ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀ ಆದಿ ಶಂಕರಾಚಾರ್ಯರು ಶಿವನ ಅವತಾರವೆಂದು ನಂಬಲಾಗಿದೆ. ಅವರು ವಿಶ್ವದ ಶ್ರೇಷ್ಠ ಗುರು. ಏಕ ದೇವರ ವಿವಿಧ ರೂಪಗಳನ್ನು ಪೂಜಿಸುವ ದೇವತೆಗಳ ಆರಾಧನೆಯನ್ನು ಸ್ಥಾಪಿಸಿದವರು ಎಂದು ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ತಿಳಿಸಿದರು.ಆದಿಚುಂಚನಗಿರಿ ಶ್ರೀ ಕ್ಷೇತ್ರದ ನಗರದ ಶಂಕರಪುರ ಬಡಾವಣೆಯ ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶ್ರೀ ಮಠದ ವತಿಯಿಂದ ಶ್ರೀ ಶಂಕರಾಚಾರ್ಯರ ವಿಶೇಷ ಪೂಜಾ ಕಾರ್‍ಯಕ್ರಮವನ್ನು ಪ್ರತಿ ವರ್ಷವೂ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಕೇರಳದ ಕಾಲಡಿ ಗ್ರಾಮದಲ್ಲಿ ನಂಬೂದ್ರಿ ಬ್ರಾಹ್ಮಣ ದಂಪತಿಯಾದ ಶಿವಗುರು ಮತ್ತು ಆರ್ಯಾಂಬ ಅವರಿಗೆ ಆದಿ ಶಂಕರಾಚಾರ್ಯರು ಜನಿಸಿದರು. ದಂಪತಿ ದೀರ್ಘಕಾಲದವರೆಗೆ ಮಕ್ಕಳಿಲ್ಲದೇ ಉಳಿದಿದ್ದರು, ಆದ್ದರಿಂದ ಮಕ್ಕಳಿಗಾಗಿ ಪ್ರಾರ್ಥಿಸಿದರು.ನಂತರ ಪರಶಿವನು ದಂಪತಿಗೆ ಕನಸಿನಲ್ಲಿ ಕಾಣಿಸಿಕೊಂಡು ಅಲ್ಪಾವಧಿಯ ಜೀವನವನ್ನು ಹೊಂದುವ ಮಗನ ಆಯ್ಕೆಯ ಭರವಸೆ ನೀಡಿದರು. ಅಲ್ಪಾವಧಿಯ ಮಗನನ್ನು ಆರಿಸಿಕೊಂಡರು. ಆ ಮೂಲಕ ಶಂಕರರು ಜನಿಸಿದರು ಎಂದು ವಿವರಿಸಿದರು.
ಗೋವಿಂದ ಗುರುಗಳು ಶಂಕರನನ್ನು ತನ್ನ ಶಿಷ್ಯನನ್ನಾಗಿ ಸ್ವೀಕರಿಸಿದರು. ಶಂಕರರಿಗೆ ವಿವಿಧ ವೇದಗಳ ಜೊತೆಗೆ ಅದ್ವೈತವನ್ನೂ ಕಲಿಸಲಾಯಿತು. ನಂತರ ತಾವು ಕಲಿತ ಅದ್ವೈತ ವಿದ್ಯೆಯನ್ನು ಜಗತ್ತಿನಾದ್ಯಂತ ಸಾರಲು ದೇಶ ಪರ್ಯಟನೆಯಲ್ಲಿ ತೊಡಗಿದರು ಎಂದು ಹೇಳಿದರು.ಶಂಕರಪುರದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಾಲಯವನ್ನು ಸುರೇಶಾನಂದಸ್ವಾಮಿಗಳು ಸ್ಥಾಪಿಸಿದರು. ವಯೋಧರ್ಮ ಮುಗಿಯುವ ವೇಳೆ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗೆ ದೇವಾಲಯವನ್ನು ಒಪ್ಪಿಸಿ ದೇಹತ್ಯಾಗ ಮಾಡಿದರು. ನಂತರ ಇದೇ ಸ್ಥಳದಲ್ಲಿ ಅವರ ದೇಹವನ್ನು ಸಂಸ್ಕಾರ ಮಾಡಲಾಯಿತು. ಬಳಿಕ ಈ ಸನ್ನಿದಿಯನ್ನು ಶಿವನ ಮಂದಿರವಾಗಿ ಶ್ರೀಗಳು ಮಾಡಿದರು. ಜೊತೆಗೆ ಶ್ರೀ ಶಂಕರಾಚಾರ್‍ಯರು ಹಾಗೂ ಶ್ರೀ ಬಾಲಗಂಗಾಧರಸ್ವಾಮೀಜಿಯ ಮೂರ್ತಿಗಳನ್ನು ಗರ್ಭಗುಡಿಯ ಅಕ್ಕ ಪಕ್ಕದಲ್ಲಿ ಸ್ಥಾಪಿಸಿ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಜೊತೆಗೆ ಪ್ರತಿ ವರ್ಷವೂ ಶಂಕರಾಚಾರ್‍ಯರ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಗುರುದ್ವಯರ ವಿಗ್ರಹ ಸ್ಥಾಪಿಸಿ ಪೂಜೆ ಸಲ್ಲಿಸುವುದರ ಜೊತೆಗೆ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗದಂತಹ ಕಾರ್‍ಯಕ್ರಮಗಳನ್ನು ಮಾಡುತ್ತಿವೆ ಎಂದು ಹೇಳಿದರು. ದೇವಾಲಯದ ಅರ್ಚಕರು, ಸಿಬ್ಬಂದಿ, ಭಕ್ತಾದಿಗಳು ಹಾಜರಿದ್ದರು.