ಸೇವೆಗೆ ಆಂದೋಲನದ ರೂಪ ನೀಡಿದ ಸೇವಾ ಭಾರತಿ

KannadaprabhaNewsNetwork | Published : Aug 25, 2024 1:49 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಸೇವೆ ಎಂಬುದಕ್ಕೆ ಆಂದೋಲನ ರೂಪ ಒದಗಿಸಲು ಆರಂಭಗೊಂಡ ಸೇವಾ ಭಾರತಿ ಟ್ರಸ್ಟ್ ತನ್ನ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ವರ್ಷವಿಡಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಡಾ.ರಘು ಅಕಮಂಚಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸೇವೆ ಎಂಬುದಕ್ಕೆ ಆಂದೋಲನ ರೂಪ ಒದಗಿಸಲು ಆರಂಭಗೊಂಡ ಸೇವಾ ಭಾರತಿ ಟ್ರಸ್ಟ್ ತನ್ನ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ವರ್ಷವಿಡಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಡಾ.ರಘು ಅಕಮಂಚಿ ಹೇಳಿದರು.ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ಪದಾಧಿಕಾರಿಗಳ ಘೋಷಣೆ ಮತ್ತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 1999ರಲ್ಲಿ ಸೇವಾ ಭಾರತಿ ಸಂಸ್ಥೆ ಕಾರ್ಯಾರಂಭ ಮಾಡಿತು. ಸೇವೆಗೆ ದೊಡ್ಡದಾದ ಆಂದೋಲನ ರೂಪ ಒದಗಿಸುವ ಉದ್ದೇವನ್ನು ಹೊಂದಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಮಂಗೇಶ ಬೇಂಡೆ ಅವರ ಮಾರ್ಗದರ್ಶನದಲ್ಲಿ ಆರಂಭವಾದ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದಿದೆ ಎಂದು ಹೇಳಿದರು.ವಿಪತ್ತು ನಿರ್ವಹಣೆ, ಶಾಲೆಗಳ ಆರಂಭ ಸೇರಿದಂತೆ ವಿವಿಧ ರೂಪಗಳಲ್ಲಿ ಸೇವಾ ಕಾರ್ಯಗಳನ್ನು ಸಂಸ್ಥೆ ಮಾಡುತ್ತಿದೆ. ಈ ವರ್ಷ ರಜತ ಮಹೋತ್ಸವದ ಭಾಗವಾಗಿ ರಕ್ಷಾಬಂಧನ, ಸಸ್ಯಜ್ಞಾನ, ಕೊಳಗೇರಿ ಪ್ರದೇಶ, ಸರ್ಕಾರಿ ಶಾಲೆಗಳಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮ, ಮಕ್ಕಳಿಗಾಗಿ ಬಾಲ ಸಂಗಮ, ವಿದ್ಯಾರ್ಥಿನಿಯರಿಗಾಗಿ ಕಿಶೋರಿ ಸಂಗಮ, ಮಹಿಳಾ ಸಂಗಮ, ವಿವಿಧ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಸಮಾರಂಭಗಳನ್ನು ಏರ್ಪಡಿಸುವ ಯೋಜನೆಯಿದೆ. ಇಡೀ ಸಮಾಜವನ್ನು ಒಳಗೊಂಡು ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ ಎಂದು ವಿವರಿಸಿದರು.ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು ಮಾತನಾಡಿ, ಆರ್‌ಎಸ್ಎಸ್ ಇಲ್ಲದೇ ನಾವು ದೇಶವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜದ ಎಲ್ಲ ಸ್ತರಗಳಲ್ಲಿ ಸಂಘ ತನ್ನ ನಿಸ್ವಾರ್ಥ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದೆ. ಸೇವಾ ಭಾರತಿ ಸಂಸ್ಥೆಯ ರಜತ ಮಹೋತ್ಸವದ ಕಾರ್ಯಕ್ರಮಗಳು ವರ್ಷ ಪೂರ್ತಿ ಜರುಗುತ್ತಿವೆ. ಸಮಾಜದ ಪ್ರತಿಯೊಬ್ಬರು ಈ ಕಾರ್ಯದಲ್ಲಿ ಭಾಗವಹಿಸಬೇಕು. ಸೇವೆಗೆ ಪ್ರೇರಣೆ ನೀಡುವ ಕೆಲಸವನ್ನು ಈ ಸಂಘಟನೆ ಮಾಡುತ್ತ ಬಂದಿದ್ದು ಪ್ರತಿಯೊಬ್ಬರೂ ತನು, ಮನ, ಧನದಿಂದ ಸಹಾಯ ಮಾಡಬೇಕೆಂದು ಮನವಿ ಮಾಡಿದರು.ರಜತ ಮಹೋತ್ಸವ ರಾಜ್ಯ ಸಮಿತಿ ಕಾರ್ಯದರ್ಶಿ ಪ್ರೊ.ಎಚ್.ಡಿ.ಪಾಟೀಲ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸ್ವಾಗತ ಸಮಿತಿಯು ಸಂಘಟನಾ ಸಮಿತಿಯಾಗಿ ಕೆಲಸ ಮಾಡಬೇಕು. ವರ್ಷ ಪೂರ್ತಿ ಸಮಾಜಕ್ಕೆ ಸಮಯ ಮೀಸಲಿಟ್ಟು ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

ಜಿಲ್ಲಾ ಸಂಘಚಾಲಕ ಚಂದ್ರಶೇಖರ ದೊಡ್ಡಮನಿ, ಹಿರಿಯ ತಜ್ಞ ಡಾ.ಸುಭಾಸ್ ಪಾಟೀಲ, ಜಿಲ್ಲಾ ಸ್ವಾಗತ ಸಮಿತಿ ಅಧ್ಯಕ್ಷ ಮಹಾಂತೇಶ ಶೆಟ್ಟರ, ಕಾರ್ಯದರ್ಶಿ ಡಾ.ಗಂಗಾಧರ ಅಂಗಡಿ ವೇದಿಕೆಯಲ್ಲಿದ್ದರು.

Share this article