ಶಿವಕುಮಾರ ಕುಷ್ಟಗಿ
ತಮ್ಮ ಹಠಯೋಗದ ಸಾಧನೆಯ ಶಕ್ತಿಯ ಬಲದ ಮೇಲೆ ಬರೋಬ್ಬರಿ 33 ದಿನಗಳ ಕಾಲ (ಒಟ್ಟು 775 ಗಂಟೆಗಳು) ಅನ್ನ, ನೀರು, ಗಾಳಿ ಮತ್ತು ಬೆಳಕು ಇಲ್ಲದ ಕಲ್ಲಿನ ಮಂಟಪದೊಳಗೆ ಸ್ವಾಮೀಜಿ ಈ ಕಠಿಣ ಯೋಗ ಸಮಾಧಿಗೆ ಕುಳಿತಿರುವುದು ಜಿಲ್ಲಾದ್ಯಂತ ಭಕ್ತರಲ್ಲಿ ವಿಸ್ಮಯ ಹಾಗೂ ಭಕ್ತಿಯ ಪರಾಕಾಷ್ಠೆಯನ್ನು ಉಂಟುಮಾಡಿದೆ.
ಜೂ. 3ರಂದು ಪ್ರಾರಂಭ: ಜೂ. 3ರಂದು ಆರಂಭವಾಗಿರುವ ಶಿವಯೋಗ ಸಮಾಧಿ ಪ್ರಕ್ರಿಯೆ ಅತ್ಯಂತ ರೋಮಾಂಚನಕಾರಿಯಾಗಿದೆ. ಸ್ವಾಮೀಜಿ ಅವರು ಕಲ್ಲಿನ ಮಂಟಪದೊಳಗೆ ಪ್ರವೇಶಿಸಿ ಪದ್ಮಾಸನಸ್ಥರಾಗಿ ಕುಳಿತುಕೊಳ್ಳುತ್ತಿದ್ದಂತೆ, ಗಾಳಿ, ಬೆಳಕು ಕಿಂಚಿತ್ತೂ ಆಡದಂತೆ ಮಂಟಪದ ಮುಖ್ಯದ್ವಾರಕ್ಕೆ ಕಲ್ಲುಗಳನ್ನಿಟ್ಟು ಸಿಮೆಂಟ್ ಹಾಕಿ ಸಂಪೂರ್ಣವಾಗಿ ಮುಚ್ಚಲಾಗಿದೆ.ವೈಜ್ಞಾನಿಕವಾಗಿ ಮನುಷ್ಯನಿಗೆ ಆಮ್ಲಜನಕ ಮತ್ತು ನೀರು ಅತ್ಯಗತ್ಯ. ಆದರೆ, ಹಠಯೋಗ ಹಾಗೂ ಕಠಿಣ ತಪಸ್ಸಿನ ಮೂಲಕ ಶ್ವಾಸ ನಿಯಂತ್ರಣ (ಪ್ರಾಣಾಯಾಮ) ಸಿದ್ಧಿಸಿಕೊಂಡಿರುವ ಶ್ರೀಗಳು, ಒಂದು ತಿಂಗಳಿಗೂ ಹೆಚ್ಚು ಕಾಲ ಯಾವುದೇ ಆಹಾರ- ನೀರನ್ನು ಸೇವಿಸದೆ ಈ ಸ್ಥಿತಿಯಲ್ಲಿ ಇರಲಿದ್ದಾರಂತೆ.
ಶ್ರೀಗಳ ಈ ಅಪರೂಪದ ಮತ್ತು ಕಠಿಣ ಯೋಗ ಸಾಧನೆಯಿಂದಾಗಿ ಜಿಲ್ಲೆಯ ಜನರೇ ನಮ್ಮ ಗ್ರಾಮದತ್ತ ಧಾವಿಸುವಂತಾಗಿದೆ. ಶ್ರೀಗಳ 33 ದಿನಗಳ ಸಂಕಲ್ಪ ಹಠ ಯೋಗ ನಡೆಯುವ ವರೆಗೂ ನಿರಂತರ ಪೂಜೆ ಕಾರ್ಯಗಳು ಜರುಗಲಿವೆ ಎಂದು ಗ್ರಾಮದ ಹಿರಿಯರಾದ ಯಲ್ಲಪ್ಪ ಮಜ್ಜಿಗುಡ್ಡ ತಿಳಿಸಿದರು.
33 ದಿನಗಳ ಸಂಕಲ್ಪ: ಶ್ರೀಗಳು ಸಮಾಧಿಯಾಗಿರುವ ಈ 33 ದಿನಗಳ ಕಾಲವೂ ಮಠದ ಆವರಣದಲ್ಲಿ ನಿರಂತರವಾಗಿ ಧಾರ್ಮಿಕ ಪುರಾಣ ಪ್ರವಚನಗಳು ಹಾಗೂ ಭಜನಾ ಕಾರ್ಯಕ್ರಮಗಳು ಅಹೋರಾತ್ರಿ ಜರುಗುತ್ತಿವೆ. ಹಠಯೋಗದ ಶಕ್ತಿಯಿಂದ ಇಂಥ ಅಸಾಧ್ಯವಾದ ಯೋಗ ಸ್ಥಿತಿಯನ್ನು ತಲುಪಿರುವ ತಮ್ಮ ಆರಾಧ್ಯ ದೈವ, ಲೋಕದ ಕಲ್ಯಾಣದ 33 ದಿನಗಳ ಸಂಕಲ್ಪವನ್ನು ಮುಗಿಸಿ ಭಕ್ತರಿಗೆ ತಮ್ಮ ಪವಿತ್ರ ದರ್ಶನ ನೀಡುತ್ತಾರೆ ಎಂದು ಗ್ರಾಮಸ್ಥ ಮಂಜು ಮಾಗಡಿ ತಿಳಿಸಿದರು.