ಸಿದ್ದಾಪುರ: ಶ್ರೀ ರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ತಾಲೂಕಿನ ಭಾನ್ಕುಳಿಯ ಶ್ರೀ ರಾಮದೇವಮಠ ಹಾಗೂ ಗೋಸ್ವರ್ಗದಲ್ಲಿ ಮೇ ೧ರಿಂದ ೪ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಂಕರ ಪಂಚಮಿ ಉತ್ಸವ ನಡೆಯಲಿದೆ ಎಂದು ಶಂಕರ ಪಂಚಮಿ ಉತ್ಸವ ಸಮಿತಿ ಗೌರವಾಧ್ಯಕ್ಷ ಜಿ.ಕೆ. ಹೆಗಡೆ ಗೋಳಗೋಡ ಹೇಳಿದರು.
ಮೇ ೨ರಂದು ಶಂಕರ ಪಂಚಮಿ ಪ್ರಯುಕ್ತ ಸ್ವರ್ಣಮಂಟಪಾಲಂಕೃತ ಶ್ರೀಕರಾರ್ಚಿತ ಪೂಜೆ, ಸ್ವರ್ಣಭಿಕ್ಷೆ, ಸಂಧ್ಯಾಮಂಗಲ ಕಾರ್ಯಗಳು ನಡೆಯಲಿವೆ. ಕೃಷಿಕರ ಸಂಕಷ್ಟ ನಿವಾರಣೆಗಾಗಿ ೧೦೦೮ ತೆಂಗಿನ ಕಾಯಿ, ವೀಳ್ಯದೆಲೆ, ಅಡಕೆ ಹಾಗೂ ವಿವಿಧ ಪುಷ್ಪಗಳ ಸಹಿತ ಶ್ರೀ ಮಹಾಪಾದುಕೆಗೆ ಸ್ವತಃ ರಾಘವೇಶ್ವರ ಭಾರತೀ ಶ್ರೀಗಳು ಮಹಾಪೂಜೆ ನೆರವೇರಿಸಿ, ೧೦೦೮ ವಸ್ತುಗಳ ನೈವೇದ್ಯ ಅರ್ಪಿಸುವರು.
ಮೇ ೩ರಂದು ರಾಘವೇಶ್ವರ ಭಾರತೀ ಶ್ರೀಗಳ ಆಶಯದಂತೆ ಗೋಸ್ವರ್ಗದ ೧ ಎಕರೆ ಪ್ರದೇಶದಲ್ಲಿ ಭಾರತ ವರ್ಷದ ವಿನ್ಯಾಸದ ಯಾಗಶಾಲೆಯಲ್ಲಿ ಪಂಚಾಯತನ ಶಿಲೆಗಳ ಮೂಲಸ್ಥಾನಗಳ ಪುಣ್ಯಸ್ಥಳದಲ್ಲಿ ದೇವರುಗಳ ಪೂಜೆ ಹಾಗೂ ಸೂರ್ಯ, ಗಣಪತಿ, ಅಂಬಿಕೆ, ಶಿವ, ವಿಷ್ಣು ಪ್ರೀತ್ಯರ್ಥ ಹವನಗಳು ಜರುಗಲಿವೆ. ಆನಂತರ ಧರ್ಮಸಭೆ ಜರುಗಲಿದ್ದು, ಶ್ರೀಕ್ಷೇತ್ರ ಶಕಟಪುರದ ಜಗದ್ಗುರು ಬದರೀ ಶಂಕರಾಚಾರ್ಯ ಶ್ರೀ ವಿದ್ಯಾಭಿನವ ಕೃಷ್ಣಾನಂದತೀರ್ಥ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿವರು. ಶ್ರೀ ಶಂಕರರ ಸ್ತೋತ್ರದ ಪುಸ್ತಕಗಳನ್ನು ನೀಡಲಾಗುವುದು. ಆನಂತರ ಆಶೀರ್ವಚನ, ಅನುಗ್ರಹ ಮಂತ್ರಾಕ್ಷತೆ ನೀಡಲಾಗುವುದು. ಸಂಜೆ ಗೋ ಗಂಗಾರತಿ ಕಾರ್ಯಕ್ರಮದಲ್ಲಿ ಗೋಸ್ವರ್ಗದ ಸುತ್ತ ದೀಪಗಳ ಪ್ರಜ್ವಲನೆ ಹಾಗೂ ಮಾರವಾಡಿ ಸಮಾಜದವರ ವಿಶೇಷ ನೃತ್ಯ ಕಾರ್ಯಕ್ರಮ ಜರುಗುವುದು.ಮೇ ೪ರಂದು ಗೋಸ್ವರ್ಗದಲ್ಲಿ ಬೆಳಗ್ಗೆ ೧೦ಕ್ಕೆ ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಗೋವುಗಳ ಮೇಲೆ ನಡೆಯುವ ದೌರ್ಜನ್ಯದ ವಿಮುಕ್ತಿ, ಅತಿವೃಷ್ಟಿ, ಅನಾವೃಷ್ಟಿಗಳ ವಿಮೋಚನೆ, ಬೆಳೆಗಳಿಗೆ ಬರುತ್ತಿರುವ ರೋಗಗಳ ಪರಿಮಾರ್ಜನೆಗೆ ಏಕಕಾಲದಲ್ಲಿ ೩೦ ಕುಂಡಗಳಲ್ಲಿ ಕಾಮಧೇನು ಹವನ ಜರುಗುವುದು. ಇದಲ್ಲದೆ ೪೦ಕ್ಕೂ ಹೆಚ್ಚು ಹವನಗಳು ಜರುಗುವುದು. ಆನಂತರ ಮಾತೃತ್ವಮ್ ಸಮಾವೇಶ, ಗೋಸೇವೆಯಲ್ಲಿ ತೊಡಗಿಕೊಂಡ ೫ ಸಾಧಕರಿಗೆ ಗೋಪಾಲ ಗೌರವ ಪ್ರಶಸ್ತಿ ಪ್ರದಾನ, ಮಾತೃತ್ವಮ್ ದಾನಿಗಳಿಗೆ ದಾನ-ಮಾನ, ಲಕ್ಷ ಭಾಗಿನಿಯರಿಗೆ ಆಶೀರ್ವಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿ.ಕೆ. ಹೆಗಡೆ ಗೋಳಗೋಡ ಕೋರಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಶ್ರೀಮಠ, ಶಂಕರಪಂಚಮಿ ಚಂಚಮಿ ಉತ್ಸವ ಸಮಿತಿ, ಗೋಸ್ವರ್ಗದ ವಿವಿಧ ಪ್ರಮುಖರಾದ ಮಹೇಶ ಭಟ್ಟ ಚಟ್ನಳ್ಳಿ, ಎಂ.ಜಿ. ರಾಮಚಂದ್ರ, ಎಂ.ವಿ. ಹೆಗಡೆ ಮುತ್ತಿಗೆ. ಎಂ.ಎಂ. ಹೆಗಡೆ ಮಗೇಗಾರ, ವೀಣಾ ಭಟ್, ಜಿ.ಎಸ್. ಭಟ್ ಕಲ್ಲಾಳ, ಶಾಂತಾರಾಮ ಹಿರೇಮನೆ, ಜಿ.ಆರ್. ಹೆಗಡೆ, ಸತೀಶ ಹೆಗಡೆ, ರಾಘವೇಂದ್ರ ಮುಸವಳ್ಳಿ ಮುಂತಾದವರಿದ್ದರು.