ಗಿಡಕ್ಕೆ ಜೀವಂತ ಕುರಿ ನೇತು ಹಾಕಿದ ಕುರಿಗಾಹಿಗಳು!

KannadaprabhaNewsNetwork |  
Published : Apr 14, 2026, 02:45 AM IST
ಪೋಟೊ13ಕೆಎಸಟಿ1: ಕುಷ್ಟಗಿ ತಾಲೂಕಿನ ಗೋತಗಿ ಗ್ರಾಮದ ರಸ್ತೆ ಪಕ್ಕದ ಗಿಡವೊಂದಕ್ಕೆ ಮೇಕೆಯನ್ನು ನೇತು ಹಾಕಿರುವದು. | Kannada Prabha

ಸಾರಾಂಶ

ಕುರಿ ಮತ್ತು ಮೇಕೆಗಳಿಗೆ ರೋಗ ಬಾರದಿರಲಿ ಎಂಬ ಉದ್ದೇಶದಿಂದ ರೋಗ ಕಾಣಿಸಿಕೊಂಡ ಜೀವಂತ ಕುರಿಗಳನ್ನು ಗಿಡಗಳಿಗೆ ನೇತು ಹಾಕುವ (ಬಲಿ ನೀಡುವ) ಮೌಢ್ಯತೆ ಕುರಿಗಾಹಿಗಳಲ್ಲಿ ಜೀವಂತವಾಗಿದ್ದು, ತಾಲೂಕಿನ ಕೆಲ ಪ್ರದೇಶಗಳಲ್ಲಿ ಕಂಡು ಬರುತ್ತಿದೆ.

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ:

ತಾಲೂಕಿನ ದೋಟಿಹಾಳ ಗ್ರಾಮದಿಂದ ಗೋತಗಿ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯೆ ಮುಖ್ಯ ರಸ್ತೆ ಪಕ್ಕದ ಗಿಡಕ್ಕೆ ರೋಗ ಕಾಣಿಸಿಕೊಂಡ ಕುರಿ ನೇತು ಹಾಕಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಕುರಿ ಮತ್ತು ಮೇಕೆಗಳಿಗೆ ರೋಗ ಬಾರದಿರಲಿ ಎಂಬ ಉದ್ದೇಶದಿಂದ ರೋಗ ಕಾಣಿಸಿಕೊಂಡ ಜೀವಂತ ಕುರಿಗಳನ್ನು ಗಿಡಗಳಿಗೆ ನೇತು ಹಾಕುವ (ಬಲಿ ನೀಡುವ) ಮೌಢ್ಯತೆ ಕುರಿಗಾಹಿಗಳಲ್ಲಿ ಜೀವಂತವಾಗಿದ್ದು, ತಾಲೂಕಿನ ಕೆಲ ಪ್ರದೇಶಗಳಲ್ಲಿ ಕಂಡು ಬರುತ್ತಿದೆ.

ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ವೇಳೆ ಮೂರ್ನಾಲ್ಕು ರಸ್ತೆ ಸೇರುವ ತಿರುವಿನ ಸಮೀಪದ ಗಿಡಕ್ಕೆ ಕುರಿ ಮರಿಯ ಹಿಂಗಾಲಿಗೆ ಹಗ್ಗ ಕಟ್ಟಿ ನೇತು ಹಾಕುತ್ತಾರೆ. ನಂತರ ಪೂಜೆ ಮಾಡಿ ಅದನ್ನು ತಿರುಗಿ ನೋಡದೆ ಅಲ್ಲಿಂದ ತೆರಳುತ್ತಾರೆ. ನೇತು ಬಿಟ್ಟ ಕುರಿಯ ಇಡೀ ದೇಹದ ಭಾರ ತಲೆಯ ಮೇಲೆ ಬಿದ್ದು ಕಣ್ಣಿನಿಂದ ರಕ್ತ ಸೋರಲಾರಂಭಿಸುತ್ತದೆ. ಆಗ ಕುರಿಯು ಹಿಂಸೆಯಿಂದ ಒದ್ದಾಡಿ ಪ್ರಾಣ ಬಿಡುತ್ತದೆ. ತಾಲೂಕಿನ ಮದಲಗಟ್ಟಿ, ಹಿರೆಬನ್ನಿಗೋಳ, ಶಾಖಾಪೂರು, ನೆರೆಬೆಂಚಿ, ಬ್ಯಾಲಿಹಾಳ, ಶಿರಗುಂಪಿ, ಟಕ್ಕಳಕಿ, ಬಿಜಕಲ್, ಹೆಸರೂರು, ಕ್ಯಾದಿಗುಪ್ಪ ಸೇರಿದಂತೆ ಅನೇಕ ಗ್ರಾಮದ ಅರಣ್ಯ ಪ್ರದೇಶಗಳಲ್ಲಿ ಈ ದೃಶ್ಯ ಸಾಮಾನ್ಯವಾಗಿದೆ.

ಸದಾಕಾಲ ಅರಣ್ಯದಲ್ಲಿ ಕುರಿಗಳೊಂದಿಗೆ ವಾಸಿಸುವ, ಮಹಾರಾಷ್ಟ್ರದ ಸಾಂಗ್ಲಿ, ನಿಪ್ಪಾಣಿ, ಕೊಲ್ಲಾಪುರಗಳಿಂದ ಕುರಿ ಮೇಯಿಸುತ್ತ ಬರುವ ಸಂಚಾರಿ ಕುರುಬರು ಇಂತಹ ಮೂಢನಂಬಿಕೆ ಆಚರಿಸುತ್ತಾರೆ.

ಕುರಿಗಳಲ್ಲಿ ರೋಗ ಕಾಣಿಸಿಕೊಂಡರೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸುವುದು ಬಿಟ್ಟು ಪೂಜೆ ಮಾಡುವುದು, ಮಂತ್ರ ಹಾಕಿಸುವ ಮೂಢನಂಬಿಕೆಗಳತ್ತ ಕುರಿಗಾಹಿಗಳು ವಾಲುತ್ತಿದ್ದಾರೆ. ಹೀಗಾಗಿ ರೋಗ ಉಲ್ಬಣಿಸಿ ಕುರಿ-ಮೇಕೆಗಳು ಸಾಯುವ ಸಂಖ್ಯೆ ಹೆಚ್ಚುತ್ತದೆ. ಜೀವಂತ ಅಥವಾ ಸತ್ತ ಕುರಿ ಮರಕ್ಕೆ ನೇತು ಹಾಕುವುದರಿಂದ ರೋಗ ನಿವಾರಣೆ ಆಗುವುದಿಲ್ಲ ಎಂಬ ಮೌಢ್ಯತೆ ದೂರ ಮಾಡಲು ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ ವೈದ್ಯರು.

ಕುರಿ ಬಲಿಕೊಟ್ಟು ಗಿಡಕ್ಕೆ ನೇತು ಹಾಕುವುದು ಮೂಢನಂಬಿಕೆಯಾಗಿದೆ. ಕುರಿ ಮರಿ ಬಲಿ ಕೊಡುವುದರಿಂದ ರೋಗಗಳು ಬರುವುದಿಲ್ಲ ಎಂಬುದು ತಪ್ಪು ಕಲ್ಪನೆಯಾಗಿದೆ. ಎಲ್ಲ ರೋಗಗಳಿಗೂ ಚಿಕಿತ್ಸೆ ದೊರಕುತ್ತಿದ್ದು ಕುರಿಗಾಹಿಗಳು ಮೌಢ್ಯಕ್ಕೆ ಬಲಿಯಾಗದೆ ರೋಗ ಕಾಣಿಸಿಕೊಂಡ ಕುರಿಯನ್ನು ವೈದ್ಯರ ಹತ್ತಿರ ತಂದು ಚಿಕಿತ್ಸೆ ಕೊಡಿಸಬೇಕು.

ಡಾ. ಆನಂದ ದೇವರನಾವದಗಿ, ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ ಕುಷ್ಟಗಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಎನ್‌ಡಿಎಗೆ ಅಧಿಕಾರ ನಿಶ್ಚಿತ : ಅಶೋಕ್
ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು