ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅಲ್ಲಮ ಪ್ರಭು ಸಂಶೋಧನಾ ಕೇಂದ್ರದಲ್ಲಿ ಈ ಸಂಬಂಧ ಶುಕ್ರವಾರ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ, ಹತ್ತು ದಿನ ವೈಚಾರಿಕ, ವೈಶಿಷ್ಟ್ಯ, ವೈವಿಧ್ಯಮಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಆರೋಗ್ಯ ಮಾನಸಿಕ ದೃಢತೆಗಾಗಿ ಶಿವಯೋಗ, ಯೋಗಾಸನ, ರಕ್ತದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಉತ್ಸವದಲ್ಲಿ ಆಯೋಜಿಸಲಾಗಿದೆ. ಮುರಿಗಾ ಶಾಂತವೀರ ಮಹಾಸ್ವಾಮಿಗಳು ರಚಿಸಿದ ಒಟ್ಟು ಸಾಹಿತ್ಯವನ್ನು ಪುನರಾವಲೋಕನ ಮಾಡಿ ಅವರ ಜೀವನಸಾಧನೆಯನ್ನು ಕುರಿತ ಲೇಖನಗಳನ್ನು ಸಂಗ್ರಹಿಸಿ ‘ಚಿನ್ಮೂಲಾದ್ರಿ ಚಿದ್ಘನ’ ಎಂಬ ಸಂಪುಟ ಕೃತಿಯ ಲೋಕಾರ್ಪಣೆ ಈ ಬಾರಿಯ ಉತ್ಸವ ಉತ್ಸವದ ವಿಶೇಷ ಎಂದರು.
ಉತ್ಸವದಲ್ಲಿ ಪ್ರತಿದಿನ ಬೆಳಗ್ಗೆ 5-15 ರಿಂದ ಯೋಗಗುರು ವೈದ್ಯಶ್ರೀ ಚೆನ್ನಬಸವಣ್ಣನವರಿಂದ ಯೋಗ-ಆರೋಗ್ಯ ಆಧ್ಯಾತ್ಮ ಶಿಬಿರ, 14 ರಿಂದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಅವರಿಂದ ಸಹಜ ಶಿವಯೋಗ, ಎಸ್ ಜೆಎಂ ವಿದ್ಯಾಪೀಠ ಹಾಗೂ ಎಸ್ ಜೆಎಂ ವಿಶ್ವವಿದ್ಯಾಲಯ ಅಧೀನದ ಶಿಕ್ಷಣ ಸಮೂಹ ಸಂಸ್ಥೆಗಳ ವತಿಯಿಂದ ಜಮುರಾ ಕ್ರೀಡಾಕೂಟ, ಉಚಿತ ಆರೋಗ್ಯ ತಪಾಸಣೆ, ವಚನಕಂಠಪಾಠ, ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆ, ಬಸವಧರ್ಮ ಧ್ವಜಾರೋಹಣ, ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮಹಿಳಾ ಕ್ರೀಡಾಕೂಟ, ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆ, ವಚನ ಕಮ್ಮಟ ಪರೀಕ್ಷೆ ರ್ಯಾಂಕ್ ವಿಜೇತರಿಗೆ ಪ್ರಶಸ್ತಿ ಪ್ರದಾನ, 16 ರಂದು ಬೆಳಗ್ಗೆ ಕೃಷಿ ಮೇಳ, ಸಂಜೆ 6 ಗಂಟೆಗೆ ಮುರಿಗಾ ಶಾಂತವೀರ ಶ್ರೀಗಳ ಸಮಗ್ರ ಕೃತಿ ಲೋಕಾರ್ಪಣೆ, ಅಥಣಿ ಮುರುಘೇಂದ್ರ ಶಿವಯೋಗಿಗಳ ಕುರಿತ ಸಮಗ್ರ ಬರಹಗಳು, ಲೋಕಜಂಗಮ, ಜಯವಿಭವ ಮುರುಘರಾಜೇಂದ್ರ ಶ್ರೀಗಳ ಕುರಿತ ಚಿನ್ಮೂಲಾದ್ರಿಯ ಚಿನ್ಮಯ ಕೃತಿಗಳ ಲೋಕಾರ್ಪಣೆ ನಡೆಯಲಿದೆ.17 ರ ಬೆಳಗ್ಗೆ 10 ಸಾವಿರ ಜನರಿಂದ ಏಕಕಾಲದಲ್ಲಿ ಬಸವಣ್ಣನವರ 32 ವಚನಗಳನ್ನು ಸಾಮೂಹಿಕವಾಗಿ ಹಾಡುವ ವಚನ ಝೇಂಕಾರ ನಡೆಯಲಿದೆ. ಆಡಳಿತ ಮಂಡಳಿ ಸದಸ್ಯ ನಾಡೋಜ ಡಾ.ಪಿ.ಎಸ್ ಶಂಕರ್ ಅವರ ಕೃತಿ ‘ಕತ್ತಲನ್ನು ಕಳೆಯುವ ಬೆಳಕು’ ಬಿಡುಗಡೆಗೊಳ್ಳಲಿದೆ. ಸಂಜೆ 6 ಗಂಟೆಗೆ ಫ.ಗು ಹಳಕಟ್ಟಿ, ಎಸ್.ನಿಜಲಿಂಗಪ್ಪ, ಜಿ.ಎಸ್ ಶಿವರುದ್ರಪ್ಪ ಮತ್ತು ವೈ.ಎನ್ ಕೃಷ್ಣಮೂರ್ತಿ ಅವರುಗಳ ಜನ್ಮಶತಮಾನೋತ್ಸವ ಹಾಗೂ ಸತ್ಯಶುದ್ಧ ಕಾಯಕ, ವಚನ ಗುಮ್ಮಟ ಕೃತಿಗಳ ಲೋಕಾರ್ಪಣೆಗೊಳ್ಳಲಿವೆ.
20ರ ಬೆಳಗ್ಗೆ 10 ಗಂಟೆಯಿಂದ ಪಾರಂಪರಿಕ ವೈದ್ಯ ಸಮ್ಮೇಳನ ಹಾಗೂ ವೈದ್ಯ ಸಂಗಣ್ಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜನೆಗೊಂಡಿದೆ. ಸಂಜೆ 6 ಗಂಟೆಗೆ ಜಾನಪದ ಸಮಾವೇಶ ನಡೆಯಲಿದೆ. 21 ರ ಮಧ್ಯಾಹ್ನ 2.30 ಗಂಟೆಗೆ ಅಲಂಕೃತ ಸಾರೋಟಿನಲ್ಲಿ ಶ್ರೀ ಮುರಿಗಾ ಶಾಂತವೀರ ಮಹಾಸ್ವಾಮಿಗಳವರ ಭಾವಚಿತ್ರದ ಮೆರವಣಿಗೆ ಶ್ರೀಮಠದಿಂದ ಹೊರಟು ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಕೋಟೆ ಮಹಾದ್ವಾರ ತಲುಪಲಿದೆ.
ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ, ಆದಿಜಾಂಬವ ಅಭಿವೃದ್ಧಿ ನಿಗಮದ ಜಿ.ಎಸ್.ಮಂಜುನಾಥ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಪಟೇಲ್ ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಎಸ್. ಪರಮೇಶ್, ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಸುರೇಶ್ ಬಾಬು ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳಾದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಬಸವ ಮಹಾಂತ ಸ್ವಾಮೀಜಿ, ಲಿಂಗಬಸವ ಶರಣರು, ಶಿವಾನಂದ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಬಸವಭೂಷಣ ಸ್ವಾಮೀಜಿ, ಜಯದೇವಿ ತಾಯಿ, ಚಿನ್ಮಯಿತಾಯಿ, ಮುಕ್ತಾಯಕ್ಕ, ಸಿದ್ಧಬಸವ ಕಬೀರ ಶ್ರೀಗಳು, ವಚನಸಂಸ್ಕೃತಿ ತಾಯಿ, ಎಸ್ ಜೆಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ ಗುಡಸಿ,ಪಿ.ವೀರೇಂದ್ರಕುಮಾರ್ ಉಪಸ್ಥಿತರಿದ್ದರು.