- ಶಿವಾಜಿಯ ಸೇನಾ ಚಾಕಚಕ್ಯತೆ ಇತರೆ ರಾಜರಿಗೂ ಮಾದರಿ । ಶಿವಾಜಿ ಜಯಂತಿಯಂದು ಗುಣಗಾನ
ಕನ್ನಡಪ್ರಭ ವಾರ್ತೆ ಚಾಮರಾಜನಗರ
‘ಭಾರತೀಯ ಇತಿಹಾಸದಲ್ಲಿ ಶಿವಾಜಿ ಮಹಾರಾಜರ ಶ್ರೇಷ್ಠ ಆದರ್ಶ ವ್ಯಕ್ತಿತ್ವ, ನಾಯಕತ್ವ ಗುಣ, ಸ್ವರಾಜ್ಯ ಕಲ್ಪನೆ, ಸ್ವಾಭಿಮಾನಿ ರಾಷ್ಟ್ರ ಕಲ್ಪನೆ ಹಾಗೂ ಧಾರ್ಮಿಕ ಸಹಿಷ್ಣುತೆ ಇಂದಿಗೂ ಸ್ಮರಣೀಯವಾಗಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಹೇಳಿದರು.ನಗರದ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿಯವರ ೩೯೯ನೇ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಹಾರಾಷ್ಟ್ರದ ಶಿವನೇರಿ ದುರ್ಗದಲ್ಲಿ ೧೬೨೭ರಲ್ಲಿ ಜನಿಸಿದ ಶಿವಾಜಿ ಅವರು ಬಾಲ್ಯದಲ್ಲಿ ತಾಯಿ ಜೀಜಾ ಬಾಯಿ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ತಾಯಿಯವರು ಹೇಳುತ್ತಿದ್ದ ರಾಮಾಯಣ, ಮಹಾಭಾರತ ಪರಂಪರೆಯ ಇತಿಹಾಸವನ್ನು ಅರ್ಥೈಸಿಕೊಂಡು ಸದೃಢ ಸ್ವರಾಜ್ಯ ಕಟ್ಟಲು ಮುಂದಾದರು. ಅವರ ಧೈರ್ಯ, ಸಾಹಸ, ಹೋರಾಟ ಗುಣ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಅವರು ಮಾತನಾಡಿ ಬಾಲ್ಯದಲ್ಲಿಯೇ ಹೋರಾಟ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಶಿವಾಜಿ ಮಹಾರಾಜರು ಒಬ್ಬ ಆದರ್ಶ ರಾಜ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದಾರೆ. ಅವರ ಧೈರ್ಯ, ಶೌರ್ಯ, ವೀರತ್ವ ಹಾಗೂ ಮುಂಚೂಣಿ ನಾಯಕತ್ವ ಗುಣಗಳು ಚಿರಸ್ಥಾಯಿಯಾಗಿವೆ. ಈ ದೇಶಕ್ಕೆ, ನಾಡಿಗೆ ಅಪಾರ ಕೊಡುಗೆ ನೀಡಿರುವ ಶಿವಾಜಿ ಮಹಾರಾಜರ ಆದರ್ಶಗಳನ್ನು ಎಲ್ಲರು ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜು, ನಗರದ ಪೊಲೀಸ್ ವೃತ್ತ ನಿರೀಕ್ಷಕ ಜಗದೀಶ್, ಸಮುದಾಯದ ಮುಖಂಡರಾದ ಚಂದ್ರರಾವ್, ಶ್ರೀನಿವಾಸ್, ಮಮತಾ ಬಾಯಿ, ಲೋಕೇಶ್ ರಾವ್, ಬಾಬು ರಾವ್, ಅಭಿರಾಮ್, ಶಿವಕುಮಾರ್, ಅನಿತಾ ಬಾಯಿ, ಎಲ್. ಸುರೇಶ್, ಇತರರು ಇದೇ ಸಂದರ್ಭದಲ್ಲಿ ಇದ್ದರು.
19ಸಿಎಚ್ಎನ್14
Shivaji is a great personality, an inspiration even today: Jaware Gowda