್ಯತೆಯಿದೆ. 

ಕೇಂದ್ರದಿಂದ ಆಗುತ್ತಿರುವ ಅನುದಾನ ತಾರತಮ್ಯ, ಬೆಲೆ ಏರಿಕೆ, ಹಣಕಾಸು ಆಯೋಗದಲ್ಲಿನ ಅನ್ಯಾಯ ಪ್ರಸ್ತಾಪಿಸಲಿದೆ. ಮೊದಲ ದಿನವಾದ ಸೋಮವಾರ ಸಂತಾಪ ಸೂಚನೆ ನಿರ್ಣಯ, ಪ್ರಶ್ನೋತ್ತರ ಹಾಗೂ ಕೆಲ ಗಮನ ಸೆಳೆಯುವ ಸೂಚನೆ ಮಾತ್ರ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಎರಡನೇ ದಿನ ಪ್ರತಿಪಕ್ಷಗಳ ಪ್ರತಾಪ ಜೋರಾಗಲಿದ್ದು, ಇದನ್ನು ಎದುರಿಸಿ ಪ್ರತಿಪಕ್ಷಗಳನ್ನು ಹೇಗೆ ಕಟ್ಟಿ ಹಾಕಬೇಕೆಂಬ ಬಗ್ಗೆ ಮಂಗಳವಾರ ಸಂಜೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಈ ವೇಳೆ ಕಾಂಗ್ರೆಸ್‌ ರಣತಂತ್ರ ರೂಪಿಸಲಿದೆ.

PREV
Read more Articles on

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ