ಬಿ.ಲಕ್ಷ್ಮೀಕಾಂತಸಾ
ಮಳೆಗಾಗಿ ದೈವದ ಮೊರೆ ಹೋಗಿರುವ ರೈತಾಪಿ ವರ್ಗ ಪರ್ಜನ್ಯ ಜಪ, ಹೋಮ-ಹವನ ಮತ್ತು ಕಪ್ಪೆ ಮದುವೆಯಂತಹ ಮೌಢ್ಯಕ್ಕೆ ಜಾರಿದ್ದಾರೆ. ವಾಡಿಕೆಯಂತೆ ಜುಲೈ ಅಂತ್ಯದ ದಿನಗಳಲ್ಲಿ ತಾಲೂಕಿನಾದ್ಯಂತ ೧೫೦ ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಕೇವಲ ೬೦ ಮಿ.ಮೀ. ಮಳೆಯಾಗಿ ಭೀಕರ ಬರಕ್ಕೆ ಮುನ್ನುಡಿ ಬರೆದಂತಾಗಿದೆ. ಪೂರಕ ಮಳೆಯಾಗದೇ ಮಳೆಯಾಶ್ರಿತ ಕೃಷಿ ಭೂಮಿಗಳಲ್ಲಿ ಬಿತ್ತನೆ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಬಿತ್ತನೆ ಮಾಡಿದ ಬಹುತೇಕ ಬೆಳೆಗಳು ಒಣಗುತ್ತಿವೆ.
ಶ್ರಾವಣ ಮಾಸ ಕಳೆಗುಂದುವ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಬಹುತೇಕ ಗ್ರಾಮಗಳ ಕುಡಿಯುವ ನೀರಿನ ಬವಣೆಗಳ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.ತಾಲೂಕಿನ ೫೯ ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ ೧೪ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಾಲ-ಸೋಲ ಮಾಡಿ ಬಿತ್ತನೆಯಾಗಿದ್ದು, ಅದರಲ್ಲೂ ಮೆಕ್ಕೆಜೋಳ ಬೆಳೆ ಮಳೆ ಕೊರತೆಯಿಂದಾಗಿ ಜಮೀನುಗಳಲ್ಲಿಯೇ ಹರಗಲಾಗುತ್ತಿರುವುದು ತಾಲೂಕಿನ ಭೀಕರ ಬರದ ಬವಣೆಗೆ ಸಾಕ್ಷಿಯಾಗಿದೆ.
ತಾಲೂಕಿನ ಅತಿ ದೊಡ್ಡ ಹನಸಿ ಕೆರೆ ಸೇರಿದಂತೆ ದಸಮಾಪುರ, ಮಗಿಮಾವಿನಹಳ್ಳಿ, ಹಂಪಾಪಟ್ಟಣ ಮತ್ತಿತರೆ ಗ್ರಾಮಗಳ ೧೭ ಕೆರೆಗಳು ನೀರಿಲ್ಲದೇ ಬಣಗುಡುತ್ತಿವೆ. ಕೆರೆಗಳು ಬತ್ತಿರುವ ಪರಿಣಾಮ ತಾಲೂಕಿನ ೩೦ ಸಾವಿರಕ್ಕೂ ಹೆಚ್ಚು ಕೊಳವೆಬಾವಿಗಳಲ್ಲಿ ನೀರಿನ ಮರುಪೂರಣ ಅತಂತ್ರವಾಗಿದೆ. ತಾಲೂಕಿನಾದ್ಯಂತ ನೀರಾವರಿ ಆಶ್ರಯಿತ ಕೃಷಿ ಚಟುವಟಿಕೆಗಳ ಕಲರವವೂ ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ.
ತಾಲೂಕಿನ ೧೭ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುದಾನ ಒದಗಿಸುತ್ತಿಲ್ಲ ಎಂದು ಆರೋಪಿಸುತ್ತಾ ಕಾಲ ಕಳೆಯುತ್ತಿರುವ ಹಾಲಿ ಶಾಸಕರಾದ ನೇಮಿರಾಜ್ ನಾಯ್ಕ ಯೋಜನೆಯ ಜಾರಿಗೆ ಅಗತ್ಯವಾಗಿರುವ ನದಿ ನೀರಿನ ಸಂಗ್ರಹದ ಪರವಾನಗಿಗಾಗಿ ಮೊದಲು ತುಂಗಭದ್ರಾ ಮಂಡಳಿಯ ಅನುಮತಿ ಪಡೆಯಲಿ. ನಂತರ ಅನುದಾನಕ್ಕೆ ಹೋರಾಟ ನಡೆಸಲಿ ಎಂದು ರೈತರು ಒತ್ತಾಯಿಸಿದ್ದಾರೆ.
ಸರ್ಕಾರ ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಪ್ರತಿ ಎಕರೆಗೆ ₹೩೦ ಸಾವಿರ ಪರಿಹಾರ ಧನ, ಸಹಕಾರಿ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲಮನ್ನಾ ಮಾಡಬೇಕು. ಮತ್ತೆ ಹೊಸ ಸಾಲ ನೀಡಿ ರೈತರ ಹಿತಾಸಕ್ತಿ ಕಾಪಾಡಬೇಕು. ಬರ ಪರಿಹಾರ ಕಾಮಗಾರಿಗಳನ್ನು ಜಾರಿ ಮಾಡಬೇಕು ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ, ರವಿಕುಮಾರ್ ತಂಬ್ರಹಳ್ಳಿ, ಹುರಕಡ್ಲಿ ಶಿವಕುಮಾರ್ ಆಗ್ರಹಿಸಿದ್ದಾರೆ.