ಸರ್ವತೋಮುಖ ಏಳ್ಗೆಯನ್ನು ಹೊಂದಲು ಸಂಕುಚಿತ ಬುದ್ಧಿ ಬಿಡಿ

KannadaprabhaNewsNetwork |  
Published : Oct 09, 2026, 02:30 AM IST
ಸಂಸ್ಕೃತಿ ಚಿಂತಕ ಡಾ. ರಹಮತ್ ತರಿಕೆರೆ ಅವರು ಹೊನ್ನಾವರ ಎಸ್.ಡಿ.ಎಂ. ಕಾಲೇಜಿನಲ್ಲಿ ಗುರುವಾರ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಕೃಷ್ಣಾನಂದ ಕಾಮತ ಅವರ ಮಗ ಹಾಗೂ ಎಐ ತಂತ್ರಜ್ಞ ವಿಕಾಸ ಕಾಮತ್ ಮಾತನಾಡಿ, ನನ್ನ ತಂದೆ ಲೋಕದ ಕೌತುಕ ಹಾಗೂ ಮನುಷ್ಯನ ಔದಾರ್ಯದ ಕುರಿತು ಆಸಕ್ತಿ ಹೊಂದಿದ್ದರು.

ಹೊನ್ನಾವರ: ನಾವು ಸರ್ವತೋಮುಖ ಏಳ್ಗೆ ಹೊಂದಲು ಕೂಪಮಂಡೂಕತನ ಬಿಡಬೇಕು. ಬೇರೆ ದೇಶ ಮತ್ತು ಅಲ್ಲಿನ ಸಂಸ್ಕೃತಿ ನೋಡಬೇಕು. ಪ್ರವಾಸ ಸಾಹಿತ್ಯಕ್ಕೆ ಶತಮಾನದ ಇತಿಹಾಸವಿದೆ ಎಂದು ಸಂಸ್ಕೃತಿ ಚಿಂತಕ ಡಾ. ರಹಮತ್ ತರಿಕೆರೆ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಎಂ.ಪಿ. ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನ ಆರ್.ಎಸ್. ಹೆಗಡೆ ಸಭಾಭವನದಲ್ಲಿ ಗುರುವಾರ ನಡೆದ ಪ್ರವಾಸ ಸಾಹಿತ್ಯ ಪರಂಪರೆ ಮತ್ತು ಕೃಷ್ಣಾನಂದ ಕಾಮತ ಎಂಬ ವಿಷಯದ ಮೇಲಿನ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಬ್ದಿಕವಾಗಿ ಪ್ರವಾಸ, ಪ್ರಯಾಣ, ತಿರುಗಾಟ ಪದಗಳು ಒಂದೇ ತೆರನಾಗಿ ಕಂಡರೂ ಅವುಗಳ ಸಾಂದರ್ಭಿಕ ಬಳಕೆಯಲ್ಲಿ ವ್ಯತ್ಯಾಸವಿದೆ. ಪ್ರವಾಸದಲ್ಲಿ ದೇಶ-ವಿದೇಶ, ಕಾಡು-ನಾಡು ನಡುವಿನ ವ್ಯತ್ಯಾಸವಿಲ್ಲ. ಕೃಷ್ಣಾನಂದ ಕಾಮತರು ಅನ್ವೇಷಣೆ, ನಿಗೂಢಗಳನ್ನು ಭೇದಿಸುವ ಮತ್ತು ವಿಶ್ವಮಾನವ ಪ್ರಜ್ಞೆಯ ಬರಹಗಾರರು. ಅವರ ಪ್ರವಾಸ ಕಥನದಲ್ಲಿ ಚಿಂತನ ಪ್ರಧಾನವಾದ ಸಂಸ್ಕೃತಿ ಶೋಧಕ ಮಾದರಿ, ಪ್ರವಾಸಿ ಪ್ರಪಂಚದ ಪಾಶ್ಚಿಮಾತ್ಯ ಮತ್ತು ಪೌರಾತ್ಯ ಸಮಸ್ಯೆಗಳ ಅವಲೋಕನ ಹಾಗೂ ತೆರೆಮರೆಯ ನಾಯಕರ ಸಾಹಸ ಸಾಧನೆಗಳನ್ನು ಕಾಣಬಹುದಾಗಿದೆ ಎಂದರು.

ಕೃಷ್ಣಾನಂದ ಕಾಮತ ಅವರ ಮಗ ಹಾಗೂ ಎಐ ತಂತ್ರಜ್ಞ ವಿಕಾಸ ಕಾಮತ್ ಮಾತನಾಡಿ, ನನ್ನ ತಂದೆ ಲೋಕದ ಕೌತುಕ ಹಾಗೂ ಮನುಷ್ಯನ ಔದಾರ್ಯದ ಕುರಿತು ಆಸಕ್ತಿ ಹೊಂದಿದ್ದರು. ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಹಿಂದುಳಿದ ಕಾಲದಲ್ಲಿಯೂ ಅವರು ನಡೆಸಿದ ಅನ್ವೇಷಣೆ ಸೋಜಿಗ. ವಿದ್ಯಾವಂತ, ಜ್ಞಾನಿ, ವಿದ್ವಾಂಸ, ದಾರ್ಶನಿಕ, ಲೇಖಕರು ಆದ ನನ್ನ ತಂದೆಗೆ ಅಮೆರಿಕ ಉದ್ಯೋಗ ನೀಡಲಿಲ್ಲ. ಇದರಿಂದ ಭಾರತಕ್ಕೆ ಲಾಭವಾಯಿತು. ಹೊಸ ಸಾಹಿತ್ಯದ ರಚನೆಯಾಯಿತು ಎಂದು ನುಡಿದರು.

ವಿದ್ವಾಂಸ ಡಾ. ಎಂ.ಜಿ. ಹೆಗಡೆ ಮಾತನಾಡಿ, ಕನ್ನಡ ಪ್ರವಾಸ ಸಾಹಿತ್ಯ ಪರಂಪರೆ ಎನ್ನುವುದೆ ಒಂದು ಕಲ್ಪನೆ ಆಗಿದೆ. ರಾಷ್ಟ್ರೀಯತೆಯ ನಿರ್ದಿಷ್ಟ ದೃಷ್ಟಿಕೋನ ಕಾಮತ್ ಅವರ ಬರಹದಲ್ಲಿತ್ತು. ಕನ್ನಡ ಪ್ರವಾಸಿ ಕಥನ ಎನ್ನುವುದು ಊಹಾ ಪ್ರಮೇಯ ಆಗಿದೆ. ಬರಹಗಾರನ ದೃಷ್ಟಿಕೋನ ಮತ್ತು ನೋಟವನ್ನು ಅವಲಂಬಿಸಿರುತ್ತದೆ ಎಂದರು.

ಪತ್ರಕತ್ರ ಶಶಿಧರ ಹಾಲಾಡಿ ಅವರು ಬರೆದ ಕಯಹುಗ ನಯಾಗಾರ ಬಂಬ ಪುಸ್ತಕವನ್ನು ಎಂ.ಪಿ.ಇ. ಸೊಸೈಟಿಯ ಉಪಾಧ್ಯಕ್ಷ ನಾಗರಾಜ ಕಾಮತ್ ಬಿಡುಗಡೆಗೊಳಿಸಿದರು.

ಎಸ್.ಡಿ.ಎಂ. ಕಾಲೇಜಿ ಐಕ್ಯೂಎಸಿ ಕೋ-ಆರ್ಡಿನೇಟರ್ ಡಾ. ಸುರೇಶ್ ಎಸ್. ಮಾತನಾಡಿದರು. ಡಾ. ಜಿ.ಎನ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತಾ ನಾಯ್ಕ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ ಹೆಗಡೆ, ಅಪಗಾಲ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಭಿನವ ಬೆಂಗಳೂರು ಮುಖ್ಯಸ್ಥ ನ. ರವಿಕುಮಾರ ವಂದಿಸಿದರು. ಪ್ರಶಾಂತ್ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಪರಿಸರ ಪ್ರವಾಸ ಸಾಹಿತ್ಯ, ಅಮೆರಿಕ ಪ್ರವಾಸ ಸಾಹಿತ್ಯ, ಯುರೋಪ್ ಸಾಹಿತ್ಯ ಪ್ರವಾಸ ಕುರಿತಾದ ಮೊದಲ ಗೋಷ್ಠಿಗಳನ್ನು ಸಂಪನ್ಮೂಲ ವ್ಯಕ್ತಿಗಳು ನಡೆಸಿಕೊಟ್ಟರು. ಬಳಿಕ ಎರಡನೇ ಗೋಷ್ಟಿಯಲ್ಲಿ ಪ್ರವಾಸಿ ಸಾಹಿತ್ಯದ ವಿಭಿನ್ನ ನೆಲೆಗಳು ಎಂಬ ವಿಚಾರ ಮಂಡಿಸಲಾಯಿತು. ಆನಂತರ ವಿ.ಸೀ. ಗೌರವ ಪ್ರಧಾನ ಸಮಾರಂಭ ನಡೆಯಿತು. ಹಿರಿಯ ಪತ್ರಕರ್ತ ಜಿ.ಯು. ಭಟ್ ಅವರಿಗೆ ವಿ.ಸೀ. ಮಾಧ್ಯಮ ಪ್ರಶಸ್ತಿ ಹಾಗೂ ವಿ.ಸೀ. ಕಲಾಗೌರವ ಪ್ರಶಸ್ತಿಯನ್ನು ಪಂ. ಪರಮೇಶ್ವರ ಭಟ್ ಅವರಿಗೆ ನೀಡಲಾಯಿತು. ಪಂ. ಪರಮೇಶ್ವರ ಭಟ್ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೇರ ಪಾವತಿ ಪೌರಕಾರ್ಮಿಕರ ಹುದ್ದೆಗಳ ಆಯ್ಕೆಗೆ ಪರಿಗಣಿಸಿ
ಗಾಂಧಿ ತತ್ವ ಅನುಷ್ಠಾನವೇ ನಿಜವಾದ ಗೌರವ