ಕನ್ನಡಪ್ರಭ ವಾರ್ತೆ ಯಾದಗಿರಿ
ವಿಶ್ವ ಮಧ್ವ ಮಹಾಪರಿಷತ್ ವತಿಯಿಂದ, ನಗರದ ಉತ್ತರಾದಿಮಠದ ಶ್ರೀರಾಘವೇಂದ್ರಸ್ವಾಮಿ ಪರಿಮಳ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಅಂಗವಾಗಿ ನಗರ ಕೀರ್ತನ- ಸಂಕೀರ್ತನ ನಂತರದಲ್ಲಿ ಉಪನ್ಯಾಸ ನೀಡಿದರು.
ಪುರಂದರದಾಸರು ವ್ಯಾಸರಾಯರಿಂದ ದೀಕ್ಷೆ ಪಡೆದು ಪುರಂದರ ವಿಠಲ ಎಂಬ ಅಂಕಿತ ಸ್ವೀಕರಿಸಿ ಮಧ್ವಮತಾನುಯಾಯಿಗಳಾಗಿದ್ದರೂ, ವಿಶಾಲವಾದ ಭಾಗವತ ಮನೋಧರ್ಮವನ್ನು ಬೆಳೆಸಿಕೊಂಡವರು. ಆದುದರಿಂದಲೇ ಪುರಂದರದಾಸರು ಅಲ್ಲಿ ಮಾತ್ರವಲ್ಲ, ಎಲ್ಲಿಯೂ ಸಲ್ಲುವ ಕನ್ನಡದ ಮಹಾಪುರುಷ. ಸಂತ ತ್ಯಾಗರಾಜರಂತಹ ಮಹಾಮಹಿಮರಿಂದಲೂ ಪೂಜಿಸಲ್ಪಟ್ಟ ಶ್ರೇಷ್ಠರು ಎಂದು ಹೇಳಿದರು.ಪುರಂದರದಾಸರು ತಿರುಪತಿ, ಶ್ರೀರಂಗ, ಕಳಸ, ಬೇಲೂರು, ನಂಜನಗೂಡು, ಶ್ರೀರಂಗಪಟ್ಟಣ, ಉಡುಪಿ, ಪಂಡರಾಪುರ ಕ್ಷೇತ್ರಗಳನ್ನು ಸಂದರ್ಶಿಸಿ, ಸುಮಾರು 4 ಲಕ್ಷ ಕೀರ್ತನೆಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಪುರುಷ ಹಾಗೂ ಮಹಿಳಾ ಭಜನಾ ಮಂಡಳಿ ಸದಸ್ಯರು ಸೇರಿ ಮಕ್ಕಳು, ವಿಪ್ರ ಮುಖಂಡರು ಭಾಗವಹಿಸಿದ್ದರು. ಮಧ್ಯಾಹ್ನ ಪುರಂದರ ರಥೋತ್ಸವ ಹಾಗೂ ವಿಶೇಷ ಪೂಜೆ ಮತ್ತು ತೀರ್ಥ ಪ್ರಸಾದ ಜರುಗಿತು.
ದಾಸರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ:
ತಾಲೂಕಿನ ಕೆಂಭಾವಿ ಪಟ್ಟಣದ ಉತ್ತರಾದಿ ಮಠದಲ್ಲಿ ಪುರಂದರ ದಾಸರ ಆರಾಧನಾ ಮಹೋತ್ಸವದ ನಿಮಿತ್ತ ದಾಸರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, 15ನೇ ಶತಮಾನದಲ್ಲಿ ಅವತರಿಸಿದ ಪುರಂದರ ದಾಸರು ಸಾಕ್ಷಾತ್ ನಾರದ ಮಹರ್ಷಿಗಳ ಅವತಾರವೆಂದು ಪುರಾಣಗಳು ನಮಗೆ ತಿಳಿಸಿ ಕೊಡುತ್ತವೆ ಎಂದರು.
ಬ್ರಾಹ್ಮಣ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಾಮನರಾವ ದೇಶಪಾಂಡೆ ಮಾತನಾಡಿ, ನಾಡಿನ ದಾಸ ಸಾಹಿತ್ಯವನ್ನು ಬೆಳೆಸಿ ಬೆಳೆಸುವಲ್ಲಿ ಪ್ರತಿಯೊಂದು ಸಮಾಜದ ಯುವಕರ ಪಾತ್ರ ಅತೀ ಮುಖ್ಯವಾಗಿದೆ. ದಾಸರ ಕೃತಿ ಸಂರಕ್ಷಿಸಲು ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸರ್ಕಾರ ದಾಸ ಸಾಹಿತ್ಯ ಅಧ್ಯಯನ ಪೀಠವನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಜಯ ಸತ್ಯಪ್ರಮೋದ ಸೇವಾ ಸಂಘದ ಉಪಾಧ್ಯಕ್ಷ ಬಾಳಕೃಷ್ಣರಾವ ಕುಲಕರ್ಣಿ, ತಿರುಮಲಾಚಾರ್ಯ ಜೋಷಿ, ಮೋಹನರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ಕೃಷ್ಣಾಜಿ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ, ಮಧ್ವರಾವ ನಾಡಿಗೇರ, ಡಾ. ಹಳ್ಳೇರಾವ ಕುಲಕರ್ಣಿ, ಡಾ. ಗಿರೀಶ ಕುಲಕರ್ಣಿ, ಶಾಮರಾವ ನಾಡಿಗೇರ, ರಾಘವೇಂದ್ರ ನಾಡಿಗೇರ, ಹಳ್ಳೇರಾವ ಕುಲಕರ್ಣಿ, ಆನಂದ ತಿಳಗೂಳ ಸೇರಿದಂತೆ ಹಲವರಿದ್ದರು.