ರಾಮನೂರಿನಲ್ಲಿ ರಾಮತಾರಕ ಯಜ್ಞ ಸಂಪನ್ನ

KannadaprabhaNewsNetwork |  
Published : Jan 16, 2026, 01:15 AM IST
3.ರಾಮೋತ್ಸವ ಲೋಗೋ | Kannada Prabha

ಸಾರಾಂಶ

ರಾಮನಗರ: ಸಂಕ್ರಮಣ ಮತ್ತು ಉತ್ತರಾಯಣ ಪುಣ್ಯ ಕಾಲದ ಪರ್ವ ದಿನವಾದ ಮಕರ ಸಂಕ್ರಾಂತಿಯಂದು ರಾಮನೂರಿನಲ್ಲಿ ರಾಮತಾರಕ ಯಜ್ಞ ಸಂಪನ್ನಗೊಂಡಿತು.

ರಾಮನಗರ: ಸಂಕ್ರಮಣ ಮತ್ತು ಉತ್ತರಾಯಣ ಪುಣ್ಯ ಕಾಲದ ಪರ್ವ ದಿನವಾದ ಮಕರ ಸಂಕ್ರಾಂತಿಯಂದು ರಾಮನೂರಿನಲ್ಲಿ ರಾಮತಾರಕ ಯಜ್ಞ ಸಂಪನ್ನಗೊಂಡಿತು.

ರಾಮನಗರದ ಬನ್ನಿಮಂಟಪದಲ್ಲಿ ಬೆಳಗ್ಗೆ 7.30 ಗಂಟೆಗೆ ಯಾಗ ಸ್ಥಳದಲ್ಲಿ ಶೃಂಗೇರಿ ಮಠದ ರಾಜು ಶ್ರೀನಾಥ ಶರ್ಮಾ ನೇತೃತ್ವದಲ್ಲಿ 101 ವೈದಿಕರು ಗಂಗಾಪೂಜೆ, ಪುಣ್ಯಾಹುತಿ, ಗೋಪೂಜೆ, ಗಣಪತಿ ಹೋಮ ನೆರವೇರಿಸಿದ ಬಳಿಕ ಕಳಸ ಸ್ಥಾಪನೆ ಮಾಡಲಾಯಿತು.

ಶ್ರೀರಾಮಚಂದ್ರರ ಪ್ರತಿಷ್ಠಾಪನೆ ಪ್ರಧಾನ ಕಳಸ, ಸೀತಾದೇವಿಯ ಉಪ ಕಳಸಗಳು, ಲಕ್ಷ್ಮಣ, ಆಂಜನೇಯರೊಡಗೂಡಿ ಶ್ರೀರಾಮರು ಇರುವ ದೇವರ ವಿಗ್ರಹಗಳನ್ನಿರಿಸಿ ಪೂಜಿಸಲಾಯಿತು. ರಾಮದೇವರ ದೇವಾಲಯದಿಂದ ಶ್ರೀ ರಾಮದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಬನ್ನಿಮಂಟಪಕ್ಕೆ ತಂದಿರಿಸಿದ ನಂತರ ಯಜ್ಞ ಕಾರ್ಯ ಪ್ರಾರಂಭಗೊಂಡಿತು.

ಹೋಮ ಕುಂಡದಲ್ಲಿ 10ರಿಂದ 15 ವೈದಿಕರು ಹೋಮ ಹವನಗಳ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಯಜ್ಞ ಕುಂಡದಲ್ಲಿ 108 ವನಸ್ಪತಿ ಹೋಮ ದ್ರವ್ಯಗಳನ್ನು ಸಮರ್ಪಿಸಿದರು. ಮತ್ತೊಂದೆಡೆ ಉಳಿದ ವೈದಿಕರು ಲಕ್ಷಕ್ಕೂ ಅಧಿಕ ಶ್ರೀ ರಾಮತಾರಕ ಮಂತ್ರ ಶ್ಲೋಕಗಳನ್ನು ಏಕ ಕಾಲದಲ್ಲಿ ಪಠಣ ಮಾಡಿದರು.

ಮಧ್ಯಾಹ್ನ 1.30ಕ್ಕೆ ರಾಮತಾರಕ ಯಜ್ಞ ಪೂರ್ಣಾಹುತಿಯೊಂದಿಗೆ ಮುಕ್ತಾಯಗೊಂಡ ನಂತರ ಮಹಾಮಂಗಳಾರತಿ ನಡೆಯಿತು. ಯಜ್ಞದ ಮುಂಭಾಗ ಪ್ರತಿಷ್ಠಾಪಿಸಿದ್ದ ಶ್ರೀರಾಮಪ್ರಭು, ಸೀತಾಮಾತೆ, ಲಕ್ಷ್ಮಣ , ಆಂಜನೇಯ ಮೂರ್ತಿಗಳಿಗೆ ವಿವಿಧ ಫಲಪುಷ್ಟಗಳಿಂದ ಸಿಂಗರಿಸಿ ಪೂಜಿಸಲಾಯಿತು.

ಇದೇ ಮೊದಲ ಬಾರಿಗೆ ರಾಮನಗರದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಿದ್ದ ರಾಮತಾರಕ ಯಜ್ಞ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಅಭಯ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಅಗ್ರಹಾರದಲ್ಲಿರುವ ಶ್ರೀರಾಮ ದೇವರ ಉತ್ಸವ ಮೂರ್ತಿಯನ್ನು ರಾಮತಾರಕ ಯಜ್ಞ ಸ್ಥಳಕ್ಕೆ ತಂದು ನಂತರ ಮಹಾಮಂಗಳಾರತಿ ನಂತರ ಮೂಲಸ್ಥಾನಕ್ಕೆ ಕಳುಹಿಸಿಕೊಡಲಾಯಿತು. ರಾಮೋತ್ಸವದ ಸಾರಥ್ಯ ವಹಿಸಿರುವ ಶಾಸಕ ಇಕ್ಬಾಲ್‌ ಹುಸೇನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು, ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿಜಯ್‌ದೇವು ಮತ್ತಿತರರು ಭಾಗವಹಿಸಿ ಶ್ರೀರಾಮರ ಕೃಪೆಗೆ ಪಾತ್ರರಾದರು. ರಾಮತಾರಕ ಯಜ್ಞದ ಮೂಲಕ ಆರಂಭವಾದ ರಾಮೋತ್ಸವದ ಧಾರ್ಮಿಕ ಪೂಜಾ ವಿಧಿ ವಿಧಾನ ಕಾರ್ಯಗಳು ಯಶಸ್ವಿ ನೆರವೇರಿತು.

ಬಾಕ್ಸ್ .........

ಉತ್ತರಾಯಣ ಪುಣ್ಯ ಕಾಲದ ಪರ್ವ ದಿನ

ಸಂಕ್ರಮಣ ಮತ್ತು ಉತ್ತರಾಯಣ ಪುಣ್ಯ ಕಾಲದ ಪರ್ವ ದಿನವಾಗಿದೆ. ಭೀಷ್ಮಾಚಾರ್ಯರು 58 ದಿನಗಳ ಕಾಲ ಶಯನಾವಸ್ಥೆಯಲ್ಲಿ ಮಲಗಿದ್ದ ಪುಣ್ಯಕಾಲದಲ್ಲಿ ನಿಮ್ಮ ಹೆಸರಿನಲ್ಲಿ ವಿಶೇಷ ಅರ್ಚನೆ, ಆರಾಧನೆ ಮಾಡಲಾಗಿದೆ. ಶ್ರೀ ರಾಮ ಉನ್ನತವಾದ ಶರೀರದಲ್ಲಿ ಬಲವನ್ನು, ಜನ ಸೇವೆ ಮಾಡಲು ಶಕ್ತಿ ಸಾಮರ್ಥ್ಯವನ್ನು ಕರುಣಿಸಲಿ ಎಂದು ಪ್ರಾರ್ಥನೆ ಮಾಡಲಾಗಿದೆ. ವಿಶೇಷವಾಗಿ ಸುರ್ದಶನ ಯಜ್ಞ, ಲಲಿತಾ ಪರಮೇಶ್ವರಿ ಸಾಕ್ಷಾತ್ ದುರ್ಗೆಯ ಆರಾಧನೆ ಶ್ರೀಚಕ್ರ ಅರ್ಚನೆ ನೆರವೇರಿದೆ ಎಂದು ವೈದಿಕರು ಶಾಸಕ ಎಚ್.ಎ.ಇಕ್ಬಾಲ್‌ ಹುಸೇನ್ ಅವರಿಗೆ ವಿವರಿಸುವ ಮೂಲಕ ದೇವರಿಗೆ ಸಮರ್ಪಿಸಿದ್ದ ಹಣ್ಣು, ಹೂ, ಹಂಪಲುಗಳನ್ನು ನೀಡಿ ಆರ್ಶೀವಾದ ಮಾಡಿದರು.

ಬಾಕ್ಸ್‌.........

ಆಧ್ಯಾತ್ಮಿಕ ಉನ್ನತಿ, ಯಶಸ್ಸು ಸಿಗಲೆಂದು ಪ್ರಾರ್ಥನೆ: ಇಕ್ಬಾಲ್ ಹುಸೇನ್

ರಾಮನಗರ: ಪ್ರತಿಯೊಬ್ಬರ ಜೀವನದಲ್ಲಿ ಧರ್ಮಕ್ಕೆ ಅನುಗುಣವಾದ ಆಧ್ಯಾತ್ಮಿಕ ಉನ್ನತಿ, ಮೋಕ್ಷ, ಶಾಂತಿ, ಆರೋಗ್ಯ ಹಾಗೂ ಯಶಸ್ಸನ್ನು ಪ್ರಭುಶ್ರೀ ರಾಮನು ಕರುಣಿಸಲಿ ಎಂದು ಸಂಕಲ್ಪ ಮಾಡಿ ರಾಮತಾರಕ ಯಜ್ಞ ನೆರವೇರಿಸಲಾಗಿದೆ ಎಂದು ಶಾಸಕ ಇಕ್ಬಾಲ್‌ ಹುಸೇನ್ ಪ್ರತಿಕ್ರಿಯಿಸಿದರು.

ನಗರದ ಬನ್ನಿಮಂಟಪದಲ್ಲಿ ಗುರುವಾರ ರಾಮತಾರಕ ಯಜ್ಞ ಕಾರ್ಯ ನೆರವೇರಿದ ನಂತರ ಮಾತನಾಡಿದ ಇಕ್ಬಾಲ್‌ಹುಸೇನ್ , ಲೋಕ ಕಲ್ಯಾಣಾರ್ಥ ಹಾಗೂ ವಿಘ್ನಗಳನ್ನು ನಿವಾರಿಸಿ ಶ್ರೀ ರಾಮೋತ್ಸವಕ್ಕೆ ಶಕ್ತಿ ತುಂಬುವಂತೆ ರಾಮತಾರಕ ಯಜ್ಞದ ವೇಳೆ ಶ್ರೀರಾಮ ಪ್ರಭು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.

ತ್ರೇತಾಯುಗದಲ್ಲಿ ಶ್ರೀ ರಾಮನು ವನವಾಸದ ದಿನಗಳಲ್ಲಿ ರಾಮದೇವರ ಬೆಟ್ಟದಲ್ಲಿ ವಾಸ್ತವ್ಯ ಮಾಡಿದ್ದರು. ಜೊತೆಗೆ ಕಾಕಾಸುರನನ್ನು ವಧೆ ಸಹ ಮಾಡಿದ ಐತಿಹ್ಯವಿದೆ. ಇದು ರಾಮ ಪಾದಸ್ಪರ್ಶ ಮಾಡಿದ ಪುಣ್ಯ ಭೂಮಿ. ಈ ಮಣ್ಣಿನ ಗುಣ , ಆದರ್ಶ ಹಾಗೂ ಧಾರ್ಮಿಕ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಆಗ ಮಾತ್ರ ಹಿಂದೂ ಧರ್ಮದ ಸಂಪತ್ತನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ಆ ಕೆಲಸವನ್ನು ಶಾಸಕನಾಗಿ ನಾನು ಮಾಡುತ್ತಿದ್ದೇನೆ ಎಂದರು.

ಇಲ್ಲಿ ಹಿಂದೂ-ಮುಸ್ಲಿಂ ಎಂಬ ಪ್ರಶ್ನೆ ಬರುವುದಿಲ್ಲ. ಜಗತ್ತಿನಲ್ಲಿ ದೇವರೊಬ್ಬ ನಾಮ ಹಲವು. ದೇವರನ್ನು ರಾಮ - ರಹೀಂನ ಹೆಸರಿನಲ್ಲಿಯೂ ಕರೆಯುತ್ತಾರೆ. ಎಲ್ಲ ಧರ್ಮಗಳು ಮತ್ತು ಜನರನ್ನು ಗೌರವಿಸಬೇಕು. ಎಲ್ಲರಿಗೂ ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು ಒಂದೇಯಾಗಿದೆ. ಮನುಷ್ಯನ ದೇಹದಲ್ಲಿ ಹರಿಯುತ್ತಿರುವುದು ಕೆಂಪು ರಕ್ತವೂ ಒಂದೇ ಆಗಿದೆ. ಜಾತಿ - ಧರ್ಮಗಳ ಹೆಸರಿನಲ್ಲಿ ಭೇದ ಮಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಎಲ್ಲಾ ವರ್ಗದ ಜನರಲ್ಲೂ ಮತ ನೀಡಿ ಎಂದು ಹೇಗೆ ಮನವಿ ಮಾಡುತ್ತೇವೆಯೋ ಅದೇ ರೀತಿಯಲ್ಲಿಯೇ ಸೇವೆ ಮಾಡಬೇಕಿದೆ. ಅದರಂತೆಯೆ ಎಲ್ಲ ಜಾತಿ ಧರ್ಮಗಳನ್ನು ಹಾಗೂ ಜನರನ್ನು ಗೌರವಿಸುವ ಮೂಲಕ ಸರ್ವ ಧರ್ಮಗಳ ಸಾಮರಸ್ಯ ಕಾಪಾಡುವ ಕೆಲಸವನ್ನು ಶಾಸಕನಾಗಿ ಮಾಡುತ್ತಿದ್ದೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಹೆಚ್.ರಾಜು, ಬಮೂಲ್ ನಿರ್ದೇಶಕ ಹರೀಶ್‌ಕುಮಾರ್, ನಗರಸಭೆ ಸದಸ್ಯರಾದ ದೌಲತ್ ಷರೀಪ್, ನಾಗಮ್ಮ, ಬೈರೇಗೌಡ ಮುಖಂಡರಾದ ವಾಸು, ಷರಕ್ಷರದೇವ, ವಸಂತ ಸೇರಿದಂತೆ ಶ್ರೀ ರಾಮದೇವರ ಸೇವಾ ಸಮಿತಿ ಅಧ್ಯಕ್ಷ ನರಸಿಂಹಯ್ಯ ಸೇರಿದಂತೆ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

15ಕೆಆರ್ ಎಂಎನ್ 3,4,5.ಜೆಪಿಜಿ

3.ರಾಮೋತ್ಸವ ಲೋಗೋ

4.ವೈದಿಯಕರು ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಆಶೀರ್ವಾದ ಮಾಡಿದರು.

5.ರಾಮನಗರದ ಬನ್ನಿಮಂಟಪದಲ್ಲಿ ವೈದಿಕರು ರಾಮತಾರಕ ಯಜ್ಞ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಯೂಟದಲ್ಲಿ ಶುಚಿತ್ವಕ್ಕೆ ಆದ್ಯತೆ ಇರಲಿ: ಡಾ. ಈಶ್ವರ ಉಳ್ಳಾಗಡ್ಡಿ
ಶಿರಸಂಗಿ ಲಿಂಗರಾಜರ ಜೀವನ ಮಹಾಕಾವ್ಯಕ್ಕಿಂತಲೂ ಮಿಗಿಲು: ಡಾ. ವಿ.ಕೆ. ದ್ಯಾಮನಗೌಡ್ರ