ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಫೆ. 18ರಿಂದ 23ರ ವರೆಗೆ ನಡೆಯಲಿದೆ ಎಂದು ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮ: ಫೆ. 18 ರಂದು ಕೂಷ್ಮಾಂಡ ಹವನ, ಬ್ರಹ್ಮಣಸ್ಪತಿಸೂಕ್ತ ಹವನ, ಒಂದು ಲಕ್ಷ ಗಾಯತ್ರಿ ಜಪ, ದಶಾಂಶ ಹವನ, ಐದು ವೇದಗಳ ಪಾರಾಯಣ ಹಾಗೂ ಮಹಾರುದ್ರ ಜಪ ಪ್ರಾರಂಭಿಸಲಾಗುತ್ತದೆ. ಫೆ. 19ರಂದು ಮಹಾರುದ್ರ ಹವನ, ಹವನ, ಅಕ್ಷರಾಯುತ (3.20 ಲಕ್ಷ) ಶ್ರೀ ಲಕ್ಷ್ಮೀನೃಸಿಂಹ ಜಪ ಪ್ರಾರಂಭವಾಗಲಿದೆ. ಫೆ. 21ರಂದು ಸಂನ್ಯಾಸಗ್ರಹಣ ಸಂಕಲ್ಪ, ಶತಚಂಡಿ ಹವನ, ಪುರುಷಸೂಕ್ತ ಹವನ, ವಿರಜಾ ಹೋಮ, ಶ್ರೀ ಲಕ್ಷ್ಮೀನೃಸಿಂಹ ಜಪ, ಫೆ. 22 ರಂದು ಜಲಶಯಗಮನ, ಸಾವಿತ್ರೀ ಪ್ರವೇಶ, ಪ್ರೇಶೋಚ್ಚಾರಣೆ, ಕಾಷಾಯವಸ್ತ್ರ ಧಾರಣೆ, ಪ್ರಣವ ಮಹಾವಾಕ್ಯೋಪದೇಶ, ನಾಮಕರಣ, ಪರ್ಯಂಕಶೌಚ, ಯೋಗಪಟ್ಟ, ಬ್ರಹ್ಮವಿದಾಶೀರ್ವಚನ, ಅಕ್ಷರಾಯುತ (3.2೦ ಲಕ್ಷ) ಶ್ರೀಲಕ್ಷ್ಮೀನೃಸಿಂಹಮಂತ್ರ ಹವನ, ಪೂರ್ಣಾಹುತಿ, ತೀರ್ಥ-ಪ್ರಸಾದ, ಮಂತ್ರಾಕ್ಷತೆ ನೀಡಲಾಗುತ್ತದೆ ಎಂದರು.
ಸಭಾ ಕಾರ್ಯಕ್ರಮ: ಮಠದ ಸುಧರ್ಮಾ ಸಭಾಭವನದಲ್ಲಿ ಫೆ. 18ರಂದು ಮಧ್ಯಾಹ್ನ 3.30 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀಗಳ ಪೀಠಾರೋಹಣದಿಂದ ಈ ವರೆಗಿನ ಪ್ರಮುಖ ಸನ್ನಿವೇಶಗಳ ಚಿತ್ರ ಸಂಪುಟ ಸ್ವರ್ಣಶ್ರೀ ಗ್ರಂಥ ಲೋಕಾರ್ಪಣೆಗೊಳ್ಳಲಿದೆ. ಸಚಿವ ಮಂಕಾಳ ವೈದ್ಯ, ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಆರ್.ವಿ. ದೇಶಪಾಂಡೆ, ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ವಿಧಾನಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿ, ಗಣಪತಿ ಉಳ್ವೇಕರ ಪಾಲ್ಗೊಳ್ಳಲಿದ್ದಾರೆ ಎಂದರು.ಫೆ. 21ರಂದು ಮಧ್ಯಾಹ್ನ 3 ಗಂಟೆಗೆ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಚಾಮರಾಜಪೇಟೆಯ ಕೂಡ್ಲಿ ಶೃಂಗೇರಿ ಮಠದ ಶ್ರೀ ವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ, ಶಿರಳಗಿಯ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ, ಹೊಳೆನರಸೀಪುರದ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬ್ರಹ್ಮಾನಂದ ಸ್ವಾಮೀಜಿ ನಿಧಿಧ್ಯಾಸನ ಕುರಿತು ಪ್ರವಚನ ನೀಡಲಿದ್ದಾರೆ. ಆಲೋಕಯಾಂಬ ಲಲಿತೇ ಗ್ರಂಥವನ್ನು ಪ್ರಕಾಶಾನಂದೇಂದ್ರ ಸ್ವಾಮೀಜಿ ಲೋಕಾರ್ಪಣೆ ಮಾಡಲಿದ್ದಾರೆ. ಯತಿಧರ್ಮ ಮತ್ತು ಲೋಕಧರ್ಮ ಕುರಿತು ಮೈಸೂರಿನ ಭಾರತೀ ಯೋಗಧಾಮದ ಯೋಗಾಚಾರ್ಯ ಕೆ.ಎಲ್. ಶಂಕರನಾರಾಯಣ ಜೋಯಿಸ್ ಉಪನ್ಯಾಸ ನೀಡಲಿದ್ದಾರೆ ಎಂದರು.
ಆರ್.ಎಸ್. ಹೆಗಡೆ ಭೈರುಂಬೆ ಮಾತನಾಡಿ, ಫೆ. 18ರಿಂದ 22ರ ವರೆಗೆ ಪ್ರತಿನಿತ್ಯ 5.30 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಲಾಗಿದೆ. ಫೆ. 18ರಂದು ನಾರಾಯಣ ದಾಸರ ಕೀರ್ತನೆ, ಫೆ. 19ರಂದು ವಿಶೇಷ ಭಜನಾ ತಂಡಗಳಿಂದ ಭಜನೆ, ಈಶ್ವರ ದಾಸರ ಕೀರ್ತನೆ, ಫೆ. 20ರಂದು ವಿ. ಶಂಕರ ಭಟ್ಟ ಉಂಚಳ್ಳಿಯವರ ಕೀರ್ತನೆ, ಫೆ. 21ರಂದು 5.30ರಿಂದ ಭಕ್ತಿ ಸಂಗೀತ ನಡೆಯಲಿದೆ. ಗಿನ್ನೆಸ್ ದಾಖಲೆ ಮಾಡಿದ ಗಾಯಕ ಪ್ರಸನ್ನ ಗುಡಿ ಭಕ್ತಿ ಸಂಗೀತ ಪ್ರಸ್ತುತಪಡಿಸಲಿದ್ದಾರೆ. ವಯೋಲಿನ್‌ನಲ್ಲಿ ಶಂಕರ ಕಂಬಾಡಿ ಧಾರವಾಡ, ತಬಲಾದಲ್ಲಿ ಗಣೇಶ ಗುಂಡ್ಕಲ್, ಹಾರ್ಮೋನಿಯಂನಲ್ಲಿ ಪ್ರಕಾಶ ಹೆಗಡೆ ಯಡಳ್ಳಿ, ತಾಳದಲ್ಲಿ ಅನಂತಮೂರ್ತಿ, ಕೊಳಲಿನಲ್ಲಿ ಸಮರ್ಥ ಹೆಗಡೆ ತಂಗಾರಮನೆ, ಪಕ್ಕವಾದ್ಯದಲ್ಲಿ ನಾಗೇಂದ್ರ ವೈದ್ಯ, ರಿದಂಪ್ಯಾಡ್‌ನಲ್ಲಿ ಕಿರಣ ಹೆಗಡೆ ಕಾನಗೋಡ, ತಂಬೂರದಲ್ಲಿ ಶಿಲ್ಪಾ ಮತ್ತು ಕಾವ್ಯಾ ಭಂಡಾರಿ ಸಾಥ್ ನೀಡಲಿದ್ದಾರೆ ಎಂದರು.
ನೂತನ ಯತಿಗಳಿಗೆ ಸ್ವಾಗತ:ಫೆ. 13ರಂದು ನೂತನ ಯತಿಗಳನ್ನು ಯಲ್ಲಾಪುರ ಭಾಗದ ಸೀಮೆಯವರು ಭವ್ಯ ಮೆರವಣಿಗೆ ಮೂಲಕ ಮಠಕ್ಕೆ ಕರೆತರಲಿದ್ದಾರೆ. ಮಧ್ಯಾಹ್ನ 4.30ಕ್ಕೆ ಮೆರವಣಿಗೆ ಮಠದ ಸಮೀಪ ಆಗಮಿಸಲಿದೆ. ಅಲ್ಲಿ ಶಿರಸಿ ಭಾಗದವರು ಸ್ವಾಗತಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಶಿಷ್ಯರು ಪಾಲ್ಗೊಳ್ಳಬೇಕು ಎಂದು ವಿ.ಎನ್. ಹೆಗಡೆ ಬೊಮ್ನಳ್ಳಿ ವಿನಂತಿಸಿದರು.