ಮುಂಡರಗಿ: ಶಿರಸಂಗಿ ಲಿಂಗರಾಜರು ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ಶಿಕ್ಷಣ, ಸಾಮಾಜಿಕ ಬದಲಾವಣೆಗಾಗಿ ದಾನ ಮಾಡಿದ ತ್ಯಾಗವೀರ. ಅವರ ಕಾರ್ಯ ಎಲ್ಲರೂ ಮೆಚ್ಚುವಂತದ್ದು ಎಂದು ಶಿರಹಟ್ಟಿ ಫಕ್ಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಕರ್ನಾಟಕ ಕಂಡ ಅಪರೂಪದ ಯೋಗಿ, ತ್ಯಾಗಿ ಎಂದರೆ ಅದು ಶಿರಸಂಗಿ ಲಿಂಗರಾಜರು. ಅವರ ಆಚಾರ ವಿಚಾರಗಳು ಇಡೀ ಸಮಾಜಕ್ಕೆ ಇಂದಿನ ಮಕ್ಕಳಿಗೆ ಮಾದರಿ. ಮಕ್ಕಳಿಗೆ ಲಿಂಗರಾಜರ ಜೀವನ ಚರಿತ್ರೆ ಹಾಗೂ ಬದುಕನ್ನು ತಿಳಿಸಿಕೊಡುವ ಜವಾಬ್ದಾರಿಯನ್ನು ತಂದೆ-ತಾಯಂದಿರು ತೆಗೆದುಕೊಳ್ಳಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಎಲಿವಾಳ್ ಮಾತನಾಡಿ, ಲಿಂಗರಾಜರ ಕೃಷಿ ಯೋಜನೆ ವ್ಯಾಪಾರ ಹಾಗೂ ಸಾಮಾಜಿಕ ಚಿಂತನೆ ಅಪರೂಪವಾದದ್ದು ಎಂದರು.ತ್ಯಾಗವೀರ ಶಿರಸಂಗಿ ಲಿಂಗರಾಜ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ಈರಪ್ಪ ಬಿಸ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಮಾಜದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಪ್ಪ ಪೂಜಾರ, ಹನುಮವ್ವ ಬೂದಿಹಾಳ, ಮಲ್ಲಮ್ಮ ಪಾಟೀಲ, ಜಯಂತ್ಯುತ್ಸವ ಸಮಿತಿ ಹೈತಾಪುರ ಅಧ್ಯಕ್ಷ ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕ ವಿ.ಎಸ್. ಪಾಟೀಲ ಸ್ವಾಗತಿಸಿದರು. ಪ್ರೊ. ಎಂ.ಜಿ. ಗಚ್ಚಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್. ಪಾಟೀಲ ನಿರೂಪಿಸಿದರು. ಎ. ಮಂಜುನಾಥ್ ವಂದಿಸಿದರು.