ಗದಗ: ಕಾಯಕ ಶರಣರು ಆಧ್ಯಾತ್ಮದ ಜೊತೆಗೆ ಪ್ರಜಾಪ್ರಭುತ್ವದ ಮಾದರಿಯನ್ನು ತೋರಿ ಕೊಟ್ಟು ಸಮಾಜದಲ್ಲಿ ಯಾವುದೇ ಕಾಯಕ ಸಣ್ಣದಲ್ಲ ಎಂದು ಸಂದೇಶ ಸಾರಿದ ಶರಣರ ತತ್ವಗಳು ಎಲ್ಲರಿಗೂ ಆದರ್ಶ ಪ್ರಾಯವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಶರಣರ ವಚನಗಳು ಸಂವಿಧಾನ ರಚನೆಯಲ್ಲಿ ಅಗಾಧವಾದ ಪರಿಣಾಮ ಬೀರಿವೆ. ಶರಣ ಮಾದಾರ ಚೆನ್ನಯ್ಯ, ಶರಣ ಸಮಗಾರ ಹರಳಯ್ಯ, ಶರಣ ಡೋಹರ ಕಕ್ಕಯ್ಯ ಅವರುಗಳು ಬಡತನದಲ್ಲಿ ಮಾಡುವ ಕಾಯಕಗಳು ಹಿರಿಮೆ ಇವೆ ಎಂದು ಸ್ವಾಭಿಮಾನದಿಂದ ಬದುಕಿದಂತಹ ಮಹಾನುಭಾವರಾಗಿದ್ದಾರೆ ಎಂದರು.
ಶರಣರ ಜಯಂತಿಗಳು ಕೇವಲ ಅದೇ ಸಮುದಾಯಕ್ಕೆ ಸೀಮಿತವಾಗಿರುವದು ದುರ್ದೈವದ ಸಂಗತಿಯಾಗಿದೆ. ಮುಂದಿನ ಜಯಂತಿಗಳಲ್ಲಿ ಸಮುದಾಯದ ಜನ ಸೇರಿದಂತೆ ಎಲ್ಲರೂ ಪಾಲ್ಗೊಳ್ಳುವ ಮೂಲಕ ಶರಣ ಜಯಂತಿಗಳನ್ನು ಆಚರಿಸಬೇಕು. ವಿಶ್ವಗುರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಅಣ್ಣ ಬಸವಣ್ಣ ಸೇರಿದಂತೆ ಎಲ್ಲ ಶರಣರು ತಮ್ಮ ವಚನ, ಕಾಯಕಗಳ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯಮಾಡಿದ್ದು ಇವರುಗಳು ಒಂದು ಜಾತಿಗೆ ಸೀಮಿತವಾಗಿರದೇ ಇಡೀ ಸಮಾಜದ ಆಸ್ತಿಯಾಗಿದ್ದರು. ಇವರ ಜಯಂತಿಯನ್ನು ಎಲ್ಲ ಸಮುದಾಯದವರು ಕೂಡಿ ಆಚರಿಸಬೇಕಾಗಿದೆ ಎಂದರು.ಸಮಾಜ ತಿದ್ದುವ ಕಾರ್ಯ ಮಾಡಿದ ಶರಣರ ವಚನಗಳನ್ನು ಇಂದು ಹೆಕ್ಕಿ ತೆಗೆಯಬೇಕಾಗಿದೆ. ವಚನಗಳಲ್ಲಿನ ಸಾಮಾಜಿಕ ಕಳಕಳಿಯನ್ನು ಅರಿತುಕೊಂಡು ಸಮಾಜ ಸುಧಾರಣೆಗೆ ಪ್ರತಿಯೊಬ್ಬರು ಮುಂದಾಗಬೇಕು. ಶರಣರ ವಚನಗಳ ಹೆಚ್ಚಿನ ಪ್ರಚಾರವಾಗಬೇಕಾಗಿದ್ದು ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವದು ಎಂದು ತಿಳಿಸಿದರು.
ಸಮಾಜದಲ್ಲಿನ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಅನೇಕ ಮಹನೀಯರು ನಾನಾ ರೀತಿಯ ಹೋರಾಟಗಳನ್ನು ಮಾಡಿರುತ್ತಾರೆ. ಸಮಾಜದಲ್ಲಿನ ಜಾತಿ ಪದ್ಧತಿ ನಿರ್ಮೂಲನೆ ಮಾಡುವ ಶಕ್ತಿ ಶಿಕ್ಷಣದಲ್ಲಿ ಇದ್ದು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜ ಸುಧಾರಣೆಗೆ ತಮ್ಮದೇ ಆದ ಕೊಡುಗೆ ನೀಡುವಂತೆ ಹೇಳಿದರು.
ಹುಲಕೋಟಿ ಜಿ.ಸಿ.ಟಿ.ಎಂ ಪಪೂ ಕಾಲೇಜಿನ ಹಿರಿಯ ಶ್ರೇಣಿಯ ಕನ್ನಡ ಉಪನ್ಯಾಸಕ ಡಾ. ಅರ್ಜುನ ಗೊಳಸಂಗಿ ಅವರು ಕಾಯಕ ಶರಣರ ಜೀವನ ಮತ್ತು ಸಂದೇಶ ಕುರಿತು ಉಪನ್ಯಾಸ ನೀಡಿದರು.ಈ ವೇಳೆ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಎಂ.ಬಿ. ಸಂಕದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಸೇರಿದಂತೆ, ಸಮಾಜದ ಗಣ್ಯರು, ಸಾರ್ವಜನಿಕರು, ವಿದ್ಯಾರ್ಥಿಗಳು ಇದ್ದರು. ಪಂ.ವೆಂಕಟೇಶ ಅಲಕೋಡ್ ಹಾಗೂ ಸಂಗಡಿಗರು ನಾಡಗೀತೆ ಪ್ರಚುರ ಪಡಿಸಿದರು. ಬಾಬಹುಬಲಿ ಜೈನರ ನಿರೂಪಿಸಿದರು.