ಸವಣೂರು: ಪಟ್ಟಣದ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯ ಗುರು ಆರೋಪಿ ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಇದೊಂದು ಷಡ್ಯಂತ್ರವಾಗಿದೆ, ಕಾನೂನು ಕೈಗೆತ್ತಿಕೊಂಡಿದ್ದು ಇದನ್ನು ಖಂಡಿಸಿ ಬಿಜೆಪಿ, ಹಿಂದೂ ಪರ ಸಂಘಟನೆಗಳು ಡಿ.15 ರಂದು ಸವಣೂರು ಬಂದ್‌ಗೆ ಕರೆ ನೀಡಿವೆ.
ಶಿಕ್ಷಕ ಜಗದೀಶ ವಗ್ಗಣ್ಣನವರ 4-5 ತಿಂಗಳಿನಿಂದ 7ನೇ ತರಗತಿ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟುವುದು, ಅವರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವುದು ಮಾಡುತ್ತಿದ್ದಾರೆಂದು ಆರೋಪಿಸಿ ಮಕ್ಕಳ ಪಾಲಕರು ಮತ್ತು ಇತರೆ ಸಾರ್ವಜನಿರು ಬುಧವಾರ ಶಾಲೆಗೆ ಬಂದು ಗಲಾಟೆ ಮಾಡುತ್ತಿದ್ದರು. ನಾನು ಅಂದು ವೈಯಕ್ತಿಕ ವಿಚಾರವಾಗಿ ರಜೆಯಲ್ಲಿದ್ದು, ಸಹ ಶಿಕ್ಷಕ ಎ.ಎಂ. ಮಂತ್ರೋಡಿ ಪೋನ್ ಮೂಲಕ ವಿಷಯ ತಿಳಿಸಿದ್ದು, ನಾನು ತಕ್ಷಣ ಶಾಲೆಗೆ ಹೋಗಿ ನೋಡಿದಾಗ ಪಾಲಕರು ಶಿಕ್ಷಕ ವಗ್ಗಣ್ಣನವರ ಮೇಲೆ ಏಕಾಏಕಿ ಹಲ್ಲೆ ಮಾಡಿ ಠಾಣೆಗೆ ಹಿಡಿದುಕೊಂಡು ಹೋಗಿರುವ ವಿಷಯ ತಿಳಿಯಿತು. ಈ ಕುರಿತು ಮಕ್ಕಳಾಗಲಿ ಅವರ ಪಾಲಕರಾಗಲಿ ದೂರು ಕೊಡಲು ಮುಂದೆ ಬರದೆ ಇರುವ ಕಾರಣ, ಮೇಲಧಿಕಾರಿಗಳಿಗೆ ತಿಳಿಸಿ ತಡವಾಗಿ ಬಂದು ದೂರು ನೀಡಿರುತ್ತೇನೆ. ಮಕ್ಕಳ ಪಾಲಕರು ನಮ್ಮ ಮೇಲೆ ಒತ್ತಡ ಮಾಡುತ್ತಿದ್ದರಿಂದ ದೂರು ನೀಡಿರುತ್ತೇನೆ. ಈ ಬಗ್ಗೆ ತನಿಖೆ ಮಾಡಿ ಶಿಕ್ಷಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಿವರಿಸಿದ್ದಾರೆ.
ಡಿ.15 ರಂದು ಬಂದ್‌ಗೆ ಕರೆ: ಸವಣೂರಿನಲ್ಲಿ ಬುಧವಾರ ನಡೆದ ಶಿಕ್ಷಕನ ಮೇಲೆ ಹಲ್ಲೆ ಕುರಿತು ವಿವಿಧ ಹಿಂದುಪರ ಕಾರ್ಯಕರ್ತರು ಮತ್ತು ಹಿಂದು ಮುಖಂಡರು ಗುರುವಾರ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ, ತಹಸೀಲ್ದಾರ್ ರವಿಕುಮಾರ ಕೊರವರ ಮತ್ತು ಸಿಪಿಐ ಎಸ್.ದೇವಾನಂದ ಅವರೊಂದಿಗೆ ಸಭೆ ನಡೆಸಿದ್ದಾರೆ. ಇದೊಂದು ಷಡ್ಯಂತ್ರವಾಗಿದ್ದು, ಉರ್ದು ಶಾಲೆಯಲ್ಲಿ ಕರ್ತವ್ಯ ನಿರತ ಶಿಕ್ಷಕನ ಮೇಲೆ ದಬ್ಬಾಳಿಕೆ ಮಾಡಿ ಪ್ರಕರಣವನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡಲಾಗಿದೆ. ಹಲ್ಲೆ ಮಾಡಿ ಚಪ್ಪಲಿಯಿಂದ ಹೊಡೆದು ಚಪ್ಪಲಿ ಹಾರ ಹಾಕಿ ಶಾಲೆಯಿಂದ ಮಾರುಕಟ್ಟೆ ರಸ್ತೆ ಉದ್ದಕ್ಕೂ ಹೊಡೆದುಕೊಂಡು ಅಮಾನವಿಯವಾಗಿ ಎಳೆದುಕೊಂಡು ಪೊಲೀಸ್ ಠಾಣೆಗೆ ತಂದಿದ್ದಾರೆ. ಇದು ಹೀನ ಕೃತ್ಯ, ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ ಎಂದು ದೂರಿದ್ದಾರೆ.ಶಿಕ್ಷಕನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ, ಈ ಕುರಿತು ಪಕ್ಷಾತೀತವಾಗಿ ಹಿಂದು ಪರ ಸಂಘಟನೆಗಳು, ಎಲ್ಲ ಸಮಾಜದ ಹಿರಿಯರು, ಯುವಕರ ಸಮ್ಮುಖದಲ್ಲಿ ಡಿ. 15ರಂದು ಸವಣೂರ ಬಂದ್ ಕರೆ ನೀಡಿದ್ದಾರೆ. ಸವಣೂರ ತಾಲೂಕಿನ ವಿವಿಧ ಹಿಂದುಪರ ಸಂಘಟನೆಗಳು, ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಸವಣೂರು ಮಂಡಳ ಮಾಜಿ ಅಧ್ಯಕ್ಷ ಗಂಗಾಧರ ಬಾಣದ ಮನವಿ ಮಾಡಿಕೊಂಡಿದ್ದಾರೆ.ಸುಳ್ಳು ಆರೋಪ ಮಾಡಿ ಶಿಕ್ಷಕನಿಗೆ ಹಿಗ್ಗಾಮುಗ್ಗ ಥಳಿಸಿ, ಚಪ್ಪಲಿ ಹಾರ ಹಾಕಿಕೊಂಡು ಮೆರವಣಿಗೆ ಮಾಡುವುದು ಎಷ್ಟು ಸರಿ? ಈ ಘಟನೆಯಿಂದ ತಾಲೂಕಿನ ಸರ್ಕಾರಿ ನೌಕರರು ಭಯಗೊಂಡಿದ್ದಾರೆ. ಸರ್ಕಾರಿ ನೌಕರರಿಗೆ ಸೂಕ್ತ ರಕ್ಷಣೆ ಬೇಕು ಮತ್ತು ಕಾನೂನು ಕೈಗೆತ್ತಿಕೊಂಡವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ಸವಣೂರು ತಾಲೂಕು ನೌಕರ ಸಂಘದ ಅಧ್ಯಕ್ಷ ಬಸವರಾಜ ಹೊಸಮನಿ ಹೇಳಿದರು.