ಕನ್ನಡಪ್ರಭ ವಾರ್ತೆ ನರಗುಂದ
ಕೃಷಿ ಪ್ರಧಾನ ತಾಲೂಕಿನ ರೈತ ಸಮುದಾಯ, ವ್ಯಾಪಾರಸ್ಥರು, ಕಾರ್ಮಿಕರು ಈ ದೀಪಾವಳಿ ಹಬ್ಬವನ್ನು ವೈಭದಿಂದ ಆಚರಣಿ ಮಾಡುತ್ತಿದ್ದರು. ಆದರೆ ಈ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ ಬೆಳೆಗಳು ಮಳೆಯಾಗದೆ ತೇವಾಂಶ ಕೊರತೆಯಿಂದ ಒಣಗಿವೆ. ಜನರು ಹರ್ಷದಿಂದ ಈ ಹಬ್ಬವನ್ನು ಆಚರಸಲು ಬೆಳೆ ಕೈ ಕೊಟ್ಟಿದೆ, ಮತ್ತೊಂದು ಕಡೆ ಸರ್ಕಾರ ರೈತರಿಗೆ ನೀಡಬೇಕಾದ ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಬಿಡುಗಡೆ ಮಾಡದ್ದರಿಂದ ರೈತ ಸಮುದಾಯ ಕಂಗಾಲಾಗಿದೆ.
ನರಗುಂದ ಪಟ್ಟಣದಲ್ಲಿ ಬೀದಿ ಬದಿಯ ವ್ಯಾಪಾರಸ್ಥರು ದೀಪಾವಳಿಯ ಹಬ್ಬದ ಪ್ರಯುಕ್ತ ಈಗಾಗಲೇ ಮಾರುಕಟ್ಟೆಗೆ ಬಾಳೆ ಹಣ್ಣು, ಹೂವು, ಕಬ್ಬು, ಬಾಳಿ ಕಂಬ, ವಾಹನಗಳಿಗೆ ಹಾಕುವ ವಿವಿಧ ರೀತಿ ಗೊಂಡೆ, ರಿಬ್ಬನ್, ಜಾಲರಿ, ಮಾರಾಟ ಮಾಡಲು ತಂದಿದ್ದಾರೆ. ಆದರೆ ಇವುಗಳನ್ನು ಖರೀದಿ ಮಾಡಲು ಹೆಚ್ಚಿನ ಜನರು ಮಾರುಕಟ್ಟೆಗೆ ಬರಲಾರದ್ದು ಕಂಡು ಬರುತ್ತಿದೆ.ಪ್ರತಿ ವರ್ಷ ನಾವು ಈ ಪಟ್ಟಣದಲ್ಲಿ ದೀಪಾವಳಿ ಹಬ್ಬದಲ್ಲಿ ವಾಹನಗಳಿಗೆ ಗೊಂಡೆ, ರಿಬ್ಬನ್, ಜಾಲರಿ ಸೇರಿದಂತೆ ವಿವಿಧ ರೀತಿ ಸಾಮಗ್ರಿ ತಂದು ಮಾರಾಟ ಮಾಡಿ ₹50ರಿಂದ 60 ಸಾವಿರ ಲಾಭ ಆಗುತ್ತಿತ್ತು. ಆದರೆ ಈ ವರ್ಷ ವ್ಯಾಪಾರ ಇಲ್ಲವಾಗಿದೆ ಎನ್ನುತ್ತಾರೆ ಬೀದಿಬದಿ ವ್ಯಾಪಾರಸ್ಥ ಲಾಲಚಂದ.