ಕನ್ನಡಪ್ರಭ ವಾರ್ತೆ ತುಮಕೂರು
ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದಿಂದ ನಗರದ ಗುರುಕುಲ ಆರ್ಕೇಡ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಇನ್ನರ್‌ವರ್ಸ್ 360 ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಆನ್‌ಲೈನ್ ಅನುಭವ ಮಂಟಪ’ ಎಂಬ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಸ್ವಾಮೀಜಿ, ಶರಣರ 12ನೇ ಶತಮಾನ ಸುವರ್ಣಯುಗ. ಜಗತ್ತಿನ ಇತಿಹಾಸದಲ್ಲಿ ಈ ಕಾಲಾವಧಿ ಮಹತ್ವದ ಸ್ಥಾನಮಾನ ಪಡೆದಿದೆ. ಬಸವಾದಿ ಶರಣರು ವಚನಗಳ ನುಡಿಮುತ್ತುಗಳು, ಸತ್ಯಶುದ್ಧವಾದ ಕಾಯಕ ಮತ್ತು ದಾಸೋಹ ತತ್ವಗಳು ಶರಣರನ್ನು ಮುನ್ನೆಲೆಗೆ ತಂದವು ಎಂದರು.
ವಚನ ಸಾಹಿತ್ಯವು 12ನೇ ಶತಮಾನದಲ್ಲಿ ಶರಣರು ಬೆಳೆದ ಚಿನ್ನದ ಬೆಳೆ. ಶರಣರ ಅನುಭವ ಮಂಟಪ ಸರ್ವಸಮಾನತೆ ಸಾರುವ, ಜ್ಞಾನ ಮೂಡಿಸುವ ಮಂಟಪವಾಗಿತ್ತು. ಅನುಭವ ಮಂಟಪಕ್ಕೆ ಕಾಯಕ ಹಾಗೂ ದಾಸೋಹದ ಗೋಡೆ, ಸರ್ವ ಸಮಾನತೆಯ ಮೇಲ್ಛಾವಣೆ ಇತ್ತು. ತನು ಶುದ್ಧತೆ, ಮನ ಶುದ್ಧತೆ, ಭಾವ ಶುದ್ಧತೆ ಮುಂತಾದ ಗುಣಗಳು ಅನುಭವ ಮಂಟಪ ಪ್ರವೇಶದ ಅರ್ಹತೆಯಾಗಿತ್ತು. ಮಂಟಪದಲ್ಲಿ ಜಾತಿ, ಲಿಂಗದ ಬೇಧಭಾವವಿರಲಿಲ್ಲ, ಸಮಾನರಾಗಿ ಕುಳಿತು ಚರ್ಚಿಸಲು ಮುಕ್ತ ಅವಕಾಶವಿತ್ತು ಎಂಬುದನ್ನು ಅಭಿಮಾನದಿಂದ ಹೇಳಬೇಕು ಎಂದು ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಇಂದಿನ ಆಧುನಿಕ ಜಗತ್ತಿನ ಬದಲಾವಣೆಗೆ ತಕ್ಕಂತೆ ನಮ್ಮ ಜೀವನಶೈಲಿಯೂ ಬದಲಾಗಬೇಕಾದ ಅವಶ್ಯಕತೆಯಿದೆ. ಇಂತಹ ಬದಲಾವಣೆ ಬಗ್ಗೆ ಎಚ್ಚೆತ್ತುಕೊಳ್ಳುವ ಅಗತ್ಯವೂ ಇದೆ. ಇಂದು ಮಾನವ ಏನೆಲ್ಲಾ ಸಾಧನೆ ಮಾಡಿದರೂ ಮನಃಶಾಂತಿ ಸ್ಥಾಪನೆ ಮಾಡಿಕೊಳ್ಳಲಾಗಿಲ್ಲ. ಆಧುನಿಕತೆಯ ಒತ್ತಡದ ಬದುಕಿನಲ್ಲಿ ಶಾಂತಿ, ನೆಮ್ಮದಿಯ ಹುಡುಕಾಟ ನಡೆದಿದೆ. ಶರಣರ ವಚನಗಳು ಇದಕ್ಕೆ ಪರಿಹಾರ ನೀಡಬಲ್ಲವು ಎಂದರು.
ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷರೂ ಆದ ಕೆರೆಗೋಡಿ ರಂಗಾಪುರ ಮಠದ ಗುರುಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಶರಣರ ಅನುಭವ ಮಂಟಪದಲ್ಲಿ ಸರ್ವಸಮಾನತೆ ಇತ್ತು. ಪ್ರತಿಯೊಬ್ಬರೂ ಸ್ವತಂತ್ರ ಭಾವನೆ ವ್ಯಕ್ತಪಡಿಸಲು ಅವಕಾಶವಿತ್ತು. ಶರಣರ ಅನುಭವ ಮಂಟಪದ ಆದರ್ಶಗಳನ್ನು ಇಂದಿನ ರಾಜಕೀಯ ವ್ಯವಸ್ಥೆಗೆ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಬಿ.ಖಂಡ್ರೆ ಅವರು ವರ್ಚುಯಲ್‌ನಲ್ಲಿ ಮಾತನಾಡಿ, ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹಿರಿಯರಿಗೆ ಗೌರವ ಕೊಡುತ್ತಿಲ್ಲ. ಮೊಬೈಲ್, ಇಂಟನರ್‌ನೆಟ್ ದಾಸರಾಗಿದ್ದಾರೆ. ಅವರನ್ನು ಸರಿದಾರಿಗೆ ತರಲು ಅವರು ಬಳಸುವ ಸಾಮಾಜಿಕ ಜಾಲತಾಣದ ಮೂಲಕವೇ ತಿಳುವಳಿಕೆ ಮೂಡಿಸಬೇಕು ಎಂದು ಸಲಹೆ ಮಾಡಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಮಾತನಾಡಿ, ಸಮಾಜದಲ್ಲಿ ದ್ವೇಷ ಕಡಿಮೆ ಮಾಡಿ ಪ್ರೀತಿ ಬೆಳೆಸುವ ಕೆಲಸ ಆಗಬೇಕು. ಶರಣರ ಅನುಭವ ಮಂಟಪದ ಆದರ್ಶಗಳನ್ನು ತಿಳಿಸುವ ಮೂಲಕ ಸಮಾಜ ಪರಿವರ್ತನೆಗೆ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಇನ್ನರ್‌ವರ್ಸ್ 360 ಸಂಸ್ಥೆಯ ಕೆ.ಆರ್.ಶಿವರಾಮ್ ಅವರು ಅಭಿವೃದ್ಧಿಪಡಿಸಿರುವ ಆನ್‌ಲೈನ್ ಅನುಭವ ಮಂಟಪ ಸಹಕಾರಿಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಆನ್‌ಲೈನ್ ಅನುಭವ ಮಂಟಪ ಆ್ಯಪ್ ಮೂಲಕ ಶರಣರ ಅನುಭವ ಮಂಟಪದ ಸರ್ವರೂ ಸಮಾನರು, ಸರ್ವರಿಗೂ ಸಮಪಾಲು, ಭ್ರಾತೃತ್ವದ ಮಹತ್ವದ ವಿಚಾರಗಳು ಯುವಜನರಿಗೆ ತಲುಪಲಿ, ಆ ಮೂಲಕ ಬದಲಾವಣೆಯಾಗಲಿ ಎಂದು ಆಶಿಸಿದರು.
ಈ ವೇಳೆ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಗುರುಕುಲ ವಿದ್ಯಾರ್ಥಿನಿಲಯ ಅಧ್ಯಕ್ಷ ಜಿ.ಎನ್.ಬಸವರಾಜಯ್ಯ, ಇನ್ನರ್‌ವರ್ಸ್ 360 ಸಂಸ್ಥೆಯ ಕೆ.ಆರ್.ಶಿವರಾಮ್, ಇವರ ತಾಯಿ ಸರ್ವಮಂಗಳ ಆವರನ್ನು ಸನ್ಮಾನಿಸಿ ಗೌರವಿಸಲಾಯಿತು.ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್, ಕಾರ್ಯದರ್ಶಿ ತಳವಾರಹಳ್ಳಿ ವಿಜಯಕುಮಾರ್, ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಡಾ.ದರ್ಶನ್ ಕೆ.ಎಲ್, ಗುರುಕುಲ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಬಸವರಾಜಪ್ಪ ಮೊದಲಾದವರು ಭಾಗವಹಿಸಿದ್ದರು.