ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ: ಡಿಕೆಶಿ

KannadaprabhaNewsNetwork |  
Published : Jan 12, 2026, 03:00 AM IST
ಕರಾವಳಿ ಪ್ರವಾಸೋದ್ಯಮ ಸಮಾವೇಶ ಉದ್ಘಾಟಿಸುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್‌. | Kannada Prabha

ಸಾರಾಂಶ

ಖಾಸಗಿ ಹೊಟೇಲ್‌ನಲ್ಲಿ ಶನಿವಾರ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರವಾಸೋದ್ಯಮ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು

ಮಂಗಳೂರು: ರಾಜ್ಯ ಸರ್ಕಾರವು ಕರಾವಳಿ- ಮಲೆನಾಡು ಜಿಲ್ಲೆಗಳಿಗೆ ಪೂರಕವಾಗುವ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರವಾಸೋದ್ಯಮ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ 300 ಕಿಮೀ ಉದ್ದದ, ಸಂಪದ್ಭರಿತ ಕರಾವಳಿ ತೀರ ಪ್ರದೇಶವಿದ್ದರೂ ಹಲವು ಕಾರಣಗಳಿಂದ ಪ್ರವಾಸೋದ್ಯಮದಲ್ಲಿ ಹಿಂದುಳಿದಿದೆ. ಇದೀಗ ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಕಾನೂನು ಅಡೆತಡೆಗಳನ್ನು ನಿವಾರಿಸುವ ಉದ್ದೇಶದಿಂದ ಹೂಡಿಕೆದಾರರು, ಉನ್ನತ ಅಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದ ಬಳಿಕ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಿ ಕ್ಯಾಬಿನೆಟ್‌ಗೆ ತರುವ ಕೆಲಸ ಮಾಡಲಿದ್ದೇವೆ ಎಂದು ಡಿಕೆಶಿ ತಿಳಿಸಿದರು.ಕರಾವಳಿ ಎಂದರೆ ಸೌಂದರ್ಯ, ಜ್ಞಾನ, ಸಂಪತ್ತನ್ನೊಳಗೊಂಡ ಪ್ರವಾಸಿಗರ ಸ್ವರ್ಗ. ಇಲ್ಲಿನ ಹಿರಿಯರು ಸಂಪತ್ತಿನ ಜತೆಗೆ ರಾಷ್ಟ್ರಕ್ಕೆ ಹಲವು ಬ್ಯಾಂಕ್‌ಗಳ ಕೊಡುಗೆ ನೀಡಿದ್ದಾರೆ. ಈ ಭಾಗವು ಶಿಕ್ಷಣದ ಹಬ್ ಆಗಿ ಸಶಕ್ತ ಮಾನವ ಸಂಪನ್ಮೂಲ ತಯಾರಿಯಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲೂ ಇಂತಹ ವ್ಯವಸ್ಥೆ ಇಲ್ಲ. ಕರಾವಳಿ- ಮಲೆನಾಡಿನ ಪ್ರಕೃತಿ ಸೌಂದರ್ಯ ಗೋವಾ ರಾಜ್ಯಕ್ಕೆ ಕಡಿಮೆಯಿಲ್ಲ. ಹಾಗಿದ್ದರೂ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಎಲ್ಲೋ ಎಡವಿದ್ದೇವೆ. ಈ ಅಡೆತಡೆಗಳನ್ನು ನಿವಾರಿಸಿ ಹೂಡಿಕೆದಾರರನ್ನು ಆಕರ್ಷಣೆ ಮಾಡಬೇಕಾದರೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಅಗತ್ಯವಿದೆ. ಅದನ್ನು ಮಂಗಳೂರಿನಿಂದಲೇ ಚರ್ಚಿಸಿ ಆರಂಭಿಸಲಾಗುವುದು, ಅದಕ್ಕಾಗಿ ಈ ಮಹತ್ವದ ಸಮಾವೇಶ ಏರ್ಪಡಿಸಲಾಗಿದೆ ಎಂದರು.

ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಪ್ರವಾಸೋದ್ಯಮ ಎನ್ನುವುದು ಹೂಡಿಕೆ. ಕರಾವಳಿಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅತ್ಯುತ್ತಮ ಪ್ರದೇಶಗಳಿದ್ದು, ಕೈಗಾರಿಕೆಗಳ ಮಾದರಿಯಲ್ಲಿ ಇವುಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಆಗಬೇಕಿದೆ. ಕೈಗಾರಿಕೆಗಳಿಗೆ ಕೆಐಎಡಿಬಿ ಮೂಲಕ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಮೂಲ ಸೌಕರ್ಯ ಒದಗಿಸುವಂತೆ ಪ್ರವಾಸೋದ್ಯಮ ಅಭಿವೃದ್ಧಿಗೂ ಭೂಸ್ವಾಧೀನ ಮಾಡಿದರೆ ಹೂಡಿಕೆ ಮಾಡಲು ಸಾಕಷ್ಟು ಮಂದಿ ಸಿದ್ಧರಿದ್ದಾರೆ. ಈ ನಿಟ್ಟಿನಲ್ಲಿ ಸಮಗ್ರ ನಿರ್ಧಾರಕ್ಕೆ ಬರಬೇಕಾಗಿದೆ ಎಂದು ಸಲಹೆ ನೀಡಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕರಾವಳಿ ಪ್ರವಾಸೋದ್ಯಮದಲ್ಲಿ ಮಂಗಳೂರು, ಉಡುಪಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಆದರೆ ಉತ್ತರ ಕನ್ನಡ ಹಿಂದುಳಿದಿದೆ. ರಾಜ್ಯದಲ್ಲೇ ಶೇ.80ರಷ್ಟು ಹಸಿರು ಪ್ರದೇಶ ಇರುವ ಜಿಲ್ಲೆ ರಾಜ್ಯದಲ್ಲೇ ಬೇರೆ ಇಲ್ಲ. ಪ್ರಕತಿಗೆ ಪೂರಕವಾಗಿ, ಉದ್ಯೋಗ ಸೃಷ್ಟಿಯ ಯೋಜನೆ ಬರಬೇಕಿದೆ ಎಂದರು.ಶಾಸಕ ಸುನಿಲ್ ಕುಮಾರ್ ಮಾತನಾಡಿ, ಟೆಂಪಲ್, ಇಕೋ, ಬೀಚ್ ಪ್ರವಾಸೋದ್ಯಮ ಅಡಿಪಾಯವಾಗಿರಿಸಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾಗಿದೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಕೆ.ವಿ. ತಿಲೋಕ ಚಂದ್ರ ಅವರು ಕರಾವಳಿ ಪ್ರವಾಸೋದ್ಯಮದ ರೂಪುರೇಷೆಗಳನ್ನು ವಿವರಿಸಿದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ, ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಯಶಪಾಲ್ ಸುವರ್ಣ, ಸುರೇಶ್ ಗುರ್ಮೆ, ಕಿಶೋರ್ ಕುಮಾರ್, ಕಿರಣ್ ಕೊಡ್ಗಿ, ಸತೀಶ್, ಐವನ್ ಡಿಸೋಜ, ರಾಜೇಗೌಡ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾದ ಎಂ.ಎ. ಗಫೂರ್, ಶಾಲೆಟ್ ಪಿಂಟೊ ಮತ್ತಿತರರು ಇದ್ದರು. ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಅಕ್ರಮ್ ಪಾಷಾ ಸ್ವಾಗತಿಸಿದರು.

ಕೆಲ ದಿನಗಳ ಹಿಂದೆ ನಾನು “ಮಂಗಳೂರು ರಾತ್ರಿ 7-8 ಗಂಟೆಗೇ ಡೆಡ್‌ ಸಿಟಿಯಾಗುತ್ತದೆ” ಎಂದು ಹೇಳಿದ್ದೆ. ಈ ಕಾರಣದಿಂದಲಾದರೂ ಈ ಭಾಗಕ್ಕೆ ಛಲ ಮೂಡಿ ಏಳಿಗೆಗೆ ಕಾರಣವಾಗಲಿ ಎಂಬ ಕಾರಣಕ್ಕೆ ಈ ಟೀಕೆ ಮಾಡಿದ್ದೆ ಎಂದು ಹೇಳಿದ ಡಿ.ಕೆ.ಶಿವಕುಮಾರ್‌, ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಆದರೆ ಸಿಕ್ಕಿದ ಅವಕಾಶದಲ್ಲಿ ಮಾಡಿದ ಕಾರ್ಯಗಳು ಮಾತ್ರ ಉಳಿಯುತ್ತವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಕಾರ್ಯಕ್ಕೆ ಕೈಹಾಕಿದ್ದೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ