ಧಾರವಾಡ:
ಕಿಟೆಲ್‌ರು ಕನ್ನಡ ಸಾರಸ್ವತಕ್ಕೆ ಸಲ್ಲಿಸಿದ ಅಮೋಘ ಸೇವೆಯ ಸ್ಮರಣೆ ಮಾಡುವುದು ಔಚಿತ್ಯಪೂರ್ಣ. ಹೀಗಾಗಿ ಅವರ ಬದುಕಿನ ಆಯಾಮಗಳ ಕುರಿತು ಅಧ್ಯಯನ ಮಾಡಲು ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳಲ್ಲಿ ಕಿಟಲ್‌ರ ಅಧ್ಯಯನ ಪೀಠ ಆರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.ಇಲ್ಲಿಯ ಬಾಸೆಲ್ ಮಿಶನ್ ಉಚ್ಚ ಶಿಕ್ಷಣ ಸಂಸ್ಥೆಯ ಕಿಟೆಲ್ ವಿಜ್ಞಾನ ಕಾಲೇಜು ಆವರಣದಲ್ಲಿ ಮಂಗಳವಾರ ರೆ. ಡಾ. ಫರ್ಡಿನಾಂಡ್ ಕಿಟೆಲ್ ಪ್ರತಿಮೆಯ ಅನಾವರಣ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಕಿಟೆಲ್ ಅವರು ರಚಿಸಿದ ನಿಘಂಟಿನಷ್ಟು ಅಪೂರ್ವವಾದ ನಿಘಂಟು ಕನ್ನಡದಲ್ಲಿ ಇನ್ನೊಂದಿಲ್ಲ. ಅದರ ಗಾತ್ರ, ಘನತೆ, ಸಂಗ್ರಹ, ಪದ್ಧತಿಗಳು ಅನನ್ಯ. ಅದರ ಪ್ರಕಟಣೆ ಇಂದಿನ ಸಂದರ್ಭದಲ್ಲೂ ಪ್ರಸ್ತುತ. ಹೀಗಾಗಿ ಕಿಟೆಲ್‌ರ ಕನ್ನಡಕ್ಕೆ ಅವರ ಸೇವೆ ಅಪಾರ. ಅದರಲ್ಲಿ ಮೊಟ್ಟ ಮೊದಲನೆಯದಾಗಿ ಕಿಟೆಲ್‌ರು ಇಂದಿಗೂ ''''''''ಅವಿಸ್ಮರಣೀಯ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ಜಿ.ಎಂ. ಹೆಗಡೆ, ಕನ್ನಡಾಂಬೆಗೆ ಕಿಟೆಲ್ ಕೊಡುಗೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಕಿಟಲ್ ಕೊಡುಗೆಗಳನ್ನು ಮರೆಯುತ್ತಿರುವುದು ಬೇಸರದ ಸಂಗತಿ. ಅವರು ನೀಡಿದ ಸಾಹಿತ್ಯದ ಕುರಿತು ಯುವ ಸಮುದಾಯಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಒಂದು ಟ್ರಸ್ಟ್ ರಚಿಸಲು ಎಲ್ಲ ಮಿಷಿನರಿಗಳು ಒಟ್ಟಾಗಿ ಸಂಕನೂರ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಬೇಕು ಎಂದರು.ಸಾನಿಧ್ಯ ವಹಿಸಿದ್ದ ಬಿಷಪ್ ರೆ. ಡಾ. ಮಾರ್ಟಿನ್ ಸಿ. ಬೋರ್ಗಾಯಿ ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ವಿಜಯಕುಮಾರ ದಂಡಿನ, ಶಂಕರ ಹಲಗತ್ತಿ, ಧನರಾಜ್ ತುಡಮೆ, ಪ್ರೇಮಾ ಬೋರ್ಗಾಯಿ ಇದ್ದರು. 13 ಜಿಲ್ಲೆಗಳಿಂದ ಕೈಸ್ತ ಪಾದ್ರಿಗಳು, ಉತ್ತರ ಸಭಾ ಪ್ರಾಂತದ ಪಧಾದಿಕಾರಿಗಳು ಮತ್ತು ಬಾಸೆಲ್ ಮಿಷನ್ ಉಚ್ಚ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಇದ್ದರು.