ಶಿರಾಡಿ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಹೊಣೆ ಕೇಂದ್ರದ್ದು

KannadaprabhaNewsNetwork |  
Published : May 30, 2025, 12:03 AM IST
29ಎಚ್ಎಸ್ಎನ್10 : ಲೋಕಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿ ರಾಷ್ಟ್ರೀಯ ಹೆದ್ದಾರಿ ೭೫ಭೂ ಕುಸಿತದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಾಮಗಾರಿಯ ಬಗ್ಗೆ ಯೋಜನಾ ನಿರ್ದೇಶಕ ಪ್ರವೀಣ್ ಕುಮಾರ್ ವಿವರಿಸಿದರು. | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ 75ರ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇರವಾಗಿ ಕೇಂದ್ರಸರ್ಕಾರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾಮಗಾರಿ ಗುತ್ತಿಗೆ ನೀಡುವುದರಿಂದ ಹಿಡಿದು ಮೇಲ್ವಿಚಾರಣೆಯನ್ನು ಕೇಂದ್ರ ಸರ್ಕಾರವೇ ನಡೆಸುತ್ತಿದೆ. ಆದ್ದರಿಂದ, ಇಲ್ಲಿನ ಎಲ್ಲ ಅವಘಡಗಳಿಗೂ ಕೇಂದ್ರವೇ ಹೊಣೆ. ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸುವಂತೆ ಹಾಗೂ ವೇಗವಾಗಿ ಮುಗಿಸುವಂತೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬಹುದೇ ಹೊರತು ಮತ್ಯಾವ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯ ಹೊಣೆಯನ್ನು ಕೇಂದ್ರ ಸರ್ಕಾರ ಹೊರಬೇಕೇ ಹೊರತು ರಾಜ್ಯಸರ್ಕಾರದ ಮೇಲೆ ಹೇರುವುದು ಸರಿಯಲ್ಲ ಎಂದು ಲೋಕಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿ ಹೇಳಿದರು.

ಗುರುವಾರ ರಾಷ್ಟ್ರೀಯ ಹೆದ್ದಾರಿ 75ರ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇರವಾಗಿ ಕೇಂದ್ರಸರ್ಕಾರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾಮಗಾರಿ ಗುತ್ತಿಗೆ ನೀಡುವುದರಿಂದ ಹಿಡಿದು ಮೇಲ್ವಿಚಾರಣೆಯನ್ನು ಕೇಂದ್ರ ಸರ್ಕಾರವೇ ನಡೆಸುತ್ತಿದೆ. ಆದ್ದರಿಂದ, ಇಲ್ಲಿನ ಎಲ್ಲ ಅವಘಡಗಳಿಗೂ ಕೇಂದ್ರವೇ ಹೊಣೆ. ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸುವಂತೆ ಹಾಗೂ ವೇಗವಾಗಿ ಮುಗಿಸುವಂತೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬಹುದೇ ಹೊರತು ಮತ್ಯಾವ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.

6 ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ: ಕಳೆದ ಎರಡು ವರ್ಷಗಳ ಹಿಂದೆ ಹೆದ್ದಾರಿ ಪರಶೀಲಿಸಿದ ವೇಳೆ ಕಳಪೆ ಗುಣಮಟ್ಟದ ಬಗ್ಗೆ ಮಾತನಾಡಿದ್ದೆ. ಅಲ್ಲದೆ ವೇಗವಾಗಿ ಕಾಮಗಾರಿ ನಡೆಸುವ ಮೂಲಕ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸೂಚಿಸಿದ್ದೆ. ಈ ವೇಳೆ ಒಂದು ವರ್ಷದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರರು ಭರವಸೆ ನೀಡಿದ್ದರು. ಆದರೆ, ಎರಡು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನು ಮೂರು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರರು ನೀಡುತ್ತಿದ್ದಾರೆ. ಆದರೆ, ಇನ್ನೂ ಆರು ತಿಂಗಳಿನಲ್ಲಿ ಕಾಮಗಾರಿ ಮುಗಿಯುವುದು ನಿಶ್ಚಿತವಾಗಿದೆ. ಭೂ ಕುಸಿತಕ್ಕೆ ನೇರವಾಗಿ ಗುಡ್ಡಗಳನ್ನು ಕತ್ತರಿಸಿರುವುದೇ ಕಾರಣ ಎಂದರು.

ಮಂಗಳೂರು ಅಹಿತಕರ ಘಟನೆಯಲ್ಲಿ ಭಾಗಿಯಾದವರ ಬಂಧನಕ್ಕೆ ಈಗಾಗಲೇ ಪೊಲೀಸರು ಬಲೆ ಬೀಸಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲಿದೆ ಎಂದರು. ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿಗಳು ಪರಮಾಧಿಕಾರ ಹೊಂದಿರುತ್ತಾರೆ. ಜಲಾನಯನ ಇಲಾಖೆಯ ಎಂಜಿನಿಯರ್‌ಗಳ ವರ್ಗಾವಣೆ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ತಿಳಿದಿಲ್ಲ. ಬಿಜೆಪಿ ಉಚ್ಚಾಟಿತ ಶಾಸಕರಾದ ಸೋಮಶೇಖರ್ ಹಾಗೂ ಶಿವರಾಮ್‌ ಹೆಬ್ಬಾರ್ ಅವರು ಕಾಂಗ್ರೆಸ್ ಸೇರ್ಪಡೆ ವಿಚಾರ ಕೇಂದ್ರ ನಾಯಕರಿಗೆ ಬಿಟ್ಟಿದ್ದು ಎಂದರು.

ಹೆದ್ದಾರಿ ಪರಿಶೀಲನೆ ವೇಳೆ ಸಂಸದ ಶ್ರೇಯಸ್ ಪಟೇಲ್, ಶಾಸಕ ಸಿಮೆಂಟ್ ಮಂಜು, ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮ, ಉಪವಿಭಾಗಾಧಿಕಾರಿ ಶೃತಿ, ತಹಸೀಲ್ದಾರ್ ಅರವಿಂದ್, ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

* ಹೇಳಿಕೆ:ವಿರೋಧ ಪಕ್ಷದ ನಾಯಕರಿಗೆ ಕೆಲಸವಿಲ್ಲ. ರಾಜ್ಯ ಸರ್ಕಾರದ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳನ್ನು ಕಾರಣವಿಲ್ಲದೆ ಟೀಕಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿಗೆ ಕೇಂದ್ರಕ್ಕೆ ದೂರು ನೀಡಬೇಕೇ ಹೊರತು ರಾಜ್ಯ ಸರ್ಕಾರವನ್ನು ಹೊಣೆ ಮಾಡುವುದು ತಪ್ಪು. ಅನಾವಶ್ಯಕವಾಗಿ ರಾಜ್ಯದ ಜನರ ದಿಕ್ಕುತಪ್ಪಿಸುವ ಕೆಲಸ ಮಾಡಲಾಗುತ್ತಿದೆ.

- ಶಿವಲಿಂಗೇಗೌಡ, ಅರಸೀಕೆರೆ ಶಾಸಕ

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ