ಹೊನ್ನಾವರ: ಶರಾವತಿ ನದಿಯನ್ನು ಉಳಿಸಿ ಎನ್ನುವ ಪಾದಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಬುಧವಾರ ಬೆಳಗ್ಗೆ ಗೇರುಸೊಪ್ಪಾದಿಂದ ಆರಂಭಗೊಂಡಿದ್ದ ಈ ಪಾದಯಾತ್ರೆ ಬುಧವಾರ ಸಂಜೆ ಕವಲಕ್ಕಿ ತಲುಪಿತ್ತು. ಎರಡನೇ ದಿನವಾದ ಗುರುವಾರ ಕವಲಕ್ಕಿಯಿಂದ ಮುಂದುವರಿದು, ನೂರಾರು ಪರಿಸರ ಪ್ರೇಮಿಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿ ತಹಸೀಲ್ದಾರ್ ಕಚೇರಿ ತಲುಪಿತು.
ಈ ವೇಳೆ ಮಾತನಾಡಿದ ಮಾರುತಿ ಗುರೂಜಿ, ಉತ್ತರ ಕನ್ನಡ ಜಿಲ್ಲೆಗೆ ಪರಿಸರ ನಾಶ ಮಾಡುವ ಯೋಜನೆಗಳು ಬೇಡ. ಬದಲಾಗಿ ಪರಿಸರ ಪೂರಕ ಪ್ರವಾಸೋದ್ಯಮ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸಿ ಎಂದು ಆಗ್ರಹಿಸಿದರು.ಪಾದಯಾತ್ರೆಗೆ ಜೆಡಿಎಸ್ ಬೆಂಬಲ: ಈ ಪಾದಯಾತ್ರೆಗೆ ಜೆಡಿಎಸ್ ಅಧಿಕೃತ ಬೆಂಬಲ ಸೂಚಿಸಿದೆ. ಮುಖಂಡರಾದ ಸೂರಜ್ ನಾಯ್ಕ ಸೋನಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಸಮಾಜ ಮತ್ತು ಪರಿಸರದ ಒಳಿತಿಗಾಗಿ ನಡೆಯುವ ಈ ನ್ಯಾಯಯುತ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಘೋಷಿಸಿದರು.
ಸಾಗರದ ಅಖಿಲೇಶ ಚಿಪಳಿ, ರೈತ ಮುಖಂಡ ರವಿ ಪಾಟೀಲ, ಶಿವರಾಜ ಮೇಸ್ತ, ಮಂಗಲದಾಸ ನಾಯ್ಕ, ಜಯದತ್ತ ಹೆಗಡೆ, ಸುಬ್ರಹ್ಮಣ್ಯ ಹಾಗೂ ಜೆಡಿಎಸ್ ತಾಲೂಕಾಧ್ಯಕ್ಷ ಟಿ.ಟಿ. ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಮುಖವಾಡ ಕಳಚುತ್ತೇನೆ: ಶರಾವತಿ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವವರೆಗೂ ನಾವು ಹೋರಾಟದಿಂದ ವಿಶ್ರಮಿಸುವುದಿಲ್ಲ. ರಾಜಕಾರಣಿಗಳು ಬಡವರನ್ನು ಮತಕ್ಕಾಗಿ ಬಳಸಿಕೊಂಡು ಲೂಟಿ ಹೊಡೆಯಬಾರದು. ಈಗಾಗಲೇ ಒಬ್ಬ ರಾಜಕಾರಣಿಯ ಮುಖವಾಡ ಕಳಚಿದ್ದೇನೆ, ಸಮಯ ಬಂದಾಗ ಇನ್ನೊಬ್ಬರನ್ನೂ ಬಯಲಿಗೆಳೆಯುತ್ತೇನೆ ಎಂದು ಮಾಸ್ತಪ್ಪ ನಾಯ್ಕ ಬಲಸೆ ಹೇಳಿದರು.