ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕಿನ ಶಾಂತಳ್ಳಿ ಸರ್ಕಾರಿ ಮಾದರಿ ಪಾಥಮಿಕ ಶಾಲೆಯು ಸ್ಥಾಪನೆಗೊಂಡು 100 ವರ್ಷಗಳು ತುಂಬಿದ ಹಿನ್ನೆಲೆ ಶತಮಾನೋತ್ಸವ ಸಮಾರಂಭ ನಡೆಸಲು ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಸಮಿತಿ ಅಧ್ಯಕ್ಷ ಎಸ್.ಜಿ. ಮೇದಪ್ಪ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನೋತ್ಸವ ಅಂಗವಾಗಿ 4 ರಿಂದ 6ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 4ರಂದು ಬೆಳಿಗ್ಗೆ 9.30ರಿಂದ ಶಾಂತಳ್ಳಿಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಶ್ರಯದಲ್ಲಿ ಶಿಬಿರ ನಡೆಯಲಿದ್ದು, ನುರಿತ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ತಾಲೂಕು ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರು ಶಿಬಿರ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ಶಿಬಿರದಲ್ಲಿ ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಪ್ರಸೂತಿ ಹಾಗೂ ಸ್ತ್ರೀ ರೋಗ ವಿಭಾಗ, ಮೂಳೆ ಮತ್ತು ಕೀಲು ವಿಭಾಗ, ಕಣ್ಣಿನ ವಿಭಾಗ, ಮಾನಸಿಕ ಆರೋಗ್ಯ ವಿಭಾಗ, ಶ್ವಾಸಕೋಶ ರೋಗಗಳ ವಿಭಾಗ, ಕಿವಿ ಮೂಗು ಗಂಟಲು ವಿಭಾಗ, ಚರ್ಮರೋಗಗಳ ವಿಭಾಗ, ದಂತ ಚಿಕಿತ್ಸಾ ವಿಭಾಗ, ಮಕ್ಕಳ ವಿಭಾಗಕ್ಕೆ ಸಂಬಂಧಿಸಿದ ತಜ್ಞ ವೈದ್ಯರು ಭಾಗಿಯಾಗಲಿದ್ದು, ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದರು.
ಆನ್‌ಲೈನ್ ಹೊರರೋಗಿಗಳ ನೋಂದಣಿ, ಆಯುಷ್ಮಾನ್ ಭಾರತ್ ನೋಂದಣಿ, ಯುಡಿಐಡಿ ವಿಕಲಚೇತನರ ಕಾರ್ಡ್ ನೋಂದಣಿ, ಅಂಗಾಂಗ ದಾನ ನೋಂದಣಿ, ಉಚಿತ ಡಯಾಬಿಟಿಕ್ ಹಾಗೂ ಬಿಪಿ ತಪಾಸಣೆ, ರಕ್ತದಾನ ಶಿಬಿರ, ಇಸಿಜಿ ತಪಾಸಣೆ, ಎಕ್ಸರೇ, ಉಚಿತ ಔಷಧಿ ವಿತರಣೆಯೂ ನಡೆಯಲಿದೆ ಎಂದು ಮಾಹಿತಿಯಿತ್ತರು.ಸಾರ್ವಜನಿಕರು ಆರೋಗ್ಯ ತಪಾಸಣೆಗೆ ಬರುವಾಗ ತಮ್ಮ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಹಾಗೆಯೇ ಸರ್ಕಾರದ ಆರೋಗ್ಯ ಯೋಜನೆಗಳ ಫಲಾನುಭವಿಗಳಾಗಲು ಯಶಸ್ವಿನಿ ಕಾರ್ಡ್ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು ಆರ್.ಡಿ. ಸಂಖ್ಯೆಯುಳ್ಳ ಜಾತಿ ದೃಢೀಕರಣ ಪತ್ರ ತರಬೇಕಿದೆ. ಹೆಚ್ಚಿನ ಮಾಹಿತಿಗೆ ಡಾ. ಧಜಂಜಯ್, ಮೊ: 9945607166 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್, ಮೆಡಿಕಲ್ ಕಾಲೇಜಿನ ಡೀನ್ ಡಾ. ಎ.ಜೆ. ಲೋಕೇಶ್, ಅಧೀಕ್ಷಕ ಡಾ. ಸೋಮಶೇಖರ್, ಡಾ. ಧನಂಜಯ್ ಮೇದಪ್ಪ, ಸಮಿತಿ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಗ್ರಾ.ಪಂ. ಅಧ್ಯಕ್ಷೆ ಸವಿತ ವಿಜಯ್, ಮಾಜಿ ಅಧ್ಯಕ್ಷ ಕೆ.ಟಿ. ರಾಜಶೇಖರ್, ಗ್ರಾಮಾಧ್ಯಕ್ಷ ಜಿ.ಡಿ. ಬಸವರಾಜು, ಯುವಕ ಸಂಘದ ಅಧ್ಯಕ್ಷ ಸಜನ್ ಮಂದಣ್ಣ, ಪಿಡಿಓ ವೇಣುಗೋಪಾಲ್ ಸೇರಿದಂತೆ ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.5 ರಂದು ಶತಮಾನೋತ್ಸವ ಸಂಭ್ರಮದ ಅಂಗವಾಗಿ ಹೋಬಳಿ ಮಟ್ಟದ ಕ್ರೀಡಾಕೂಟ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್ ಉದ್ಘಾಟಿಸಲಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಸಿ. ಗುರುಪ್ರಸಾದ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
6ರಂದು ಬೆಳಗ್ಗೆ 9.30ಕ್ಕೆ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಕಲಾತಂಡಗಳೊಂದಿಗೆ ಶಾಂತಳ್ಳಿಯ ಮುಖ್ಯ ಬೀದಿಯಲ್ಲಿ 100 ಪೂರ್ಣಕುಂಭಗಳ ಸಹಿತ ಮೆರವಣಿಗೆ ಜರುಗಲಿದೆ. 11 ಗಂಟೆಗೆ ಶಾಲೆಯ ಪ್ರವೇಶ ದ್ವಾರದ ಉದ್ಘಾಟನೆಯನ್ನು ದಾನಿ ಹಾಗೂ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ನೆರವೇರಿಸಲಿದ್ದಾರೆ. ಶತಮಾನೋತ್ಸವದ ನೆನಪಿಗೆ ಶಾಲಾ ಆವರಣದಲ್ಲಿ ನಿರ್ಮಿಸಿರುವ ಶಾರದಾಂಬೆಯ ಪ್ರತಿಮೆ ಉದ್ಘಾಟನೆಗೊಳ್ಳಲಿದೆ ಎಂದು ಮೇದಪ್ಪ ತಿಳಿಸಿದರು.ಬೆಳಗ್ಗೆ 11.30 ಕ್ಕೆ ಶತಮಾನೋತ್ಸವ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಉದ್ಘಾಟಿಸಲಿದ್ದಾರೆ. ಶಾಸಕ ಡಾ. ಮಂತರ್ ಗೌಡ, ಸಂಸದ ಯದುವೀರ್ ಒಡೆಯರ್, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಎಂ.ಎಲ್.ಸಿ. ಸುಜಾ ಕುಶಾಲಪ್ಪ, ಮಾಜಿ ಸಚಿವ ಅಪ್ಪಚ್ಚು ರಂಜನ್, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಸೇರಿದಂತೆ ಇತರರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಮೂರು ದಿನಗಳ ಕಾಲವೂ ಸಮಾರಂಭದಲ್ಲಿ ಭಾಗಿಯಾಗುವ ಸಾರ್ವಜನಿಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಸಮಾರಂಭದಲ್ಲಿ ಶಾಂತಳ್ಳಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಹಳೆಯ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು.6 ರಂದು ಸಂಜೆ 5 ರಿಂದ 6ರ ವರೆಗೆ ಸರಿಗಮಪ ಸ್ಪರ್ಧೆ ವಿಜೇತೆ ಪ್ರಗತಿ ಬಡಿಗೇರ್ ತಂಡದಿಂದ ಸಂಗೀತ ರಸಮಂಜರಿ, 7 ಗಂಟೆಯಿಂದ ಪ್ರೊ. ಕೃಷ್ಣೇಗೌಡ ಅವರಿಂದ ಹಾಸ್ಯ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳೆಯರಿಂದ ಜಾನಪದ ನೃತ್ಯಗಳು ಮೂಡಿಬರಲಿವೆ ಎಂದು ಮೇದಪ್ಪ ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಖಜಾಂಚಿ ಕೆ.ಟಿ. ರಾಜಶೇಖರ್, ಆಹಾರ ಸಮಿತಿ ಅಧ್ಯಕ್ಷ ಕೆ.ಎಸ್. ಮನೋಹರ್, ಎಸ್‌ಡಿಎಂಸಿ ಅಧ್ಯಕ್ಷ ಕೆ.ಸಿ. ಗುರುಪ್ರಸಾದ್, ಮಾಜಿ ಅಧ್ಯಕ್ಷ ಕೆ.ಕೆ. ವಿಜಯ ಅವರು ಉಪಸ್ಥಿತರಿದ್ದರು.............................
ಶಾಲೆಯಲ್ಲಿ ಕಲಿತು ಸಾಧಕರಾದ ಮಹನೀಯರು...1969- 1971 ರಲ್ಲಿ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ದೆಹಲಿಯಲ್ಲಿ ಹಿರಿಯ ಆಡಳಿತಾಧಿಕಾರಿ ಮತ್ತು ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಹೈಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಟಿ.ಎ.ವಿಶ್ವನಾಥ್ ಮತ್ತು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಟಿ.ಎ.ನಾಗೇಶ್, ಶತಮಾನೋತ್ಸವ ಕಂಡ ರಾಜ್ಯದ ಎರಡನೇ ಸಹಕಾರ ಬ್ಯಾಂಕ್ ಆಗಿ ಆರಂಭಗೊಂಡ ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ದುಡಿದ ಕೆ.ಕೆ.ಮುತ್ತಣ್ಣ, ಕೆ.ಟಿ.ರಾಜಶೇಖರ್, ಪ್ರಸ್ತುತ ಅಧ್ಯಕ್ಷ ಹಿರಿಯ ವಕೀಲ ಬಿ.ಈ.ಜಯೇಂದ್ರ, ಹೈಕೋರ್ಟ್ ಹಿರಿಯ ವಕೀಲ ಜಿ.ಟಿ.ರುದ್ರಮೂರ್ತಿ, ತಾಪಂ ಸದಸ್ಯರಾಗಿ ಸೇವೆ ಸಲ್ಲಿಸಿರುವ ಕೆ.ಎಂ.ಕೃಷ್ಣಕುಮಾರ್ ಸೇರಿದಂತೆ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಶಾಂತಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರು.
.............................ನನ್ನ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಶಾಂತಳ್ಳಿಯಲ್ಲಿ ಪೂರೈಸಿದ್ದು ನನ್ನ ಸೌಭಾಗ್ಯ. 100 ವರ್ಷಗಳ ಹಿಂದೆಯೇ ಇಲ್ಲಿ ಶಾಲೆ ಆರಂಭಿಸಲು ಶ್ರಮಿಸಿದ ಪೂಜನೀಯರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ನಂತರ ರಾಜಕೀಯ ಜೀವನಕ್ಕೆ ಕಾಲಿಟ್ಟ ನಂತರ ಸೋಮವಾರಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷನಾಗಿ, 2013 ರಲ್ಲಿ ಮಡಿಕೇರಿ ವಿಧಾನಸಭಾಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ನನ್ನ ಸರ್ವಾಂಗೀಣ ಅಭಿವೃದ್ಧಿಗೆ ಅಡಿಪಾಯ ಹಾಕಿಕೊಟ್ಟ ಶಾಲೆ, ಶಿಕ್ಷಕವೃಂದ ಹಾಗೂ ನನ್ನ ಗ್ರಾಮದ ಜನತೆಗೆ ಆಭಾರಿಯಾಗಿದ್ದೇನೆ. ಮುಂದೆಯೂ ಶಾಲೆಯ ಅಭಿವೃದ್ಧಿಗೆ ನನ್ನಿಂದಾದ ಸಹಕಾರ ಎಂದೆಂದಿಗೂ ನೀಡುತ್ತೇನೆ.
-ಕೆ.ಎಂ.ಲೋಕೇಶ್‌ಕುಮಾರ್, ಸೋಮವಾರಪೇಟೆ ತಾ.ಪಂ. ಮಾಜಿ ಅಧ್ಯಕ್ಷ.