ಡಿ.ಟಿ.ಶ್ರೀನಿವಾಸ್‌ ಗೆಲ್ಲಿಸಲು ಶಾಮನೂರು ಮನವಿ

KannadaprabhaNewsNetwork | Updated : May 30 2024, 12:54 AM IST

ಸಾರಾಂಶ

ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರಥಮ ಪ್ರಾಶಸ್ತ್ಯದ ಮತ ಕಾಂಗ್ರೆಸ್ಸಿಗೆ ನೀಡಲು ಡಾ.ಪ್ರಭಾ ಮತದಾರರಲ್ಲಿ ಮನವಿ ಮಾಡಿದರು.

- ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರಥಮ ಪ್ರಾಶಸ್ತ್ಯದ ಮತ ಕಾಂಗ್ರೆಸ್ಸಿಗೆ ನೀಡಲು ಡಾ.ಪ್ರಭಾ ಮತದಾರರಿಗೆ ಮನವಿಕನ್ನಡಪ್ರಭ ವಾರ್ತೆ, ದಾವಣಗೆರೆ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದೂ ಗ್ಯಾರಂಟಿ ಭರವಸೆ ಈಡೇರಿಸಿದ್ದು, ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‌ಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಶಿಕ್ಷಕರ ಕ್ಷೇತ್ರದ ಮತದಾರರು ಗೆಲ್ಲಿಸಬೇಕು ಎಂದು ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮನವಿ ಮಾಡಿದರು.

ನಗರದ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಕ್ಕೆ ಜನರು ಮಾರು ಹೋಗಿರುವ ಜನತೆ ಲೋಕಸಭೆ ಚುನಾವಣೆಯಲ್ಲೂ ಆಶೀರ್ವದಿಸಿದ್ದಾರೆ. ಈಗ ಪರಿಷತ್ ಚುನಾವಣೆ ಯಲ್ಲಿ ಡಿ.ಟಿ.ಶ್ರೀನಿವಾಸರನ್ನು ಶಿಕ್ಷಕ ಕ್ಷೇತ್ರದ ಮತದಾರರು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಿ, ಸರ್ಕಾರದ ಕೈಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದರು.

ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಜೂ.3ಕ್ಕೆ ಚುನಾವಣೆ ನಡೆಯಲಿದೆ. ಬೇರೆ ಪಕ್ಷದವರಿಗೆ ಮತ ನೀಡಿದರೆ, ಅಂತಹ ಮತ ವ್ಯರ್ಥವಾಗುತ್ತದೆ. ಕಾಂಗ್ರೆಸ್ ಪಕ್ಷವು ಕೊಟ್ಟ ಮಾತಿನಂತೆ ನಡೆದಿದೆ. ಈ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿಯಾದ ಡಿ.ಟಿ.ಶ್ರೀನಿವಾಸ್‌ಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ, ಗೆಲ್ಲಿಸಬೇಕು. ಈ ಮೂಲಕ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕರ ಪರವಾಗಿ ನಮ್ಮ ಸರ್ಕಾರ ಹಾಗೂ ಡಿ.ಟಿ.ಶ್ರೀನಿವಾಸ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಅವರು ಹೇಳಿದರು.

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷವು ಸೂಕ್ತ ಮತ್ತು ಒಳ್ಳೆಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಡಿ.ಟಿ.ಶ್ರೀನಿವಾಸ ಸ್ವಂತ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಶ್ರೀನಿವಾಸರ ಸಂಸ್ಥೆಯಲ್ಲಿ 8 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದು, ಸಾವಿರಾರು ಶಿಕ್ಷಕ-ಶಿಕ್ಷಕಿಯರಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಒಡನಾಟವಿರುವ ಶ್ರೀನಿವಾಸ ಈ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯೂ ಆಗಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಇನ್ನೂ 4 ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಕಾರ್ಯಗಳು ನಡೆಯಬೇಕಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ, ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಅಭ್ಯರ್ಥಿ ಡಿ.ಟಿ.ಶ್ರೀನಿವಾಸ ಮಾತನಾಡಿ, ಆಗ್ನೇಯ ಶಿಕ್ಷಕರ ಕ್ಷೇತ್ರದ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲವಾಗಿದೆ. ಜೂ.3ಕ್ಕೆ ಚುನಾವಣೆ ನಡೆದರೆ, ಜೂ.4ಕ್ಕೆ ಡಾ.ಪ್ರಭಾ ಮಲ್ಲಿಕಾರ್ಜುನ ಸಂಸದರಾಗಿ ಆಯ್ಕೆಯಾಗಿರುತ್ತಾರೆ. ಜಿಲ್ಲೆಯಲ್ಲಿ 4 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. 8500ಕ್ಕೂ ಹೆಚ್ಚು ಶಿಕ್ಷಕರ ನೇಮಕವಾಗಬೇಕಿದೆ. ಶಿಕ್ಷಣ ಮತ್ತು ಶಿಕ್ಷಕರ ಸಮಸ್ಯೆ ಪರಿಹರಿಸಲು, ಅನುದಾನಿತ ಶಿಕ್ಷಣ ಸಂಸ್ಥೆ ಉಳಿವಿಗೆ ಕಾಂಗ್ರೆಸ್ ಬದ್ಧವಾಗಿದೆ. 18 ವರ್ಷ ಪರಿಷತ್ ಸದಸ್ಯರಾದವರು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕರ ಬಗ್ಗೆ ಚಕಾರ ಎತ್ತಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ನೂರಾರು ಸಮಸ್ಯೆಗಳ ನಿವಾರಣೆಗೆ ನನಗೊಂದು ಅವಕಾಶ ಮಾಡಿ ಕೊಡಿ ಎಂದು ಕೇಳಿಕೊಂಡರು.

ಹಿರಿಯ ಮುಖಂಡರು, ಕೈಗಾರಿಕೋದ್ಯಮಿಗಳಾದ ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ.ಕೆ. ಶೆಟ್ಟಿ, ಪಾಲಿಕೆ ಸದಸ್ಯರಾದ ಜಿ.ಎಸ್. ಮಂಜುನಾಥ ಗಡಿಗುಡಾಳ, ಎ.ನಾಗರಾಜ ಇತರರು ಇದ್ದರು................ಕ್ಯಾಪ್ಷನ್: 29ಕೆಡಿವಿಜಿ8, 9:

ದಾವಣಗೆರೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ ಪರ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಲೋಕಸಭಾ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article