ಎರಡು ಒಡಂಬಡಿಕೆಗಳಿಗೆ ಶರಣಬಸವ ವಿವಿ ಅಂಕಿತ

KannadaprabhaNewsNetwork |  
Published : Aug 27, 2026, 01:30 AM IST
ಫೋಟೋ- ಎಂಒಯು | Kannada Prabha

ಸಾರಾಂಶ

ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್) ಕ್ಷೇತ್ರದಲ್ಲಿ ಶೈಕ್ಷಣಿಕ ಗುಣಮಟ್ಟ ಹಾಗೂ ಶ್ರೇಷ್ಠತೆ ಹೆಚ್ಚಿಸುವುದರ ಜತೆಗೆ, ವಿಶ್ವವಿದ್ಯಾಲಯ ಮತ್ತು ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವಂತೆ ಹೊಸ ಪ್ರಮಾಣಪತ್ರ ಕೋರ್ಸ್ ಆರಂಭಿಸುವ ಉದ್ದೇಶದಿಂದ ಶರಣಬಸವ ವಿಶ್ವವಿದ್ಯಾಲಯವು ಎರಡು ಮಹತ್ವದ ತಿಳಿವಳಿಕೆ ಒಡಂಬಡಿಕೆಗಳಿಗೆ ಸಹಿ ಹಾಕಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್) ಕ್ಷೇತ್ರದಲ್ಲಿ ಶೈಕ್ಷಣಿಕ ಗುಣಮಟ್ಟ ಹಾಗೂ ಶ್ರೇಷ್ಠತೆ ಹೆಚ್ಚಿಸುವುದರ ಜತೆಗೆ, ವಿಶ್ವವಿದ್ಯಾಲಯ ಮತ್ತು ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವಂತೆ ಹೊಸ ಪ್ರಮಾಣಪತ್ರ ಕೋರ್ಸ್ ಆರಂಭಿಸುವ ಉದ್ದೇಶದಿಂದ ಶರಣಬಸವ ವಿಶ್ವವಿದ್ಯಾಲಯವು ಎರಡು ಮಹತ್ವದ ತಿಳಿವಳಿಕೆ ಒಡಂಬಡಿಕೆಗಳಿಗೆ ಸಹಿ ಹಾಕಿದೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‍ಸಿಎಸ್‍ಟಿ) ಯೊಂದಿಗೆ ಮಾಡಿಕೊಂಡ ಒಡಂಬಡಿಕೆಗೆ ಕೆಎಸ್‍ಸಿಎಸ್‍ಟಿಯ ಕಾರ್ಯದರ್ಶಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಅಶೋಕ ಎಂ. ರಾಯಚೂರ್ ಹಾಗೂ ಶರಣಬಸವ ವಿವಿ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ ಮಾಕಾ ಅವರು ಸಹಿ ಹಾಕಿದರು.ಇನ್ನೊಂದೆಡೆ, ಬೆಂಗಳೂರಿನ ಸಮಾಧಾನ ಕೌನ್ಸೆಲಿಂಗ್ ಸೆಂಟರ್‌ನ ಪರವಾಗಿ ಖ್ಯಾತ ಮನೋವಿಜ್ಞಾನಿ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ್ ಮತ್ತು ಶರಣಬಸವ ವಿವಿ ಕುಲಸಚಿವೆ ಡಾ.ಲಕ್ಷ್ಮೀ ಪಾಟೀಲ ಮಾಕಾ ಅವರು ತಿಳಿವಳಿಕೆ ಒಡಂಬಡಿಕೆಗೆ ಸಹಿ ಹಾಕಿದರು.

ಕೆಎಸ್‍ಸಿಎಸ್‍ಟಿ ಹಾಗೂ ಶರಣಬಸವ ವಿವಿ ಒಡಂಬಡಿಕೆಯನ್ವಯ ವಿಶ್ವವಿದ್ಯಾಲಯದ ಆವರಣದಲ್ಲಿ ಬೌದ್ಧಿಕ ಆಸ್ತಿ ಹಕ್ಕು ಘಟಕ ಸ್ಥಾಪಿಸಲಾಗುವುದು. ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೆಎಸ್‍ಸಿಎಸ್‍ಟಿ ತಾಂತ್ರಿಕ ನೆರವು ನೀಡಲಿದ್ದು, ಜಂಟಿ ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಸಂಶೋಧನಾ ಚಟುವಟಿಕೆಗಳನ್ನು ಆಯೋಜಿಸಲು ಸಹಕರಿಸಲಿವೆ.

ವಿಶ್ವವಿದ್ಯಾಲಯ ಮತ್ತು ಕೆಎಸ್‍ಸಿಎಸ್‍ಟಿ ಎರಡೂ ಸಂಸ್ಥೆಗಳು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ರಕ್ಷಿಸುವ, ಉತ್ತೇಜಿಸುವ ಹಾಗೂ ಮತ್ತಷ್ಟು ವಿಸ್ತರಿಸುವ ಕ್ರಮಗಳನ್ನು ಕೈಗೊಳ್ಳಲಿವೆ. ಇದರಿಂದ ಹೊಸ ಬೌದ್ಧಿಕ ಆಸ್ತಿಗಳ ಸೃಷ್ಟಿಗೆ ಉತ್ತೇಜನ ದೊರೆಯಲಿದ್ದು, ಈ ನಿಟ್ಟಿನಲ್ಲಿ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಾಗುವುದು.ವಿಶ್ವವಿದ್ಯಾಲಯದ ಬೌದ್ಧಿಕ ಆಸ್ತಿ ಹಕ್ಕುಗಳ ನೋಂದಣಿಗೆ ಸಂಬಂಧಿಸಿ ಕೆಎಸ್‍ಸಿಎಸ್‍ಟಿ ತಾಂತ್ರಿಕ ನೆರವು ನೀಡಲಿದೆ. ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳಬಹುದಾದ ಸಂಭಾವ್ಯ ಬೌದ್ಧಿಕ ಆಸ್ತಿ ಹಾಗೂ ನವೀನ ಆವಿಷ್ಕಾರಗಳನ್ನು ಗುರುತಿಸುವಲ್ಲಿ ಕೆಎಸ್‍ಸಿಎಸ್‍ಟಿ ಸಹಕರಿಸಲಿದೆ. ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವವಿದ್ಯಾಲಯದಲ್ಲಿ ಐಪಿಆರ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರ ನೀಡಲಿದೆ.ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಸಮಾಧಾನ ಕೌನ್ಸೆಲಿಂಗ್ ಸೆಂಟರ್ ಹಾಗೂ ಶರಣಬಸವ ವಿಶ್ವವಿದ್ಯಾಲಯದ ನಡುವಿನ ಒಡಂಬಡಿಕೆಯನ್ವಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ 50 ಗಂಟೆಗಳ ಅವಧಿಯ ಕೌನ್ಸೆಲಿಂಗ್ ಪ್ರಮಾಣಪತ್ರ ಕೋರ್ಸ್ ಆರಂಭಿಸಲಾಗುವುದು.ಎರಡೂ ತಿಳಿವಳಿಕೆ ಒಡಂಬಡಿಕೆಗಳ ಸಹಿ ಸಮಾರಂಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಡೀನ್ ಡಾ. ಶಿವಕುಮಾರ ಜವಳಿಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂತ್ರಿ ಪಟ್ಟಕ್ಕಾಗಿ ರೈತರಿಗೆ ಮಧು, ಎಸ್ಸೆಸ್ಸೆಂ ಅನ್ಯಾಯ
ಗುಟ್ಕಾ, ಪಾನ್ ಮಸಾಲ ನಿಷೇಧ ವಿರೋಧಿಸಿ ಹೋರಾಟ ಶುರು