ಶೆಲ್ ಕಂಪನಿಯ ಆಯಿಲ್ ಗೋದಾಮಿಗೆ ಬೆಂಕಿ; ಅಂದಾಜು 30 ಕೋಟಿ ಮೌಲ್ಯದ ಆರ್ಥಿಕ ನಷ್ಟ

KannadaprabhaNewsNetwork |  
Published : May 14, 2025, 12:02 AM IST
ಪೋಟೋ 8 : ಗೋದಾಮಿಗೆ ಬೆಂಕಿ ಬಿದ್ದಿರುವುದು | Kannada Prabha

ಸಾರಾಂಶ

ಈ ಗೋದಾಮಿನ ಮಾಲೀಕರು ಕಂದಾಯ ಖಾತೆ ಮಾಜಿ ಸಚಿವ ಎಚ್.ಸಿ. ಶ್ರೀಕಂಠಯ್ಯ ಅವರ ಅಳಿಯ ಕೃಷ್ಣಪ್ಪ ಎಂಬುವವರಿಗೆ ಸೇರಿದ್ದು, ಅವರು ಈ ಗೋದಾಮನ್ನು ಶೆಲ್ ಕಂಪನಿಗೆ ಬಾಡಿಗೆಗೆ ನೀಡಿದ್ದರು. ಕಂಪನಿ ತನ್ನ ಉತ್ಪನ್ನಗಳ ಹಂಚಿಕೆಗಾಗಿ ಈ ಸ್ಥಳವನ್ನು ಮುಖ್ಯ ಗೋದಾಮು ಕೇಂದ್ರವನ್ನಾಗಿ ಬಳಸಿಕೊಂಡು ಇತ್ತೀಚೆಗೆ ಹೆಚ್ಚಿನ ಪ್ರಮಾಣದ ಆಯಿಲ್ ಸಂಗ್ರಹ ಮಾಡಲಾಗಿತ್ತು.

ನೆಲಮಂಗಲ/ ದಾಬಸ್‍ಪೇಟೆ

ನೆಲಮಂಗಲ ಸಮೀಪದ ಅಡಕಮಾರನಹಳ್ಳಿ ಬಳಿ ಭಾರೀ ಅಗ್ನಿ ಅವಘಡ ಸಂಭವಿಸಿ ಗೋದಾಮಿನಲ್ಲಿ ಸಂಗ್ರಹಿಸಿದ್ದ ಶೆಲ್ ಕಂಪನಿಯ ಆಯಿಲ್ ಸಂಪೂರ್ಣ ನಾಶವಾಗಿದ್ದು, ಸುಮಾರು 30 ಕೋಟಿ ರು. ಮೌಲ್ಯದ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಶಾರ್ಟ್ ಸರ್ಕ್ಯೂಟ್‍ನಿಂದ ಈ ಘಟನೆ ಸಂಭವಿಸಿದ್ದು, ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಘಟನೆಯು ಮಂಗಳವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಸಂಭವಿಸಿದೆ.

ಈ ಗೋದಾಮು ಸುಮಾರು 40 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಇದರೊಳಗೆ ಸಾರ್ವಜನಿಕ ಹಾಗೂ ಕೈಗಾರಿಕಾ ಬಳಕೆಯ ಅನೇಕ ಬಗೆಯ ಎಣ್ಣೆ ಉತ್ಪನ್ನಗಳು ಶೇಖರಿಸಲ್ಪಟ್ಟಿದ್ದವು. ಗೋದಾಮು ಜೊತೆಗೆ ಹೊಂದಿಕೊಂಡಿದ್ದ ಇತರೆ ಕಟ್ಟಡಗಳಿಗೆ ಬೆಂಕಿ ಹರಡುವ ಆತಂಕವೂ ವ್ಯಕ್ತವಾಗಿತ್ತು. ಆದರೆ ಅಗ್ನಿಶಾಮಕ ದಳದವರು ಬೇರೆ ಕಟ್ಟಡಗಳಿಗೆ ಬೆಂಕಿ ಹರಡದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

25ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲು ಯತ್ನ:

ಗೋದಾಮಿಗೆ ಬೆಂಕಿ ತಗಲುತ್ತಿದ್ದಂತೆ ಬೆಂಕಿಯ ಕಿಚ್ಚು ಸುಮಾರು 10 ಕಿಮೀವರೆಗೂ ಕಾಣಿಸಿದ್ದು, ಬೆಂಕಿ ನಂದಿಸಲು ನೆಲಮಂಗಲ, ಪೀಣ್ಯಾ, ಯಶವಂತಪುರ ಸೇರಿದಂತೆ ವಿವಿಧ ಭಾಗಗಳಿಂದ 25ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಹರಸಾಹಸಪಟ್ಟವು.

ಯುದ್ಧ ಭೀತಿಯಿಂದ ಶೇಖರಿಸಿದ್ದ ಆಯಿಲ್ ನಷ್ಟ:

ಈ ಗೋದಾಮು ಬಾಡಿಗೆಗೆ ಪಡೆದಿದ್ದ ಶೆಲ್ ಕಂಪನಿಯು, ಭಾರತ- ಪಾಕಿಸ್ತಾನ ನಡುವಿನ ಯುದ್ಧ ಭೀತಿಯಿಂದಾಗಿ ರಾಜ್ಯದಲ್ಲಿ ಆಯಿಲ್ ಕೊರತೆ ಉಂಟಾಗಬಾರದೆಂದು ಮುಂಚಿತವಾಗಿ ಸಾಕಷ್ಟು ಪ್ರಮಾಣದಲ್ಲಿ ಆಯಿಲ್ ಶೇಖರಣೆ ಮಾಡಿತ್ತು. ಕೇಂದ್ರ ಸರ್ಕಾರದಿಂದ ಹಾಗೂ ಕಚೇರಿಯಿಂದ ಬಂದ ಸೂಚನೆಗಳ ಪ್ರಕಾರ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಾಗಿ ಆಯಿಲ್ ಸಂಗ್ರಹಿಸಲಾಗಿತ್ತು. ಆದರೆ, ಈ ಬೆಂಕಿ ಅವಘಡದಿಂದಾಗಿ ಗೋದಾಮಿನಲ್ಲಿದ್ದ ಸುಮಾರು 30 ಕೋಟಿ ರು.ಮೌಲ್ಯದ ಆಯಿಲ್ ಸಂಪೂರ್ಣವಾಗಿ ನಾಶವಾಗಿದೆ.

ಮಾಜಿ ಸಚಿವರ ಅಳಿಯನಿಗೆ ಸೇರಿದ ಗೋದಾಮು:

ಈ ಗೋದಾಮಿನ ಮಾಲೀಕರು ಕಂದಾಯ ಖಾತೆ ಮಾಜಿ ಸಚಿವ ಎಚ್.ಸಿ. ಶ್ರೀಕಂಠಯ್ಯ ಅವರ ಅಳಿಯ ಕೃಷ್ಣಪ್ಪ ಎಂಬುವವರಿಗೆ ಸೇರಿದ್ದು, ಅವರು ಈ ಗೋದಾಮನ್ನು ಶೆಲ್ ಕಂಪನಿಗೆ ಬಾಡಿಗೆಗೆ ನೀಡಿದ್ದರು. ಕಂಪನಿ ತನ್ನ ಉತ್ಪನ್ನಗಳ ಹಂಚಿಕೆಗಾಗಿ ಈ ಸ್ಥಳವನ್ನು ಮುಖ್ಯ ಗೋದಾಮು ಕೇಂದ್ರವನ್ನಾಗಿ ಬಳಸಿಕೊಂಡು ಇತ್ತೀಚೆಗೆ ಹೆಚ್ಚಿನ ಪ್ರಮಾಣದ ಆಯಿಲ್ ಸಂಗ್ರಹ ಮಾಡಲಾಗಿತ್ತು.

ಎಲ್ಲಾ ವಸ್ತುಗಳು ಸುಟ್ಟು ಬಸ್ಮ:

ಶಾರ್ಟ್ ಸರ್ಕ್ಯೂಟ್‍ನಿಂದ ಈ ಅಗ್ನಿ ಅವಘಡ ಸಂಭವಿಸಿದೆ ಎಂಬ ಪ್ರಾಥಮಿಕ ಶಂಕೆ ಇದೆ. ಆದರೆ, ಸ್ಫೋಟಕ ರಾಸಾಯನಿಕಗಳು ಇದ್ದ ಕಾರಣದಿಂದಾಗಿ ಬೆಂಕಿಯ ವಿಸ್ತರಣೆ ವೇಗವಾಗಿ ಹರಡಿ ಗೋದಾಮಿನಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಬಸ್ಮವಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳ ಬೆಂಕಿ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ