ಅದ್ವೈತ ಸಿದ್ಧಾಂತಕ್ಕೆ ನೆಲೆಗಟ್ಟು ಒದಗಿಸಿದವರು ಶಂಕರಾಚಾರ್ಯರು

KannadaprabhaNewsNetwork | Published : May 28, 2024 1:01 AM

ಸಾರಾಂಶ

ಅದ್ವೈತ ಸಿದ್ಧಾಂತಕ್ಕೆ ತಾತ್ವಿಕ ನೆಲೆಗಟ್ಟನ್ನು ಒದಗಿಸಿಕೊಟ್ಟು ಅದನ್ನು ದರ್ಶನದ ಮಟ್ಟಕ್ಕೆ ಕೊಂಡೊಯ್ದು ಪ್ರಚುರ ಪಡೆಸಿದ ಕೀರ್ತಿ ಆದಿ ಗುರು ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದು ಅಗಡಿ ಆನಂದ ವನದ ವಿಶ್ವನಾಥ ಚಕ್ರವರ್ತಿ ಸ್ವಾಮಿಗಳು ಹೇಳಿದರು.

ಶಿಗ್ಗಾಂವಿ: ಅದ್ವೈತ ಸಿದ್ಧಾಂತಕ್ಕೆ ತಾತ್ವಿಕ ನೆಲೆಗಟ್ಟನ್ನು ಒದಗಿಸಿಕೊಟ್ಟು ಅದನ್ನು ದರ್ಶನದ ಮಟ್ಟಕ್ಕೆ ಕೊಂಡೊಯ್ದು ಪ್ರಚುರ ಪಡೆಸಿದ ಕೀರ್ತಿ ಆದಿ ಗುರು ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದು ಅಗಡಿ ಆನಂದ ವನದ ವಿಶ್ವನಾಥ ಚಕ್ರವರ್ತಿ ಸ್ವಾಮಿಗಳು ಹೇಳಿದರು.

ತಾಲೂಕಿನ ಬಂಕಾಪುರ ಪಟ್ಟಣದ ಶ್ರೀ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ನಡೆದ ಆದಿಗುರು ಶಂಕರಾಚಾರ್ಯರ ೮೪ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ಸನಾತನ ಭಾರತೀಯ ಸಂಸ್ಕೃತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಆಚಾರ್ಯರಲ್ಲಿ ಶಂಕರಾಚಾರ್ಯರು ಮೊದಲಿಗರು. ಸತ್ಯವನ್ನು ಅರಿಯಲಾರದ ಮನುಷ್ಯ ನಾನು ನನ್ನದು ಎಂಬ ಅಹಂಭಾವ ತೊರೆದು ಬ್ರಹ್ಮ ಒಬ್ಬನೇ ಸತ್ಯ. ಉಳಿದೆಲ್ಲವೂ ಮಿಥ್ಯೆ ಎಂಬುದನ್ನು ಅರಿಯಬೇಕಿದೆ ಎಂದರು.

ಶಂಕರಾಚಾರ್ಯರು ಬೌದ್ಧಿಕ ದೈತ್ಯನಾಗಿ ಭಾಷಾಶಾಸ್ತ್ರ ಮೇಧಾವಿಯಾಗಿ ಬೆಳೆದು ಬಂದವರಾಗಿದ್ದರು. ಅವರು ತೋರಿದ ಬುದ್ಧಿವಂತಿಕೆ ಅವರನ್ನು ಪ್ರಕಾಶಮಾನವಾಗಿ ಬೆಳಗುವಂತೆ ಮಾಡಿತು. ಅವರು ಬಾಲ್ಯದಲ್ಲಿಯೇ ಸಂಸ್ಕೃತಭಾಷೆ, ವೇದಗಳನ್ನು ನಿರರ್ಗಳವಾಗಿ ಓದಿ ಪಠಿಸಬಲ್ಲವರಾಗಿದ್ದರು. ಅವರು ತಮ್ಮ ೧೨ನೇ ವಯಸ್ಸಿನಲ್ಲಿಯೇ ಮನೆ ತೊರೆದು ಸನ್ಯಾಸತ್ವವನ್ನು ಸ್ವೀಕರಿಸಿ ಆಧ್ಯಾತ್ಮ ಲೋಕವನ್ನು ಸೃಷ್ಟಿಸಲು ಕಾಲ್ನಡಿಗೆಯ ಮೂಲಕ ದೇಶವನ್ನು ಸುತ್ತಿದವರಾಗಿದ್ದರು. ಅವರು ತಮ್ಮ ೩೨ನೇ ವಯಸ್ಸಿನಲ್ಲಿ ದೇಹ ತ್ಯಾಗ ಮಾಡಿದರು. ಅವರು ತಮ್ಮ ೨೨ ವರ್ಷದ ಜೀವಿತಾ ಅವಧಿಯಲ್ಲಿ ಸಮಾಜಕ್ಕಾಗಿಯೇ ತಮ್ಮ ಜೀವನವನ್ನು ಸಮರ್ಪಿಸಿಕೊಂಡವರಾಗಿದ್ದರು ಎಂದು ನುಡಿದರು.

ಜಯಂತ್ಯುತ್ಸವ ನಿಮಿತ್ತ ಪ್ರಾತ:ಕಾಲ ಪಂಪಾ ವಿರೂಪಾಕ್ಷೇಶ್ವರರಿಗೆ ಹಾಗೂ ಶಂಕರಾಚಾರ್ಯರ ಭಾವಚಿತ್ರಕ್ಕೆ ಹೋಮ ಹವನ ರುದ್ರಪಠಣ, ವೇದ ಆಗಮ ಸಂಗೀತ ಭಕ್ತಿಗೀತೆಗಳ ಗಾಯನ ಭಜನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ ಅನ್ನಪ್ರಸಾದ ಸೇವೆ ನಡೆಯಿತು.

ಪ್ರಕಾಶ ಪುಜಾರ, ಕೃಷ್ಣಾ ಕುಲಕರ್ಣಿ, ಜೀವಣ್ಣ ಸಂಕಣ್ಣವರ, ವಾಸುದೇವ ಕುಲಕರ್ಣಿ, ವಿಜಯ್ ಜೋಶಿ, ಮಾಲತೇಶ ಪೂಜಾರ, ಚೈತನ್ಯ, ದತ್ತಾತ್ರೇಯ, ಅಖಿಲೇಶ ಜೋಶಿ, ಪ್ರಕುಲ ಜೋಶಿ, ಸಹನಾ ಸಂಕಣ್ಣವರ, ಸರಿತಾ ಜೋಶಿ, ಶ್ರೀದೇವಿ ಇಬ್ರಾಹಿಂಪೂರ, ಹೇಮಾವತಿ, ಲಲಿತಾ, ಪ್ರಮಿಳಾಬಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article