ನಾಡಿನ ಸಂಸ್ಕೃತಿಯ ಶ್ರೀಮಂತಿಕೆಗೆ ಶರಣರ ಕೊಡುಗೆ ಅಪಾರ: ಅಶೋಕ ತೇಲಿ

KannadaprabhaNewsNetwork | Published : Apr 3, 2025 12:31 AM

ಸಾರಾಂಶ

ಕನ್ನಡ ನಾಡಿನ ಅನೇಕ ಆಚಾರ ವಿಚಾರ, ಸಂಸ್ಕೃತಿಗೆ ಶರಣರ ಕೊಡುಗೆ ಅಪಾರವಾಗಿದೆ. ಕಾಯಕ ತತ್ವ, ದಾಸೋಹ ತತ್ವಗಳ ಜೊತೆಗೆ ಅನೇಕ ಸಾಮಾಜಿಕ ಚಿಂತನೆಗಳುಳ್ಳ ವಚನಗಳ ಮೂಲಕ ಶರಣ ಸಂಸ್ಕೃತಿ ಬೆಳೆದು ಬಂದದ್ದು, ಅಂತಹ ಶರಣ ಸಂಸ್ಕೃತಿಯ ಆದ್ಯ ವಚನಕಾರ ದೇವರ ದಾಸಿಮಯ್ಯನವರು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕನ್ನಡ ನಾಡಿನ ಅನೇಕ ಆಚಾರ ವಿಚಾರ, ಸಂಸ್ಕೃತಿಗೆ ಶರಣರ ಕೊಡುಗೆ ಅಪಾರವಾಗಿದೆ. ಕಾಯಕ ತತ್ವ, ದಾಸೋಹ ತತ್ವಗಳ ಜೊತೆಗೆ ಅನೇಕ ಸಾಮಾಜಿಕ ಚಿಂತನೆಗಳುಳ್ಳ ವಚನಗಳ ಮೂಲಕ ಶರಣ ಸಂಸ್ಕೃತಿ ಬೆಳೆದು ಬಂದದ್ದು, ಅಂತಹ ಶರಣ ಸಂಸ್ಕೃತಿಯ ಆದ್ಯ ವಚನಕಾರ ದೇವರ ದಾಸಿಮಯ್ಯನವರು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಹೇಳಿದರು.

ಜಿಲ್ಲಾ ಪಂಚಾಯತಿ ಅಡಿಟೋರಿಯಂನಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಆದ್ಯ ಶರಣ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ನಾಡಿನ ಪ್ರತಿ ಮನೆಮನೆಯಲ್ಲೂ ಪ್ರತಿನಿತ್ಯ ನಡೆಯುತ್ತಿರುವ ಪೂಜೆ, ಪುನಸ್ಕಾರಗಳು, ದಾನ ಧರ್ಮ, ದಾಸೋಹ ಹಿಂದೆ ನಮ್ಮ ಪೂರ್ವಜರು ಹಾಗೂ 12ನೇ ಶತಮಾನದ ಶರಣರ ವಚನಗಳ ಆದರ್ಶವಡಗಿದೆ. ಶರಣರಲ್ಲಿಯೇ ಅಗ್ರಸ್ಥಾನ ಪಡೆದ ಹಾಗೂ ಪ್ರಥಮ ವಚನಕಾರ ದೇವರ ದಾಸಿಮಯ್ಯನವರು ಶರಣ ಶ್ರೇಷ್ಠರಾಗಿದ್ದು, ಭಕ್ತಿಯ ಮೂಲಕ ತತ್ವಶಾಸ್ತ್ರ ಹೇಳಿದವರು. ಅಂತಹ ಶರಣರನ್ನು ನಾವು ಒಂದು ಜನಾಂಗಕ್ಕೆ ಹಾಗೂ ಜಾತಿಗೆ ಸೀಮಿತಗೊಳಿಸದೆ ವಿಶ್ವಮಾನವರನ್ನಾಗಿ ಗುರುತಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹದೇವ ಬಸರಕೋಡ ಉಪನ್ಯಾಸ ನೀಡಿ ಮಾತನಾಡಿ, ಮದುವೆಯಾಗಿ ಮರುದಿನವೇ ಡೈವೋರ್ಸ್‌ ಕೇಳುವ ಈ ಕಾಲಕ್ಕೆ ದಾಸಿಮಯ್ಯನವರ ದಾಂಪತ್ಯ ತತ್ವ ಆದರ್ಶನೀಯ. ಮತ್ತೆ ಆ ತತ್ವವನ್ನು ಜಗತ್ತಿಗೆ ತಿಳಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ತಮ್ಮ ವಚನಗಳ ಮೂಲಕ ಹಸಿವು, ಕೆಳ ಸ್ತರದ ನೋವು ಮುಂತಾದವುಗಳ ಕುರಿತು ವಿವರಿಸಿದ ಉದಾತ್ತ ಚಿಂತನೆಗಳ ದಾಸಿಮಯ್ಯನವರನ್ನು ಒಬ್ಬ ದೇವಪುರುಷನಂತೆ ಕಾಣದೇ, ಒಬ್ಬ ಚಾರಿತ್ರಿಕ ಪುರುಷನಂತೆ ಕಾಣಬೇಕಾಗಿದೆ ಎಂದರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಗಲಕೋಟೆಯ ಉಪನ್ಯಾಸಕ ಶಿವಶಂಕರ್ ಎನ್ ಮುತ್ತಗಿ ಉಪನ್ಯಾಸ ನೀಡಿ, ಸಂಸ್ಕೃತವನ್ನು ದೇವ ಭಾಷೆಯನ್ನಾಗಿ ಕಾಣುತ್ತಿದ್ದ ಸಮಯದಲ್ಲಿ ಬುದ್ಧ, ಮಹಾವೀರ, ದಾಸಿಮಯ್ಯನ ಮಹನೀಯರು ತಮ್ಮ ತಮ್ಮ ಮೂಲ ಭಾಷೆಗಳಲ್ಲಿಯೇ ತಮ್ಮ ಜನಾಂಗವನ್ನು ಕಟ್ಟಿ ಸುಧಾರಿಸಿದರು. ಬಸವಣ್ಣನವರ ವಿಚಾರಗಳಿಗೂ ಕೂಡ ಅಡಿಪಾಯ ಹಾಕಿಕೊಟ್ಟದ್ದು ದಾಸಿಮಯ್ಯನವರ ವಚನಗಳೇ ಎಂಬುದು ವಿಶೇಷ ಎಂದರು

ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಗಲಕೋಟೆಯ ಉಪನ್ಯಾಸಕ ಶಿವಶಂಕರ್ ಎನ್ ಮುತ್ತಗಿ ಉಪನ್ಯಾಸ ನೀಡಿದರು.ರಾಜ್ಯ ನೇಕಾರರ ಸಂಘದ ಮಾಜಿ ಅಧ್ಯಕ್ಷ ಡಾ. ಎಮ್ ಎಸ್ ದಡ್ಡೆಣ್ಣವರ್, ಬಿಡಿಸಿ ಸಿ ಬ್ಯಾಂಕ್ ನಿರ್ದೇಶಕ ಮುರುಗೇಶ್ ಕಡ್ಲಿಮಟ್ಟಿ, ಅಪೆಕ್ಸ್ ಬ್ಯಾಂಕಿನ ರವೀಂದ್ರ ಕಲಬುರ್ಗಿ, ನಗರಸಭೆ ಮಾಜಿ ಸದಸ್ಯೆ ಭಾಗ್ಯಶ್ರೀ ಹಂಡಿ, ಬಸವೇಶ್ವರ ಬ್ಯಾಂಕಿನ ನಿರ್ದೇಶಕ ಶ್ರೀನಿವಾಸ್ ಬಳ್ಳಾರಿ, ಸೇರಿದಂತೆ ಸಮುದಾಯದ ಹಿರಿಯರು ಉಪಸ್ಥಿತರಿದ್ದರು.

ಮಂಜುಳಾ ಸಂಬಾಳಮಠ ಸುಗಮ ಸಂಗೀತ ಹಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್ ಜೈನಾಪುರ ಸ್ವಾಗತಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.

Share this article